ADVERTISEMENT

ಅರಸೀಕೆರೆ | ಮೆಳೆಯಮ್ಮ, ಚಿಕ್ಕಮ್ಮ ದೇವಿ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2025, 2:43 IST
Last Updated 15 ಡಿಸೆಂಬರ್ 2025, 2:43 IST
ಅರಸೀಕೆರೆ ನಗರದ ಮೆಳೆಯಮ್ಮ, ಚಿಕ್ಕಮ್ಮ ದೇವಿಯರ ರಥೋತ್ಸವವು ಗ್ರಾಮದೇವತೆ ಕರಿಯಮ್ಮ ಮಲ್ಲಿಗೆಮ್ಮ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯಿಂದ ನೆರವೇರಿತು
ಅರಸೀಕೆರೆ ನಗರದ ಮೆಳೆಯಮ್ಮ, ಚಿಕ್ಕಮ್ಮ ದೇವಿಯರ ರಥೋತ್ಸವವು ಗ್ರಾಮದೇವತೆ ಕರಿಯಮ್ಮ ಮಲ್ಲಿಗೆಮ್ಮ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯಿಂದ ನೆರವೇರಿತು   

ಅರಸೀಕೆರೆ: ಇಲ್ಲಿನ ನಗರದ ಶಿವಾಲಯ ಹಿಂಭಾಗ ನೆಲೆಸಿರುವ ಮೆಳೆಯಮ್ಮ ಹಾಗೂ ಚಿಕ್ಕಮ್ಮ ದೇವಿಯ ರಥೋತ್ಸವವು ಗ್ರಾಮದೇವತೆ ಕರಿಯಮ್ಮ ಮಲ್ಲಿಗೆಮ್ಮ ದೇವಿಯ ಸಾನ್ನಿಧ್ಯದಲ್ಲಿ ಭಾನುವಾರ ಶ್ರದ್ಧಾಭಕ್ತಿಯಿಂದ ನಡೆಯಿತು.

ಕಳೆದ 5 ದಿನಗಳಿಂದ ಜಾತ್ರಾ ಮಹೋತ್ಸವದ ಅಂಗವಾಗಿ ವಿವಿಧ ಪೂಜಾ ಕೈಂಕರ್ಯ ನಡೆದವು. ಶುಕ್ರವಾರ ಅಮ್ಮನವರ ಸಿಡಿ ಮಹೋತ್ಸವ, ಈಚಲು ಮರ ಹತ್ತುವ ಧಾರ್ಮಿಕ ಕಾರ್ಯಕ್ರಮ, ಶನಿವಾರ ಕರಿಯಮ್ಮ ಮಲಿಗೆಮ್ಮ ಮೆಳೆಯಮ್ಮ ಹಾಗೂ ಚಿಕ್ಕಮ್ಮ ದೇವಿಯರಿಗೆ ವಿಶೇಷ ಪುಷ್ಪಲಂಕಾರ ಮಾಡಲಾಗಿತ್ತು.

ಶಿವಾಲಯದಿಂದ ಆರಂಭವಾದ ಮೆರವಣಿಗೆ ನಗರದ ರಾಜಬೀದಿಗಳಲ್ಲಿ ವಾದ್ಯ ಸದ್ದಿನೊಂದಿಗೆ ನಡೆಯಿತು.

ADVERTISEMENT

ಭಾನುವಾರ ಮುಂಜಾನೆಯಿಂದಲೇ ರಥಕ್ಕೆ ಕಳಸ ಹಾಗೂ ಬಲಿ ಅನ್ನ ಪೂಜೆ ಮಾಡಲಾಯಿತು. ಅಲಂಕೃತ ರಥದ ಮೇಲೆ ದೇವಿಯ ಮೂರ್ತಿಗಳನ್ನು ಆರೋಹಣ ಮಾಡಲಾಯಿತು. ನಂತರ ತೆಂಗಿನ ಕಾಯಿ ಒಡೆಯುವುದರ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಕೆಂಚರಾಯ ಸ್ವಾಮಿ, ದೂತರಾಯ ಸ್ವಾಮಿ ಹಾಗೂ ಚೆಲುವರಾಯ ಸ್ವಾಮಿಯ ಕುಣಿತವು ಆಕರ್ಷಕವಾಗಿತ್ತು.

ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ನೂರಾರು ಸಂಖ್ಯೆಯ ಭಕ್ತರು ಆಗಮಿಸಿ ದೇವರ ಮೂರ್ತಿಗಳಿಗೆ ಹಣ್ಣು ಕಾಯಿ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದರು.

ರಾತ್ರಿ ದೇವರಿಗೆ ಭಕ್ತರು ಮಡಿಲಕ್ಕಿ ಸಲ್ಲಿಸಿದ್ದರು. ನಂತರ ಎಲ್ಲ ದೇವರ ಮೂರ್ತಿಗಳ ಮಣೇವು ಕಾರ್ಯಕ್ರಮ ನಡೆಯುವುದರ ಮೂಲಕ ಜಾತ್ರೆ ಮಹೋತ್ಸವವು ಸಂಪನ್ನಗೊಂಡಿತ್ತು.

ಗಣ್ಯರು, ರಾಜಕೀಯ ಜನಪ್ರತಿನಿಧಿಗಳು ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಸೇರಿದಂತೆ ಭಕ್ತರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.