ADVERTISEMENT

ಮಾನಸಿಕ ಆರೋಗ್ಯ ಮಾನವನ ಹಕ್ಕು: ನ್ಯಾ. ಎ.ಎಸ್.ಸಲ್ಮಾ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2025, 4:35 IST
Last Updated 11 ಅಕ್ಟೋಬರ್ 2025, 4:35 IST
ಬೇಲೂರು ತಾಲ್ಲೂಕು ಆರೋಗ್ಯಾಧಿಕಾರಿ ಕಚೇರಿಯಿಂದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಜಾಗೃತಿ ಜಾಥಾಕ್ಕೆ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಎ.ಎಸ್. ಸಲ್ಮಾ ಚಾಲನೆ ನೀಡಿದರು. ತಾಲ್ಲೂಕು ವೈದ್ಯಾಧಿಕಾರಿ ಡಾ. ವಿಜಯ್, ಮನೋವೈದ್ಯಾಧಿಕಾರಿ ಡಾ. ಸುಮನಾ ಇದ್ದಾರೆ 
ಬೇಲೂರು ತಾಲ್ಲೂಕು ಆರೋಗ್ಯಾಧಿಕಾರಿ ಕಚೇರಿಯಿಂದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಜಾಗೃತಿ ಜಾಥಾಕ್ಕೆ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಎ.ಎಸ್. ಸಲ್ಮಾ ಚಾಲನೆ ನೀಡಿದರು. ತಾಲ್ಲೂಕು ವೈದ್ಯಾಧಿಕಾರಿ ಡಾ. ವಿಜಯ್, ಮನೋವೈದ್ಯಾಧಿಕಾರಿ ಡಾ. ಸುಮನಾ ಇದ್ದಾರೆ    

ಬೇಲೂರು: ಮಾನಸಿಕ ಆರೋಗ್ಯವು ಕೇವಲ ವೈದ್ಯಕೀಯ ವಿಷಯವಲ್ಲ, ಅದು ಮಾನವನ ಹಕ್ಕಿನ ಅಂಶವೂ ಆಗಿದೆ ಎಂದು ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಎ.ಎಸ್. ಸಲ್ಮಾ ಹೇಳಿದರು.

ಇಲ್ಲಿನ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಮನೋಬಲ ಕಳೆದುಕೊಂಡವರು ಸಮಾಜದ ಬೆಂಬಲದಿಂದ ಮತ್ತೆ ಜೀವನದಲ್ಲಿ ಎದ್ದು ನಿಲ್ಲಬಹುದು. ಆದ್ದರಿಂದ ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳ ಅವಶ್ಯಕತೆ ಇದೆ ಎಂದರು.

ADVERTISEMENT

ತಾಲ್ಲೂಕು ವೈದ್ಯಾಧಿಕಾರಿ ಡಾ. ವಿಜಯ್ ಮಾತನಾಡಿ, ಮಾನಸಿಕ ಆರೋಗ್ಯವೂ ದೈಹಿಕ ಆರೋಗ್ಯದಷ್ಟೇ ಮುಖ್ಯ. ಮನೋಬಲ ಕಾಪಾಡಿಕೊಳ್ಳಲು ಹಾಗೂ ಸಲಹೆ ಪಡೆಯಲು ಆರೋಗ್ಯ ಇಲಾಖೆ ಎಲ್ಲ ರೀತಿಯ ಸಹಕಾರ ನೀಡುತ್ತಿದೆ ಎಂದರು.

ಮನೋವೈದ್ಯಾಧಿಕಾರಿ ಡಾ. ಸುಮನಾ ಮಾತನಾಡಿ, ಇಂದಿನ ಜೀವನದಲ್ಲಿ ಮಾನಸಿಕ ಒತ್ತಡಗಳು ಹೆಚ್ಚುತ್ತಿವೆ. ಸಮಯೋಚಿತ ಸಮಾಲೋಚನೆ ಮತ್ತು ಸಹಾಯ ಸೇವೆಗಳಿಂದ ಆತ್ಮಹತ್ಯೆ, ಮುಂತಾದ ಸಮಸ್ಯೆಗಳನ್ನು ತಡೆಯಬಹುದು. ಪ್ರತಿಯೊಬ್ಬರೂ ತಮ್ಮ ಮತ್ತು ಇತರರ ಮನೋಸ್ಥಿತಿಯ ಬಗ್ಗೆ ಎಚ್ಚರಿಕೆಯಿಂದಿರಬೇಕು ಎಂದರು.

‘ತುರ್ತು ಪರಿಸ್ಥಿತಿ ಮತ್ತು ವಿಪತ್ತುಗಳಲ್ಲಿ ಮಾನಸಿಕ ಆರೋಗ್ಯ ಸೇವೆಗಳ ಲಭ್ಯತೆ’ ಎಂಬ ನುಡಿಗಟ್ಟಿನಡಿ ಜಾಗೃತಿ ಮೂಡಿಸುವ ಉದ್ದೇಶದಿಂದ ಸಾರ್ವಜನಿಕ ಆಸ್ಪತ್ರೆಯಿಂದ ಬಸವೇಶ್ವರ ವೃತ್ತದವರೆಗೆ ಜಾಥಾ ಆಯೋಜಿಸಲಾಗಿತ್ತು.

ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಜಯಲಕ್ಷ್ಮಿ, ಶಿರಸ್ತಿದಾರ್ ತನ್ವೀರ್ ಅಹಮದ್, ವಕೀಲರ ಸಂಘದ ತಾಲ್ಲೂಕು ಘಟಕದ ಕಾರ್ಯದರ್ಶಿ ಜೆ.ಸಿ. ಪುಟ್ಟಸ್ವಾಮಿಗೌಡ, ಬಿಇಒ ಉದಯಕುಮಾರ್, ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಉಷಾ, ತಾಲ್ಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ದಯಾನಂದ್, ಡಾ. ಕೃತಿಕಾ, ,ಪಲ್ಲವಿ, ಮನೋಜ್, ನಮನ ತಂಡದ ಆದ್ಯ, ಸಮುದಾಯ ಆರೋಗ್ಯ ಕಾರ್ಯಕರ್ತರು, ವಂದನ ಆಶಾ ಮೇಲ್ವಿಚಾರಕರು, ಆರೋಗ್ಯ ಇಲಾಖೆಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.