ADVERTISEMENT

ಸಾಧಕ, ಬಾಧಕ ಪರಿಶೀಲಿಸಿ ನಿರ್ಧಾರ: ಸಚಿವ ಸುರೇಶ್ ಕುಮಾರ್‌

ಜೂನ್‌ 1 ರಿಂದ ಎಸ್ಸೆಸ್ಸೆಲ್ಸಿ ತರಗತಿ

​ಪ್ರಜಾವಾಣಿ ವಾರ್ತೆ
Published 23 ಮೇ 2020, 13:06 IST
Last Updated 23 ಮೇ 2020, 13:06 IST
ಸುರೇಶ್‌ ಕುಮಾರ್‌
ಸುರೇಶ್‌ ಕುಮಾರ್‌   

ಹಾಸನ: ಜೂನ್ 1 ರಿಂದ ಎಸ್ಸೆಸ್ಸೆಲ್ಸಿ ತರಗತಿ ಪ್ರಾರಂಭಿಸಬೇಕೆಂಬ ಒತ್ತಾಯ ಬಂದಿದ್ದು, ಸಾಧಕ, ಬಾಧಕಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದರು.

ಜೂನ್ 25 ರಿಂದ ಜುಲೈ 4ರ ವರೆಗೆ ಪರೀಕ್ಷೆ ನಡೆಸಲು ಸಾಕಷ್ಟು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಪ್ರತಿಷ್ಠೆಯಾಗಿ ಪರಿಗಣಿಸದೆ, ಎಲ್ಲರ ಜತೆ ಚರ್ಚಿಸಿ ಮಕ್ಕಳ ಹಿತ ಗಮನದಲ್ಲಿಟ್ಟುಕೊಂಡು ತೀರ್ಮಾನ ಕೈಗೊಳ್ಳಲಾಗಿದೆ. ಚಂದನವಾಹಿನಿಯಲ್ಲಿ ಎಲ್ಲ ವಿಷಯಗಳ ಪುನರ್‌ಮನನ ಕಾರ್ಯಕ್ರಮ ಪ್ರಸಾರ ಮಾಡಲಾಗುತ್ತಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಗ್ರಾಮೀಣ ಮಕ್ಕಳು ಚಂದನ ವಾಹಿನಿ ಟಿವಿ ನೋಡುವುದಿಲ್ಲ ಎನ್ನುವುದಾದರೆ ಏನು ಮಾಡಬೇಕು ಎಂಬುದನ್ನು ನೀವೆ ಹೇಳಿ’ ಎಂದು ಸಚಿವರು ಮಾಧ್ಯಮದವರಿಗೆ ಮರು ಪ್ರಶ್ನಿಸಿದರು.

ADVERTISEMENT

ಮಕ್ಕಳಿಗೆ ಮಾಸ್ಕ್‌ ವಿತರಣೆ, ಸ್ಯಾನಿಟೈಸರ್‌, ಅಂತರ ಪಾಲನೆ ಸೇರಿದಂತೆ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುವುದು. ಸ್ಥಳೀಯ ಶಾಸಕರು ಮಕ್ಕಳಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ. ಸ್ಕೌಟ್ಸ್‌,ಗೈಡ್ಸ್‌ ವಿದ್ಯಾರ್ಥಿಗಳು ಸಮವಸ್ತ್ರದಲ್ಲಿ ಸ್ವಯಂ ಸೇವಕರಾಗಿ ಕರ್ತವ್ಯ ನಿರ್ವಹಿಸುವರು ಎಂದು ವಿವರಿಸಿದರು.

