ADVERTISEMENT

ಮಜ್ಜಿಗೆ ಮಾರಿ ಶಾಸಕನಾಗಿದ್ದು ತಪ್ಪಲ್ಲ: ಶಾಸಕ ಕೆ.ಎಂ. ಶಿವಲಿಂಗೇಗೌಡ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2026, 6:52 IST
Last Updated 16 ಫೆಬ್ರುವರಿ 2026, 6:52 IST
ಗಂಡಸಿ ಹೋಬಳಿ ಕಾಂಗ್ರೆಸ್ ಕಾರ್ಯಕರ್ತರು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಶಾಸಕ ಕೆ.ಎಂ. ಶಿವಲಿಂಗೇಗೌಡ ಕೇಕ್ ಕತ್ತರಿಸಿದರು
ಗಂಡಸಿ ಹೋಬಳಿ ಕಾಂಗ್ರೆಸ್ ಕಾರ್ಯಕರ್ತರು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಶಾಸಕ ಕೆ.ಎಂ. ಶಿವಲಿಂಗೇಗೌಡ ಕೇಕ್ ಕತ್ತರಿಸಿದರು   

ಗಂಡಸಿ: ಚಹಾ ಮಾರಿದ ವ್ಯಕ್ತಿ ದೇಶದ ಪ್ರಧಾನಿ ಆಗಿರುವಾಗ ಮಜ್ಜಿಗೆ ಮಾರಿ ನಾನು ಎಂಎಲ್ಎ ಆಗಿರುವುದರಲ್ಲಿ ತಪ್ಪೇನಿದೆ? ಗಂಡು ಮೆಟ್ಟಿದ ನಾಡು ಗಂಡಸಿ ಹೋಬಳಿಯ ಗಂಡೆದೆಯ ಮಗ ನಾನು. ಯಾವುದೇ ವ್ಯಕ್ತಿಯ ಬೆದರಿಕೆಗೆ ಬಗ್ಗುವ, ಜಗ್ಗುವ ಜಾಯಮಾನ ನನ್ನದಲ್ಲ ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಹೇಳಿದರು.

ಹೋಬಳಿಯ ಗಂಡಸಿ ಹ್ಯಾಂಡ್ ಪೋಸ್ಟ್ ಸರ್ಕಲ್ ಬಳಿ ಗಂಡಸಿ ಹೋಬಳಿಯ ಕಾಂಗ್ರೆಸ್ ಕಾರ್ಯಕರ್ತರು ಶನಿವಾರ ರಾತ್ರಿ ಏರ್ಪಡಿಸಿದ್ದ ತಮ್ಮ 68ನೇ ವರ್ಷದ ಜನ್ಮದಿನದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಈ ಅದ್ದೂರಿ ಕಾರ್ಯಕ್ರಮ ಕಣ್ತುಂಬಿಕೊಳ್ಳುವ ಭಾಗ್ಯ ನನ್ನದಾಗಿದ್ದು, ಈ ಜನ್ಮದಲ್ಲಿ ಗಂಡಸಿ ಹೋಬಳಿಯ ಕಾಂಗ್ರೆಸ್ ಅಭಿಮಾನಿಗಳ ಋಣ ತೀರಿಸಲು ಸಾಧ್ಯವಿಲ್ಲ ಎಂದರು.

ಗಂಡಸಿ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕನಾಗಿ ನನ್ನ ರಾಜಕೀಯ ಜೀವನ ಪ್ರಾರಂಭವಾಗಿದ್ದು, ನಂತರ ಬಾಗೇಶಪುರ ಕ್ಷೇತ್ರದ ಜಿ.ಪಂ. ಸದಸ್ಯನಾಗಿ, ಗಂಡಸಿ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಪರಾಜಿತನಾಗಿ, ರಾಜಕೀಯ ಜೀವನದ ಏಳುಬೀಳುಗಳ ನಡುವೆ 4 ಬಾರಿ ಶಾಸಕನಾಗಿ ಅರಸೀಕೆರೆ ಕ್ಷೇತ್ರದ ಮತದಾರರು ನನ್ನನ್ನು ಆಯ್ಕೆ ಮಾಡಿದ್ದಾರೆ ಎಂದರು.

