ADVERTISEMENT

ತಾಯಿ– ಶಿಶು ಮರಣ ಶೂನ್ಯಕ್ಕೆ ತನ್ನಿ: ಜಿಲ್ಲಾಧಿಕಾರಿ ಕೆ.ಎಸ್‌. ಲತಾಕುಮಾರಿ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2025, 5:11 IST
Last Updated 6 ನವೆಂಬರ್ 2025, 5:11 IST
ಕೆ.ಎಸ್‌. ಲತಾಕುಮಾರಿ
ಕೆ.ಎಸ್‌. ಲತಾಕುಮಾರಿ   

ಹಾಸನ: ಜಿಲ್ಲೆಯಲ್ಲಿ ತಾಯಿ ಮತ್ತು ಶಿಶು ಮರಣ ಪ್ರಮಾಣ ಶೂನ್ಯಕ್ಕೆ ತರುವ ನಿಟ್ಟಿನಲ್ಲಿ ಮುಂಜಾಗ್ರತೆ ವಹಿಸಿ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಕೆ.ಎಸ್‌. ಲತಾಕುಮಾರಿ, ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿ ಬಿ.ಸಿ.ರಾಯ್ ಸಭಾಂಗಣದಲ್ಲಿ ಮಂಗಳವಾರ ರಾಷ್ಟ್ರೀಯ ಆರೋಗ್ಯ ಅಭಿಯಾನದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಗರ್ಭಿಣಿಯರಿಗೆ ನಿಗದಿತ ಸಮಯದಲ್ಲಿ ನೀಡಬಹುದಾದ ಆರೋಗ್ಯ ಸೇವೆಗಳನ್ನು ತಪ್ಪದೇ ಒದಗಿಸಬೇಕು. ಸರ್ಕಾರ ಗರ್ಭಿಣಿಯರ ಆರೋಗ್ಯಕ್ಕಾಗಿ ವಿವಿಧ ಯೋಜನೆಗಳಡಿ ಸವಲತ್ತು ಒದಗಿಸುತ್ತಿದೆ. ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಹೆರಿಗೆ ಆಗುವುದಕ್ಕೆ ಕಾರಣವೇನು ಎಂಬುದರ ಬಗ್ಗೆ ಕೂಡ ಎಚ್ಚರ ವಹಿಸಬೇಕು ಎಂದು ತಿಳಿಸಿದರು.

ADVERTISEMENT

ತಾಲ್ಲೂಕು ಆಸ್ಪತ್ರೆಗಳಲ್ಲಿ ವಿಳಂಬ ಮಾಡದೇ ವಯಸ್ಸಿನ ಪ್ರಮಾಣಪತ್ರ ಹಾಗೂ ಅಂಗವಿಕಲರಿಗೆ ಯುಡಿಐಡಿ ಪ್ರಮಾಣ ಪತ್ರ ನೀಡಬೇಕು. 13 ನಮ್ಮ ಕ್ಲಿನಿಕ್‌ಗಳಿದ್ದು, ಇವುಗಳಲ್ಲಿ ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸಬೇಕು ಎಂದರು.

ಏಪ್ರಿಲ್‍ನಿಂದ ಅಕ್ಟೋಬರ್‌ವರೆಗೆ 5 ತಾಯಿ ಮರಣ ಹೊಂದಿದ್ದಾರೆ. ಇವುಗಳಲ್ಲಿ ನಾಲ್ಕು ಹೊರ ಜಿಲ್ಲೆಗಳಿಂದ ಬಂದವರಾಗಿದ್ದು, ಒಬ್ಬರು ಮಾತ್ರ ಹಾಸನ ಜಿಲ್ಲೆಯರಾಗಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅನಿಲ್‌ ಮಾಹಿತಿ ನೀಡಿದರು.

ಪೌಷ್ಟಿಕಾಂಶದ ಕೊರತೆ ಎದುರಿಸುತ್ತಿರುವ ಮಕ್ಕಳ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಅವರ ಆರೋಗ್ಯ ಸುಧಾರಣೆ ಆಗಿದೆಯಾ ಎಂಬುದರ ಮೇಲೆ ನಿಗಾ ಇಡಬೇಕು. ಎಲ್ಲ ಮಕ್ಕಳಿಗೆ ಒಳ್ಳೆಯ ಜೀವನ ಕೊಡುವ ನಿಟ್ಟಿನಲ್ಲಿ ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ ಆಹಾರ ಒದಗಿಸಲು ಗಮನ ಹರಿಸಿಬೇಕು. ಕೂಲಿ ಕಾರ್ಮಿಕರ ಮನವೊಲಿಸಿ, ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ತಿಳಿವಳಿಕೆ ನೀಡಬೇಕು ಎಂದು ಸೂಚಿಸಿದರು.

