ADVERTISEMENT

ಅಕ್ಷರ ದಾಸೋಹ ನೌಕರರ ಪ್ರತಿಭಟನೆ

ವಯೋಮಾನದ ನೆಪವೊಡ್ಡಿ ನಿವೃತ್ತಿಗೆ ಖಂಡನೆ

​ಪ್ರಜಾವಾಣಿ ವಾರ್ತೆ
Published 4 ಮೇ 2022, 15:52 IST
Last Updated 4 ಮೇ 2022, 15:52 IST
ಹಾಸನದಲ್ಲಿ ಅಕ್ಷರ ದಾಸೋಹ ನೌಕರರು ಮೆರವಣಿಗೆ ನಡೆಸಿದರು.
ಹಾಸನದಲ್ಲಿ ಅಕ್ಷರ ದಾಸೋಹ ನೌಕರರು ಮೆರವಣಿಗೆ ನಡೆಸಿದರು.   

ಹಾಸನ: ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಿಐಟಿಯು ನೇತೃತ್ವದಲ್ಲಿ ಅಕ್ಷರ ದಾಸೋಹ ನೌಕರರು ತಾಲ್ಲೂಕು ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.

ಹೇಮಾವತಿ ಪ್ರತಿಮೆ ಬಳಿಯಿಂದ ತಾಲ್ಲೂಕು ಕಚೇರಿವರೆಗೆ ಮೆರವಣಿಗೆಯಲ್ಲಿ ಎದುರು ಧರಣಿ ನಡೆಸಿ, 60 ವರ್ಷ ವಯೋಮಾನ ನೆಪವೊಡ್ಡಿ 19 ವರ್ಷ ಸೇವೆ ಸಲ್ಲಿಸಿದ ಬಡ ಮಹಿಳೆಯರನ್ನು ಸೇವೆಯಿಂದ ಬಿಡುಗಡೆ ಮಾಡಿರುವುದನ್ನು ಖಂಡಿಸಿದರು.

‘ಮಧ್ಯಾಹ್ನದ ಬಿಸಿಯೂಟ ಯೋಜನೆ ಆರಂಭವಾದ ದಿನದಿಂದಲೂ ಮಕ್ಕಳ ಶೈಕ್ಷಣಿಕ ಉನ್ನತಿಗೆ, ಗೈರು ಹಾಜರಿ ತಡೆಗಟ್ಟಲು ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದವರನ್ನು ಈಗ ಸೇವೆಯಿಂದ ತೆಗೆದು ಹಾಕಲಾಗಿದೆ. ರಾಜ್ಯದಲ್ಲಿ ಸುಮಾರು 50 ಲಕ್ಷ ಬಡ, ರೈತ, ಕೃಷಿ ಕೂಲಿಕಾರರ, ದೀನ– ದಲಿತ ಮಕ್ಕಳಿಗೆ ನಿತ್ಯ ಬಿಸಿ ಆಹಾರ ಬಡಿಸುವ ಮೂಲಕ ಮಕ್ಕಳಲ್ಲಿ ಶೈಕ್ಷಣಿಕ ಆಸಕ್ತಿ ಮೂಡಿಸುವಲ್ಲಿ ಈ ತಾಯಂದಿರ ಪಾತ್ರವಿದೆ’ ಎಂದರು.

ADVERTISEMENT

ನಿವೃತ್ತಿ ವಿಷಯಕ್ಕೆ ಸಂಬಂಧಿಸಿದಂತೆ ಶಿಕ್ಷಣ ಸಚಿವರು, ಅಧಿಕಾರಿಗಳೊಂದಿಗೆ ಹಲವು ಸಭೆಗಳಾಗಿವೆ. ಈ ಸಭೆಗಳಲ್ಲಿ ಬಿಸಿಯೂಟ ನೌಕರರ ವೇತನದಲ್ಲಿ ₹ 100 ಹಾಗೂ ಸರ್ಕಾರ ₹ 100 ನೀಡಿ ಈ ಹಣವನ್ನು ಎಲ್‍ಐಸಿ ಮೂಲಕ ವಿಶೇಷ ಪಿಂಚಣಿ ಯೋಜನೆಯಾಗಿ ರೂಪಿಸಲು ಒಪ್ಪಿಗೆ ಸೂಚಿಸಲಾಗಿತ್ತು. ಇದಕ್ಕಾಗಿ ಸಮಿತಿಯೊಂದನ್ನೂ ರಚನೆ ಮಾಡಲಾಗಿತ್ತು. ಆದರೆ, ಈ ಕ್ರಮಗಳ ಜಾರಿ ಮುನ್ನವೇ ಹಿರಿಯರನ್ನು ನಿವೃತ್ತಿ ಮಾಡುತ್ತಿರುವುದು ಅಮಾನವೀಯ ಮತ್ತು ಮಹಿಳಾ ವಿರೋಧಿ ಧೋರಣೆ ಎಂದು ಖಂಡಿಸಿದರು.‌

ಇದರಿಂದಾಗಿ ರಾಜ್ಯದಲ್ಲಿ ಸುಮಾರು 11 ರಿಂದ 12 ಸಾವಿರ ನೌಕರರನ್ನು ಯಾವುದೇ ನಿವೃತ್ತಿ ಸೌಲಭ್ಯವಿಲ್ಲದೆ ಸರ್ಕಾರ ತೆಗೆದುಹಾಕಲು ಮುಂದಾಗಿದೆ. ‌ ಕೂಡಲೇ ಸರ್ಕಾರ ಸುತ್ತೋಲೆ ವಾಪಸ್ ಪಡೆದು ಕೆಲಸ ವಂಚಿತರಿಗೆ ನ್ಯಾಯ ಒದಗಿಸಬೇಕು. ನಿವೃತ್ತಿ ವೇತನ ನಿಗದಿ ಮಾಡುವವರೆಗೆ ತಕ್ಷಣ ಬಿಸಿಯೂಟ ನೌಕರರಿಗೆ ₹1 ಲಕ್ಷ ಇಡಿಗಂಟು ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಈ ಸಂಬಂಧ ಪ್ರತಿಭಟನೆ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರೂ ಸೂಕ್ತ ಸ್ಪಂದನೆ ಸಿಕ್ಕಿಲ್ಲ. ಪರಿಹಾರ ನೀಡಲು ನಿರಾಕರಿಸಿರುವುದನ್ನು ವಿರೋಧಿಸಿ ಶಾಸಕರು, ಉಸ್ತುವಾರಿ ಸಚಿವರು, ಶಿಕ್ಷಣ ಸಚಿವರ ಮನೆ ನಿರಂತರ ಹೋರಾಟ ನಡೆಸಲಾಗುವುದು. ಸರ್ಕಾರ ಕೂಡಲೇ ಎಚ್ಚೆತ್ತು ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದರು.‌

ಸಿಐಟಿಯು ಸಂಯೋಜಿತ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಅಧ್ಯಕ್ಷೆ ಮೀನಾಕ್ಷಿ, ಪ್ರಧಾನ ಕಾರ್ಯದರ್ಶಿ ಶೋಭಾ, ಸಿಐಟಿಯು ಮುಖಂಡ ಅರವಿಂದ್, ಕೆಪಿಆರ್‌ಎಸ್ ಜಿಲ್ಲಾಧ್ಯಕ್ಷ ಎಚ್.ಆರ್. ನವೀನ್ ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.