ADVERTISEMENT

ಕೋವಿಡ್‌ ತಂದ ಸಂಕಷ್ಟ: ಕ್ರೀಡಾಪಟುವಿನಿಂದ ಮಾಸ್ಕ್‌ ಮಾರಾಟ

ಮಾಸ್ಟರ್ಸ್‌ ಅಥ್ಲೆಟಿಕ್ಸ್‌ನಲ್ಲಿ ಜಿಲ್ಲೆ ಪ್ರತಿನಿಧಿಸಿದ್ದ ಕುಮಾರ್‌

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2020, 19:30 IST
Last Updated 30 ಅಕ್ಟೋಬರ್ 2020, 19:30 IST
ಪದಕದೊಂದಿಗೆ ಕ್ರೀಡಾಪಟು ಅನಿಲ್‌ ಕುಮಾರ್‌
ಪದಕದೊಂದಿಗೆ ಕ್ರೀಡಾಪಟು ಅನಿಲ್‌ ಕುಮಾರ್‌   

ಹಾಸನ: ಕೋವಿಡ್‌ 19 ತಂದ ಆರ್ಥಿಕ ಸಂಕಷ್ಟದಿಂದಾಗಿ ಹಿರಿಯ ರಾಷ್ಟ್ರೀಯ ಕ್ರೀಡಾಪಟು ರಸ್ತೆ ಬದಿ ಮಾಸ್ಕ್‌ಗಳನ್ನು ಮಾರಾಟ ಮಾಡಿ ಜೀವನ ಸಾಗಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ನಗರದ ಅಡ್ಲಿಮನೆಯಲ್ಲಿ ವಾಸವಿರುದ ಕ್ರೀಡಾಪಟು ಅನಿಲ್‌ ಕುಮಾರ್‌ (57) ಅವರು ಮಾಸ್ಟರ್‌ ್ಸ ಅಥ್ಲೆಟಿಕ್‌ ನಲ್ಲಿ ಜಿಲ್ಲೆಯನ್ನು ಪ್ರತಿನಿಧಿಸುವ ಮೂಲಕ ಕೀರ್ತಿ ತಂದಿದ್ದಾರೆ.

ಫೆಬ್ರವರಿಯಲ್ಲಿ ಗುಜರಾತ್‌ ನಲ್ಲಿ ನಡೆದ ರಾಷ್ಟ್ರೀಯ ಮಾಸ್ಟರ್ಸ್ ಅಥ್ಲೆಟಿಕ್‌ನ 5 ಕಿ.ಮೀ ನಡಿಗೆ ಹಾಗೂ 5 ಕಿ.ಮೀ ಓಟದ ಸ್ಪರ್ಧೆಯಲ್ಲಿ ವಿಜೇತರಾಗಿ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದರು. ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಈವರೆಗೆ ಸುಮಾರು 50 ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ADVERTISEMENT

ಏಪ್ರಿಲ್‌ನಲ್ಲಿ ಜಪಾನ್‌ನಲ್ಲಿ ನಿಗದಿಯಾಗಿದ್ದ ಪಂದ್ಯಾವಳಿಯಲ್ಲಿ ಭಾರತವನ್ನು ಪ್ರತಿನಿಧಿಸಬೇಕಿತ್ತು. ಆದರೆ, ಕೊರೊನಾ ಲಾಕ್‌ಡೌನ್ ನಿಂದಾಗಿ ಕ್ರೀಡಾಕೂಟ ನಡೆಸುವುದಕ್ಕೂ ಹೊಡೆತ ನೀಡಿದೆ.

2017ರಲ್ಲಿ ಚನ್ನರಾಯಪಟ್ಟಣದಿಂದ ಹಾಸನಾಂಬ ದೇವಸ್ಥಾನದ ವರೆಗೆ ಕಾಲ್ನಡಿಗೆಯಲ್ಲಿ ಬಂದಿದ್ದರು. 2018ರಲ್ಲಿ ಬೇಲೂರಿನಿಂದ ಹಾಸನದ ವರೆಗೆ ಪಾದಯಾತ್ರೆ ಮಾಡಿದ್ದರು. ಕಳೆದ ಬಾರಿ ಮೈಸೂರು ದಸರಾ ಕ್ರೀಡಾ ಕೂಟದಲ್ಲಿ ಭಾಗವಹಿಸಿ 21 ಕಿ.ಮೀ. ನಡೆದಿದ್ದರು.