ಈಗಾಗಲೇ ಮೂರು ಜಿಲ್ಲೆಗಳಿಗೆ ಭೇಟಿ ನೀಡಿ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಲಾಗಿದೆ. ಮುಂದಿನ ವಾರ ಹತ್ತು ಜಿಲ್ಲೆಗಳ ಪ್ರವಾಸ ಕೈಗೊಂಡು ವಾಸ್ತವ ಸ್ಥಿತಿ ತಿಳಿದುಕೊಳ್ಳಲಾಗುವುದು. ಕೆಲ ಜಿಲ್ಲೆಗಳಲ್ಲಿ ಶಿಕ್ಷಕರು ವಾಟ್ಸ್‌ಆ್ಯಪ್‌ ಮೂಲಕ ಪರೀಕ್ಷೆ , ರಸಪ್ರಶ್ನೆ ಸ್ಪರ್ಧೆ ನಡೆಸುವುದು ಮಾಡುತ್ತಿದ್ದಾರೆ. ಗ್ರಾಮೀಣ ಮಕ್ಕಳಿಗೆ ಏಕಾಗ್ರತೆ ಹೆಚ್ಚು ಎಂದರು

ಪರೀಕ್ಷೆಗೆ ತೆರಳುವ ವಿದ್ಯಾರ್ಥಿಗಳು ಹಾಲ್ ಟಿಕೆಟ್ ತೋರಿಸಿದರೆ ಕೆಎಸ್‌ಆರ್‌ಟಿಸಿ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡುವಂತೆ ಸಾರಿಗೆ ಸಚಿವರಿಗೆ ಮನವಿ ಮಾಡಲಾಗುವುದು. ಮಂದಿನ‌ ದಿನಗಳಲ್ಲಿ ಬಸ್‌ಗಳ ಓಡಾಟವೂ ಏರಿಕೆಯಾಗಲಿದೆ. ವಿದ್ಯಾರ್ಥಿಗಳು ಆತಂಕ ಇಲ್ಲದೆ ಪರೀಕ್ಷೆ ಬರೆಯಬೇಕು ಎಂದು ಕರೆ ನೀಡಿದರು.

ಹೊರ ರಾಜ್ಯಗಳಿಂದ ಬಂದವರಲ್ಲಿ ಸೋಂಕು ಕಾಣಿಸಿಕೊಂಡಿದೆ. ಈವರೆಗೆ ಸೋಂಕಿತರಲ್ಲಿ 17 ಮಂದಿ ವೆಂಟಿಲೇಟರ್‌ನಲ್ಲಿ ಇದ್ದರು. ಅಮೆರಿಕಾದಲ್ಲಿ ಎರಡು ತಿಂಗಳು ಮೊದಲೇ ಲಾಕ್‌ಡೌನ್ ಮಾಡಿದ್ದರೆ ಸಾವಿನ ಪ್ರಮಾಣ ತಗ್ಗಿಸಬಹುದಿತ್ತು. ಕೆಲವು ತಿಂಗಳು ಕೊರೊನಾ ಜತೆ ಜೀವನ ನಡೆಸಬೇಕಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಶಿಕ್ಷಣ ಇಲಾಖೆ ಬಳಿ 75 ವರ್ಷ ಹಾಗೂ ಶತಮಾನದ ಶಾಲೆಗಳ ಪಟ್ಟಿ ಇದ್ದು, ಅವುಗಳ ಪುನಶ್ಚೇತನಕ್ಕೆ ಕಾರ್ಯಕ್ರಮ ರೂಪಿಸಲಾಗುವುದು ಎಂದ ಅವರು, ಪ್ರಯೋಗಾಲಯದ ತಪ್ಪಿನಿಂದ ಮೂಡಿಗೆರೆ ವೈದ್ಯರಿಗೆ ಕೊರೊನಾ ಸೋಂಕು ತಗುಲಿದೆ ಎಂದು ವರದಿಯಾಗಿತ್ತು. ಈ ಬಗ್ಗೆ ಪರಿಶೀಲಿಸಲಾಗುವುದು ಎಂದು ಉತ್ತರಿಸಿದರು.

ಗೋಷ್ಠಿಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎ.ಪರಮೇಶ್‌, ಶಾಸಕ ಪ್ರೀತಂ ಗೌಡ, ಡಿಡಿಪಿಐ ಎಸ್‌.ಪ್ರಕಾಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.