ADVERTISEMENT

ಹಾಲು ಖರೀದಿ ದರ ಲೀಟರ್‌ಗೆ ₹3 ಹೆಚ್ಚಳ

ಮಾರ್ಚ್ ಅಂತ್ಯಕ್ಕೆ ₹ 20 ಕೋಟಿ ಲಾಭ ನಿರೀಕ್ಷೆ; ಹಾಮೂಲ್‌ ಅಧ್ಯಕ್ಷ ಎಚ್‌.ಡಿ. ರೇವಣ್ಣ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2021, 14:08 IST
Last Updated 25 ಫೆಬ್ರುವರಿ 2021, 14:08 IST
ಹಾಸನ ಡೈರಿ ಆವರಣದಲ್ಲಿ ನಿರ್ಮಿಸುತ್ತಿರುವ ಪೆಟ್‌ ಬಾಟಲ್‌ ಘಟಕವನ್ನು ರಾಜ್ಯಸಭಾ ಸದಸ್ಯ ಎಚ್‌.ಡಿ.ದೇವೇಗೌಡ ವೀಕ್ಷಿಸಿದರು. ಹಾಮೂಲ್‌ ಅಧ್ಯಕ್ಷ ಎಚ್‌.ಡಿ.ರೇವಣ್ಣ, ವ್ಯವಸ್ಥಾಪಕ ನಿರ್ದೇಶಕ ಗೋಪಾಲಯ್ಯ ಇದ್ದಾರೆ.
ಹಾಸನ ಡೈರಿ ಆವರಣದಲ್ಲಿ ನಿರ್ಮಿಸುತ್ತಿರುವ ಪೆಟ್‌ ಬಾಟಲ್‌ ಘಟಕವನ್ನು ರಾಜ್ಯಸಭಾ ಸದಸ್ಯ ಎಚ್‌.ಡಿ.ದೇವೇಗೌಡ ವೀಕ್ಷಿಸಿದರು. ಹಾಮೂಲ್‌ ಅಧ್ಯಕ್ಷ ಎಚ್‌.ಡಿ.ರೇವಣ್ಣ, ವ್ಯವಸ್ಥಾಪಕ ನಿರ್ದೇಶಕ ಗೋಪಾಲಯ್ಯ ಇದ್ದಾರೆ.   

ಹಾಸನ: ಹಾಸನ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟವು ಮಾರ್ಚ್ ಅಂತ್ಯಕ್ಕೆ ಅಂದಾಜು ₹20
ಕೋಟಿ ಲಾಭ ಗಳಿಸುವ ನಿರೀಕ್ಷೆ ಇದ್ದು, ಹಾಲು ಉತ್ಪಾದಕರಿಗೆ ಪ್ರತಿ ಲೀಟರ್‌ಗೆ ₹3 ಖರೀದಿ ದರ
ಹೆಚ್ಚಿಸಲಾಗುವುದು ಎಂದು ಒಕ್ಕೂಟದ ಅಧ್ಯಕ್ಷ ಹಾಗೂ ಶಾಸಕ ಎಚ್‌.ಡಿ. ರೇವಣ್ಣ ಹೇಳಿದರು.

ಒಕ್ಕೂಟದಿಂದ ಈಗಾಗಲೇ ಹಾಲು ಉತ್ಪಾದಕರಿಂದ ಪ್ರತಿ ಲೀಟರ್‌ಗೆ ₹25 ನೀಡಿ ಖರೀದಿಸಲಾಗುತ್ತಿತ್ತು. ₹3
ಹೆಚ್ಚಳ ಹಾಗೂ ಸರ್ಕಾರದ ₹5 ಪ್ರೋತ್ಸಾಹ ಧನ ಸೇರಿ ಲೀಟರ್‌ ಹಾಲಿನ ಖರೀದಿ ದರ ₹33 ಕ್ಕೆ
ಏರಿಕೆಯಾಗಲಿದೆ. ಈ ರೀತಿ ಸುಮಾರು ₹28 ಕೋಟಿ ಉತ್ಪಾದಕರಿಗೆ ನೀಡಲಾಗುವುದು ಎಂದು ಗುರುವಾರ
ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

₹160 ಕೋಟಿ ವೆಚ್ಚದಲ್ಲಿ ಯು.ಎಚ್‌.ಟಿ. ಸುವಾಸಿತ ಹಾಲಿನ ಪೆಟ್‌ ಬಾಟಲ್‌ ಘಟಕದ ಯಂತ್ರೋಪಕರಣ ಅಳವಡಿಕೆ ಕಾರ್ಯ ಭರದಿಂದ ಸಾಗಿದ್ದು, ಇಟಲಿಯ ಎಂಜಿನಿಯರ್‌ಗಳು, ತಂತ್ರಜ್ಞರು ಕಾರ್ಯ ನಿರ್ವಹಿಸುತ್ತಿದ್ದಾರೆ. ಮಾರ್ಚ್ ಅಂತ್ಯಕ್ಕೆ ಪ್ರಾಯೋಗಿಕ ಪರೀಕ್ಷೆ ನಡೆಸಲಾಗುವುದು. ಏಪ್ರಿಲ್ ಮೊದಲ ವಾರದಲ್ಲಿ ಘಟಕ ಉದ್ಘಾಟನೆ ಮಾಡಲಾಗುವುದು ಎಂದು ಹೇಳಿದರು.