ನಗರದ ಸಣ್ಣಮನೆಯೊಂದರಲ್ಲಿ ವಾಸವಿರುವ ಅನಿಲ್‌ಕುಮಾರ್‌ ಅವಿವಾಹಿತರು. ಆರಂಭದಿಂದಲೂ ಕ್ರೀಡೆ, ಸಾಮಾಜಿಕ
ಚಟುವಟಿಕೆಯಲ್ಲೇ ಗುರುತಿಸಿಕೊಂಡಿರುವ ಇವರು, ಜೀವನೋಪಯಕ್ಕಾಗಿ ಛಾಯಾಗ್ರಾಹಕ ವೃತ್ತಿಯನ್ನು ನಂಬಿಕೊಂಡಿದ್ದಾರೆ. ದುಡಿಮೆಯಿಂದ ಬರುವ ಅಲ್ಪ ಸ್ವಲ್ಪ ಆದಾಯದಲ್ಲೇ ಕ್ರೀಡಾಕೂಟದ ಖರ್ಚು ಸರಿದೂಗಿಸಿಕೊಳ್ಳುತ್ತಿದ್ದರು.

ಆದರೆ, ಆರು ತಿಂಗಳಿನಿಂದ ಸಭೆ, ಸಮಾರಂಭ ಇಲ್ಲದ ಕಾರಣ ಕೆಲಸ ಕೈಕೊಟ್ಟಿದ್ದು, ಮೂರು ಹೊತ್ತಿನ ಊಟಕ್ಕೂ
ಪರದಾಡುತ್ತಿದ್ದಾರೆ. ಅನ್ಯ ಮಾರ್ಗವಿಲ್ಲದೆ ಮಾಸ್ಕ್‌ ಮಾರಾಟಕ್ಕೆ ನಿಂತಿದ್ದಾರೆ. ಮಾರುಕಟ್ಟೆಯಲ್ಲಿ ಮಾಸ್ಕ್‌ಗಳನ್ನು ಖರೀದಿಸಿ, ಮೆಡಿಕಲ್‌ ಸ್ಟೋರ್‌ಗಳು ಹಾಗೂ ಇತರೆ ಚಿಲ್ಲರೆ ಅಂಗಡಿಗಳಿಗೆ ಮಾರಾಟ ಮಾಡುತ್ತಾರೆ. ಒಂದು ಮಾಸ್ಕ್‌ ಮಾರಾಟವಾದರೆ ₹2 ರಿಂದ 5 ಲಾಭ ಸಿಗಲಿದೆ. ಹಿರಿಯ ಕ್ರೀಡಾಪಟುವಿಗೆ ಸಹಾಯ ಮಾಡುವ ದಾನಿಗಳಿದ್ದರೆ ಮೊ. ನಂ 9611966084 ಸಂಪರ್ಕಿಸಬಹುದು.

‘ವಯಸ್ಕರ ಕ್ರೀಡಾಕೂಟದಲ್ಲಿ ರಾಷ್ಟ್ರ, ಅಂತರ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡರೂ ಸರ್ಕಾರದಿಂದ ಯಾವುದೇ ಸೌಲಭ್ಯ ಇಲ್ಲ. ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳಬೇಕಾದರೆ ಸ್ವಂತ ಹಣ ಭರಿಸಬೇಕು. ಹಲವು ಬಾರಿ ದಾನಿಗಳು ನೆರವು ನೀಡಿದ್ದಾರೆ. ಕೋವಿಡ್‌ ಕಾರಣದಿಂದ ಸಭೆ, ಶುಭ, ಸಮಾರಂಭಗಳು ಹೆಚ್ಚು ನಡೆಯುತ್ತಿಲ್ಲ. ಪೋಟೊ ಆರ್ಡರ್‌ ಗಳು ಸಿಗುತ್ತಿಲ್ಲ. ಆದ್ದರಿಂದ ಅನಿವಾರ್ಯವಾಗಿ ಮಾಸ್ಕ್ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದೇನೆ’ಎಂದು ಕ್ರೀಡಾಪಟು ಅನಿಲ್‌ ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.