ನಿಗದಿತ ಸಮಯದಲ್ಲಿ ಲಸಿಕೆ ಹಾಕಿಸಲು ಹಾಗೂ ಪೌಷ್ಟಿಕ ಆಹಾರ ಒದಗಿಸುವುದರ ಜೊತೆಗೆ ನಿರ್ದಿಷ್ಟ ತೂಕ ಬರುವವರೆಗೆ ನಿಗಾ ಇಡಬೇಕು. ಗುಡ್ಡಕಾಡು ಪ್ರದೇಶದಲ್ಲಿರುವ ಗರ್ಭಿಣಿಯರು, ನಿರೀಕ್ಷಿತ ದಿನಾಂಕಕ್ಕೆ ಎರಡು ದಿನ ಮುಂಚಿತವಾಗಿ ಹೆರಿಗೆಗಾಗಿ ಆಸ್ಪತ್ರೆಗೆ ಬಂದು ದಾಖಲಾಗುವಂತೆ ವೈದ್ಯರು ತಿಳಿಸಬೇಕು ಎಂದು ಹೇಳಿದರು.

ಒಂದು ಸಮಿತಿ ರಚಿಸಿ. ಯಾವ ಕಾರಣಕ್ಕೆ ಸಾವು ಸಂಭವಿಸಿದೆ? ಮರಣ ತಪ್ಪಿಸಲು ಏನು ಮುಂಜಾಗ್ರತೆ ವಹಿಸಬೇಕಾಗಿತ್ತು ಎಂಬುದರ ಬಗ್ಗೆ ಪರಿಶೀಲನೆ ಮಾಡಿ ವರದಿ ನೀಡಬೇಕು. ಗಂಡಾಂತರ ಹೆರಿಗೆಗೆ ಹೆಚ್ಚಿನ ಗಮನ ಹರಿಸಬೇಕು ಎಂದು ತಿಳಿಸಿದರು.

ಆಸ್ಪತ್ರೆಯಲ್ಲಿ ಸಾರ್ವಜನಿಕರಿಗೆ ವೈದ್ಯರು ಲಭ್ಯವಿರಬೇಕು. ಸಿಬ್ಬಂದಿ ಸಮವಸ್ತ್ರ ಧರಿಸಿರಬೇಕು. ಆಸ್ಪತ್ರೆಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿ. ಆಸ್ಪತ್ರೆಗಳ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಶಾಲಾ– ಕಾಲೇಜು ಆವರಣದಿಂದ 200 ಮೀಟರ್‌ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡಲು ಅವಕಾಶವಿಲ್ಲ, ಈ ನಿಟ್ಟಿನಲ್ಲಿ ಕಾನೂನು ಉಲ್ಲಂಘಿಸಿದರೆ ಕ್ರಮ ಕೈಗೊಳ್ಳಬೇಕು. ಆರೋಗ್ಯ ಮತ್ತು ಸ್ವಚ್ಛತೆಗೆ ಆದ್ಯತೆ ನೀಡಬೇಕು. ಈ ನಿಟ್ಟಿನಲ್ಲಿ 50 ಕ್ಕಿಂತ ಹೆಚ್ಚು ಹೆಣ್ಣು ಮಕ್ಕಳಿರುವ ಪ್ರೌಢಶಾಲೆಗಳಲ್ಲಿ ಸ್ಯಾನಿಟರಿ ಪ್ಯಾಡ್ ವಿಲೇವಾರಿಗೆ ಕ್ರಮ ಕೈಗೊಳ್ಳುವಂತೆ ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಮಂಜುನಾಥ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅನಿಲ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ನಾಗಪ್ಪ, ಆರ್.ಸಿ.ಎಚ್. ಅಧಿಕಾರಿ ಡಾ.ಶಿವಶಂಕರ್, ಡಾ.ರಂಗಲಕ್ಷ್ಮಿ, ಮತ್ತಿತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.