ಹಾಸನ: ಆಲೂರು ತಾಲ್ಲೂಕಿನ ಹೊಸಮಠ ಗ್ರಾಮದ ಶಿಲುಬೆ ಬೆಟ್ಟದಲ್ಲಿ ಗಣಿಗಾರಿಕೆಗೆ ಅವಕಾಶ ನೀಡಿದಂತೆ ರೈತ ಸಂಘ, ಕ್ರೈಸ್ತ ಧರ್ಮ ಗುರುಗಳು ಮತ್ತು ಕರ್ನಾಟಕ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಗ್ರಾಮಸ್ಥರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಹೇಮಾವತಿ ಪ್ರತಿಮೆ ಬಳಿಯಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಮೆರವಣಿಗೆಯಲ್ಲಿ ಬಂದ ಪ್ರತಿಭಟನಕಾರರು, ಕೆಲಕಾಲ ಧರಣಿ ನಡೆಸಿದರು. ಗಣಿಗಾರಿಕೆ ಸ್ಥಗಿತಕ್ಕೆ ಆಗ್ರಹಿಸಿ ಘೋಷಣೆ ಕೂಗಿದರು.
ಚಿಕ್ಕಮಗಳೂರಿನ ಜಯಬಸವಾನಂದ ಸ್ವಾಮೀಜಿ ಮಾತನಾಡಿ, ‘ಶಿಲುಬೆ ಬೆಟ್ಟದಲ್ಲಿ ಗಣಿಗಾರಿಕೆಯಿಂದಾಗಿ ಗ್ರಾಮಸ್ಥರು ತೊಂದರೆ ಅನುಭವಿಸುತ್ತಿದ್ದಾರೆ. ಭಾರಿ ವಾಹನಗಳ ಸಂಚಾರದಿಂದ ರಸ್ತೆಗಳು ಹಾಳಾಗಿವೆ. ಗಣಿಗಾರಿಕೆಗೆ ಬಳಸುವ ಸ್ಫೋಟಕದಿಂದ ಕಾಡು ಪ್ರಾಣಿಗಳು, ಕಾಡಾನೆಗಳು ಕೃಷಿ ಭೂಮಿ ಹಾಳು ಮಾಡುತ್ತಿವೆ. ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.
‘ಈ ಹಿಂದೆ ಗಣಿಗಾರಿಕೆ ಸ್ಥಗಿತಕ್ಕೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್ ಪಟೇಲ್ ಪ್ರತಿಭಟನೆ ಮಾಡಿದ್ದು, ಅವರ ವಿರುದ್ಧ ಜಾತಿನಿಂದನೆ ಆರೋಪ ಹೊರಿಸಿ ಪ್ರಕರಣ ದಾಖಲಿಸಿರುವುದನ್ನು ವಾಪಸ್ ಪಡೆಯಬೇಕು’ ಎಂದು ಅಗ್ರಹಿಸಿದರು.
ರೈತ ಮುಖಂಡರಾದ ಆನೆಕೆರೆ ರವಿ ಮಾತನಾಡಿ, ಹಲವು ದಿನಗಳಿಂದ ಶಿಲುಬೆ ಬೆಟ್ಟದಲ್ಲಿ ಗಣಿಗಾರಿಕೆ ಸ್ಥಗಿತ ಮಾಡುವಂತೆ ಪ್ರತಿಭಟನೆ ಮಾಡಲಾಗುತ್ತಿದೆ. ಕೆಲವು ಹಿತಾಸಕ್ತಿಗಳು ಇಲ್ಲಸಲ್ಲದ ಆರೋಪ ಮಾಡಿ, ಹೋರಾಟಗಾರರ ಮೇಲೆ ಪ್ರಕರಣ ದಾಖಲು ಮಾಡುತ್ತಿರುವುದು ಸರಿಯಲ್ಲ. ಕೂಡಲೇ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಗಣಿಗಾರಿಕೆಯಿಂದ ಆಗುತ್ತಿರುವ ತೊಂದರೆ ಪರಿಶೀಲಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಬಾಬು, ಮಂಜುನಾಥ್, ಮಹಮ್ಮದ್ ಸಾದಿಕ್, ಸುಧಾ ಗಿರೀಶ್, ರಂಗಮ್ಮ, ಪವಿತ್ರಾ, ಕುಮಾರ್, ಜಯಣ್ಣ, ಶಿವರಾಮೇಗೌಡ, ಕಮಲಮ್ಮ, ಧರ್ಮೇಗೌಡ, ಕಾಳಯ್ಯ ಸೇರಿದಂತೆ ನೂರಾರು ಗ್ರಾಮಸ್ಥರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.