ADVERTISEMENT

ರಾಜ್ಯದ ಬಿಜೆಪಿ ಸಂಸದರ ರಾಜೀನಾಮೆಗೆ ಎಚ್‌ಡಿ ರೇವಣ್ಣ ಒತ್ತಾಯ

ಕೋವಿಡ್‌ ಲಸಿಕೆ ಪೂರೈಕೆ ಮಾಡದಿದ್ದರೆ ಪ್ರತಿಭಟನೆ: ರೇವಣ್ಣ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 9 ಜೂನ್ 2021, 14:02 IST
Last Updated 9 ಜೂನ್ 2021, 14:02 IST
ಹಾಸನದ ಚನ್ನಪಟ್ಟಣ ಕೆರೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಿದ್ಧಪಡಿಸಿರುವ ನೀಲ ನಕ್ಷೆಯನ್ನು ಶಾಸಕ ಎಚ್‌.ಡಿ.ರೇವಣ್ಣ ಪ್ರದರ್ಶಿಸಿದರು. 
ಹಾಸನದ ಚನ್ನಪಟ್ಟಣ ಕೆರೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಿದ್ಧಪಡಿಸಿರುವ ನೀಲ ನಕ್ಷೆಯನ್ನು ಶಾಸಕ ಎಚ್‌.ಡಿ.ರೇವಣ್ಣ ಪ್ರದರ್ಶಿಸಿದರು.    

ಹಾಸನ: ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯವಾಗಿದ್ದರೂ ಧ್ವನಿ ಎತ್ತದ ಬಿಜೆಪಿ ಸಂಸದರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಶಾಸಕ ಎಚ್.ಡಿ.ರೇವಣ್ಣ ಆಗ್ರಹಿಸಿದರು.

ಕೇಂದ್ರ ಸರ್ಕಾರ ಲಸಿಕೆ ನೀಡುವುದರಲ್ಲೂ ರಾಜಕೀಯ ಮಾಡುತ್ತಿದೆ. ಅಭಿವೃದ್ಧಿ ವಿಚಾರದಲ್ಲಿ ಹಲವು ಬಾರಿ ತಾರತಮ್ಯ ಆಗಿದ್ದರೂ ಎರಡು ವರ್ಷದಿಂದ ರಾಜ್ಯದ ಪರ ಧ್ವನಿ ಎತ್ತಿಲ್ಲ.ಸಂಸದರು ಪ್ರಯಾಣ ಭತ್ಯೆ ಮತ್ತು ತುಟ್ಟಿ ಭತ್ಯೆ (ಟಿಎ–ಡಿಎ) ಪಡೆಯಲು ದೆಹಲಿಗೆಹೋಗಿ ಬರುತ್ತಿದ್ದಾರೆ. ತಮ್ಮನ್ನು ಆಯ್ಕೆ ಮಾಡಿದ ಮತದಾರರಿಗೆ ದ್ರೋಹಮಾಡುತ್ತಿದ್ದಾರೆ. ನಿಜವಾಗಿಯೂ ಗೌರವ ಇದ್ದರೆ ರಾಜೀನಾಮೆ ಕೊಟ್ಟು ಹೋಗಬೇಕುಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಜೂನ್‌ 11 ರಂದು ಹಾಸನಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭೇಟಿ ನೀಡುತ್ತಿದ್ದು, ಕೋವಿಡ್‌ ನಿಯಂತ್ರಣ ಹಾಗೂ ಅಭಿವೃದ್ಧಿ ವಿಚಾರ ಬಗ್ಗೆ ಚರ್ಚಿಸುವುದಾಗಿಹೇಳಿದ್ದಾರೆ. ಕೋವಿಡ್‌ನಿಂದ ಮೃತಪಟ್ಟ ಕುಟುಂಬದವರಿಗೆ ಎನ್‌ಡಿಆರ್‌ಎಫ್‌ ನಿಂದ₹5 ಲಕ್ಷ ಹಾಗೂ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ತಲಾ ₹ 1 ಲಕ್ಷ ಪರಿಹಾರವನ್ನು ನೀಡಬೇಕು ಎಂದು ಒತ್ತಾಯಿಸಿದರು.

ADVERTISEMENT

ಹಾಸನದಲ್ಲಿ ವಿಮಾನ ನಿಲ್ದಾಣ ಯೋಜನೆ ಐದು ದಶಕಗಳಿಂದ ನನೆಗುದಿಗೆ ಬಿದ್ದಿದೆ. ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಯೋಜನೆಗೆ ಅನುಮೋದನೆನೀಡಿದ್ದರು. ಆದರೆ, 2008ರಲ್ಲಿ ಯಡಿಯೂರಪ್ಪ ಅವರೇ ಈ ಕಾಮಗಾರಿಗೆ ತಡೆ ಹಿಡಿದರು.ಹಾಸನದ ಚನ್ನಪಟ್ಟಣ ಕೆರೆ ಅಭಿವೃದ್ಧಿಗೆ ₹144 ಕೋಟಿ ವೆಚ್ಚದ ಕ್ರಿಯಾ ಯೋಜನೆರೂಪಿಸಿ, ₹84 ಲಕ್ಷ ವೆಚ್ಚದಲ್ಲಿ ನೀಲ ನಕ್ಷೆ ಸಿದ್ದಪಡಿಸಲಾಗಿದೆ. ಈಗ ಅನುದಾನ ತಡೆ ಹಿಡಿಯಲಾಗಿದೆ. ಜಿಲ್ಲೆಯ ಅಭಿವೃದ್ಧಿಗೆ ಎರಡು ರಾಷ್ಟ್ರೀಯ ಪಕ್ಷಗಳು ಕಂಟಕವಾಗಿವೆ ಎಂದು ದೂರಿದರು.

ವಿಮಾನ ನಿಲ್ದಾಣ, ಚನ್ನಪಟ್ಟಣ ಕೆರೆ, ರಸ್ತೆಗಳು ಎಲ್ಲವೂ ನೆನೆಗುದಿಗೆ ಬೀಳಲುಯಡಿಯೂರಪ್ಪ ಅವರೇ ಕಾರಣ. ಹಾಸನಕ್ಕೆ ಬರಬೇಕಾಗಿದ್ದ ಐಐಟಿ ತಪ್ಪಿಸಿದರು. ಮೃತಕುಟುಂಬಗಳಿಗೆ ಪರಿಹಾರ ನೀಡಲು ಆಗದಿದ್ದರೆ ಸರ್ಕಾರ ದೀವಾಳಿಯಾಗಿದೆ ಎಂದುಘೋಷಿಸಲಿ ಎಂದು ವ್ಯಂಗ್ಯವಾಡಿದರು.

ಕೇಂದ್ರ ಸರ್ಕಾರ ಕೋವಿಡ್ ಲಸಿಕೆಗಾಗಿ ಬಜೆಟ್‌ನಲ್ಲಿ ₹ 36 ಸಾವಿರ ಕೋಟಿಮೀಸಲಿಟ್ಟಿತ್ತು. ಆ ಹಣ ಎಲ್ಲಿಗೆ ಹೋಯಿತು. ಎಷ್ಟು ಲಸಿಕೆ ಕೊಟ್ಟಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಜಿಲ್ಲೆಗೆ ಲಸಿಕೆ ಪೂರೈಸದಿದ್ದರೆ ಪ್ರತಿಭಟನೆಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.