ADVERTISEMENT

ಯು.ಎಚ್‌.ಟಿ ಪೆಟ್‌ ಬಾಟಲ್ ಘಟಕದಲ್ಲಿ ಆರಂಭದಲ್ಲಿ 10 ವಿವಿಧ ಮಾದರಿಯ ಸ್ವಾದಿಷ್ಟ ಹೊಂದಿದ
ಸುವಾಸಿತ ಹಾಲು, ಮಿಲ್ಕ್‌ ಶೇಕ್‌, ಮಸಾಲ ಮಜ್ಜಿಗೆ ಮತ್ತು ಲಸ್ಸಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ
ಮಾಡಲಾಗುವುದು. ಈ ಘಟಕವು ಗಂಟೆಗೆ 30 ಸಾವಿರ ಪೆಟ್‌ ಬಾಟಲ್‌, ದಿನದಲ್ಲಿ 5 ಲಕ್ಷ ಪೆಟ್‌ ಬಾಟಲಿ
ಉತ್ಪಾದನೆ ಮಾಡಲಿದೆ. ಇದು ದೇಶದಲ್ಲಿಯೇ ಮೂರನೇ ಘಟಕ, ದಕ್ಷಿಣ ಭಾರತದಲ್ಲಿ ಮೊದಲನೆಯದು ಎಂದು
ವಿವರಿಸಿದರು.

ಒಕ್ಕೂಟದ ವ್ಯಾಪ್ತಿಯಲ್ಲಿ ಬರುವ ಹಾಲು ಉತ್ಪಾದಕರ ರಾಸುಗಳಿಗೆ ವಿಮೆ ಮಾಡಿಸಲು ಕ್ರಮ ಕೈಗೊಂಡಿದ್ದು,
ಪ್ರಸಕ್ತ ವರ್ಷದಲ್ಲಿ ಇನ್ನೂ 30 ಸಾವಿರ ರಾಸುಗಳನ್ನು ವಿಮೆಗೆ ಒಳಪಡಿಸಲು ಉದ್ದೇಶಿಸಲಾಗಿದೆ. ಉತ್ಪಾದಕರು
ಪಾವತಿಸಬೇಕಾದ ವಿಮಾ ವಂತಿಗೆ ₹900 ಗಳಲ್ಲಿ ₹600 ಒಕ್ಕೂಟದಿಂದ ಸಹಾಯಧನ ನೀಡಲಾಗುತ್ತಿದೆ. ಇದಕ್ಕಾಗಿ ₹1.80 ಕೋಟಿ ಒಕ್ಕೂಟವೇ ಭರಿಸುತ್ತಿದೆ ಎಂದು ಹೇಳಿದರು.

ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಗೋಪಾಲಯ್ಯ ಮಾತನಾಡಿ, ಹಾಸನ ಹಾಲು ಉತ್ಪಾದಕರ ಒಕ್ಕೂಟದಲ್ಲಿ ₹80 ಲಕ್ಷ ವೆಚ್ಚದ ಹಾಲು ಗುಣಮಟ್ಟ ಪರೀಕ್ಷಾ ಯಂತ್ರ ಇದ್ದು, ಅದರಲ್ಲಿ ನೀರು, ಉಪ್ಪು, ಸಕ್ಕರೆ, ಯೂರಿಯಾ ಬರೆಸಿರುವುದು ಸೇರಿದಂತೆ 15 ರೀತಿಯ ಕಲಬೆರಿಕೆ ಪರೀಕ್ಷೆ ನಡೆಸಲಾಗುವುದು. ಖಾಸಗಿ ಕಂಪನಿಯ ಹಾಲುಗಳನ್ನು ಪರೀಕ್ಷೆ ನಡೆಸಿ ಕಲಬೆರಿಕೆಗೆ ಕಡಿವಾಣ ಹಾಕುವ ಬದಲು ಅಧಿಕಾರಿಗಳು ಒಕ್ಕೂಟದ ಹಾಲನ್ನು ಪರೀಕ್ಷಿಸುತ್ತಾರೆ ಎಂದರು.

ಕೋವಿಡ್‌ ಸಂದರ್ಭದಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಬೇಡಿಕೆ ಮತ್ತು ಮಾರುಕಟ್ಟೆ ದರ ಕುಸಿತದಿಂದ
ಹಾಸನ ಒಕ್ಕೂಟವು ಸೆಪ್ಟೆಂಬರ್‌ ಅಂತ್ಯಕ್ಕೆ ₹50 ಕೋಟಿ ನಿವ್ವಳ ನಷ್ಟ ಅನುಭವಿಸಿತ್ತು. ನಂತರದ ದಿನಗಳಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಬೇಡಿಕೆ ಚೇತರಿಕೆ ಕಂಡ ಪರಿಣಾಮ ನಷ್ಟವನ್ನು ತೊಡೆದುಹಾಕಿ ಲಾಭದಲ್ಲಿ ಮುನ್ನಡೆಯುತ್ತಿದೆ. ರಾಜ್ಯದಲ್ಲಿ ಒಕ್ಕೂಟ ಎರಡನೇ ಸ್ಥಾನದಲ್ಲಿದೆ. ಮೊದಲನೇ ಸ್ಥಾನದಲ್ಲಿ ಬೆಂಗಳೂರು ಒಕ್ಕೂಟ ಇದೆ ಎಂದು ತಿಳಿಸಿದರು.

ಒಕ್ಕೂಟದ ನಿರ್ದೇಶಕ ಹೊನ್ನವಳ್ಳಿ ಸತೀಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.