
ಹೈಕೋರ್ಟ್ ಆದೇಶ
ಹಾಸನ: ವೈದ್ಯರ ನಿರ್ಲಕ್ಷ್ಯದಿಂದ ಸೋಂಕು ತಗುಲಿ ಮಹಿಳೆ ಮೃತಪಟ್ಟ ಪ್ರಕರಣದಲ್ಲಿ ಬೆಂಗಳೂರಿನ ಸೇಂಟ್ ಜಾನ್ಸ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯರಿಗೆ ನಗರದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ₹30 ಲಕ್ಷ ಪರಿಹಾರ ನೀಡಲು ಆದೇಶಿಸಿದೆ.
ಇಲ್ಲಿನ ವಿದ್ಯಾನಗರದ ನಿವಾಸಿ ನಾಗೇಶ್ ಅವರ ತಾಯಿ ಗಂಗಮ್ಮ ಅವರು ಪಿತ್ತಕೋಶದಲ್ಲಿ ಕಲ್ಲಿನ ಸಮಸ್ಯೆಯಿಂದ ಆಸ್ಪತ್ರೆಗೆ 2023ರ ಜನವರಿ 5 ರಂದು ದಾಖಲಾಗಿದ್ದರು. ಆಸ್ಪತ್ರೆಯ ಡಾ.ಸೈಯ್ಯದ್ ಶಫಿಕ್ ಅವರು 6 ರಂದು ಶಸ್ತ್ರಚಿಕಿತ್ಸೆ ಮಾಡಿ ಸ್ಟಂಟ್ ಅಳವಡಿಸಿದ್ದರು. ನಂತರ ಸೋಂಕು ತಗುಲಿ ಗಂಗಮ್ಮ ಅದೇ ತಿಂಗಳ 30ರಂದು ಮೃತಪಟ್ಟಿದ್ದರು.
‘ಆಸ್ಪತ್ರೆಯವರ ನಿರ್ಲಕ್ಷ್ಯದಿಂದ ತಾಯಿ ಮೃತಪಟ್ಟಿದ್ದು, ಸೇವಾ ನ್ಯೂನ್ಯತೆ, ಖರ್ಚಿನ ಪರಿಹಾರವಾಗಿ ₹ 50 ಲಕ್ಷ ಪರಿಹಾರ ಕೊಡಿಸಬೇಕು’ ಎಂದು ಕೋರಿ ನಾಗೇಶ್ ಅವರು ಆಯೋಗದಲ್ಲಿ ಅದೇ ವರ್ಷ ನವೆಂಬರ್ 3 ರಂದು ದೂರು ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷೆ ಚಂಚಲಾ ಸಿ.ಎಂ., ಸದಸ್ಯೆ ಅನುಪಮಾ ಆರ್. ಅವರನ್ನು ಒಳಗೊಂಡ ಪೀಠ, ಉಭಯ ಪಕ್ಷಗಾರರ ವಾದ ಹಾಗೂ ಹಾಜರುಪಡಿಸಿದ ದಾಖಲೆಗಳನ್ನು ಪರಿಶೀಲಿಸಿತು. ‘ಶಸ್ತ್ರಚಿಕಿತ್ಸೆಯ ನಂತರ ಉಂಟಾದ ಸೋಂಕಿನ ಬಗ್ಗೆ ನಿಗಾ ವಹಿಸಿಲ್ಲ. ಬ್ಯಾಕ್ಟೀರಿಯಾ ಸೋಂಕಿನಿಂದ ರೋಗಿಯು ಮೃತಪಟ್ಟಿದ್ದು, ಸುಪ್ರೀಂ ಕೋರ್ಟ್ ಹಾಗೂ ರಾಷ್ಟ್ರೀಯ ಆಯೋಗದ ಹಲವಾರು ತೀರ್ಪಿನ ಪ್ರಕಾರ ವೈದ್ಯಕೀಯ ನಿರ್ಲಕ್ಷ್ಯವಾಗಿದೆ’ ಎಂದು ತೀರ್ಮಾನಿಸಿದೆ.
ಆಸ್ಪತ್ರೆಯ ನಿರ್ದೇಶಕರು, ವೈದ್ಯರಾದ ಡಾ.ಭುವನ ಕೃಷ್ಣ ಮತ್ತು ಡಾ.ಸೈಯ್ಯದ್ ಶಫಿಕ್ ಅವರು ಜಂಟಿಯಾಗಿ ಅಥವಾ ಬೇರೆ-ಬೇರೆಯಾಗಿ ಒಟ್ಟು ಪರಿಹಾರದ ಮೊತ್ತವನ್ನು 6 ವಾರದೊಳಗೆ ನೀಡಬೇಕು. ತಪ್ಪಿದ್ದಲ್ಲಿ ವಾರ್ಷಿಕ ಶೇ 10 ಬಡ್ಡಿಯೊಂದಿಗೆ ಪಾವತಿಸಸಬೇಕು ಎಂದು ನವೆಂಬರ್ 7 ರಂದು ಆದೇಶ ಹೊರಡಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.