ADVERTISEMENT

ನನ್ನ ಆರಾಧ್ಯ ದೈವ ವೇಣುಗೋಪಾಲಸ್ವಾಮಿಯ ಮೇಲೆ ಆಣೆ. ರಾಜ್ಯದಲ್ಲೇ ಅರಸೀಕೆರೆ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುವ ಗುರಿ ನನ್ನದು. ಕ್ಷೇತ್ರ ಅಭಿವೃದ್ಧಿಗೆ ಪ್ರಮುಖ ಯೋಜನೆಗಳನ್ನು ತರಲು ಹಾಗೂ ಕೊಟ್ಟ ಮಾತಿಗೆ ತಪ್ಪಿದ್ದರಿಂದ ಪಕ್ಷ ಬದಲಾಯಿಸಬೇಕಾಯಿತು. ಬಹಿರಂಗವಾಗಿ ಹೇಳಿಕೆ ನೀಡಿ ಜೆಡಿಎಸ್‌ನಿಂದ ಹೊರ ಬಂದಿದ್ದೇನೆ. ಈ ಬಾರಿ ಜೆಡಿಎಸ್ ಅಧಿಕಾರಕ್ಕೆ ಬರುವುದಿಲ್ಲ ಎಂಬುದು ನನಗೆ ತಿಳಿದಿದ್ದು, ನನ್ನ ಕ್ಷೇತ್ರದ ಅಭಿವೃದ್ಧಿಗೆ ಅನುದಾನ, ಯೋಜನೆಗಳನ್ನು ತರಲು ಕಷ್ಟವಾಗುತ್ತದೆ ಎಂಬ ಕಾರಣದಿಂದ ಕಾಂಗ್ರೆಸ್ ಪಕ್ಷ ಸೇರಬೇಕಾಯಿತು ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಆಶೀರ್ವಾದ ನನ್ನ ಮೇಲಿದೆ. ಕ್ಷೇತ್ರದ ಅಭಿವೃದ್ಧಿಗೆ ಅನುದಾನ ತರುವುದನ್ನು ತಡೆಯಲು ಕೆಲವರು ತೆರೆಮರೆಯಲ್ಲಿ ಷಡ್ಯಂತ್ರ ನಡೆಸುತ್ತಿದ್ದು, ಕ್ಷೇತ್ರದ ಅಭಿವೃದ್ಧಿಯನ್ನು ತಡೆಯಲು ಅವರಿಂದ ಸಾಧ್ಯವಾಗುವುದಿಲ್ಲ ಎಂದರು.

ಕೆಲವೇ ದಿನಗಳಲ್ಲಿ ಗಂಡಸಿ ಹೋಬಳಿಯ ಕೆರೆಗಳಿಗೆ ನೀರು ತುಂಬಿಸಲಾಗುವುದು. ಗಂಡಸಿ ಹ್ಯಾಂಡ್ ಪೋಸ್ಟ್‌ನ ಎಪಿಎಂಸಿ ಬಳಿ ಬಸ್ ನಿಲ್ದಾಣ, ಹಾಸನ ರಸ್ತೆಯಲ್ಲಿ ಸಮುದಾಯ ಭವನಕ್ಕೆ ಭೂಮಿ ಪೂಜೆ ಮಾಡಲಾಗುವುದು. ಗಂಡಸಿ ಹೋಬಳಿಗೆ ನದಿ ಮೂಲದ ನೀರು ಬರಲು ಗುಡ್ಡಗಳು ಅಡ್ಡ ಬರುತ್ತವೆ ನೀರು ತರಲು ಸಾಧ್ಯವಿಲ್ಲ ಎಂಬ ಸುಳ್ಳು ಹೇಳುವ ಮೂಲಕ ಕ್ಷೇತ್ರದ ಜನತೆಯನ್ನು ವಂಚಿಸಿದ್ದೀರಿ. ಈಗ ತಾಲ್ಲೂಕಿನ 539 ಹಳ್ಳಿಗಳಿಗೂ ಶುದ್ಧ ಕುಡಿಯುವ ನೀರನ್ನು ಒದಗಿಸುವುದರ ಜೊತೆಗೆ ಕ್ಷೇತ್ರದ ಪ್ರತಿ ಹಳ್ಳಿಗಳಲ್ಲೂ ಉತ್ತಮವಾದ ಕಾಂಕ್ರೀಟ್ ರಸ್ತೆ , ಹೈಮಾಸ್ಟ್‌ ದೀಪ, ಪ್ರತಿ ಗ್ರಾಮದಲ್ಲೂ ಸಮುದಾಯ ಭವನ, ದೇವಾಲಯಗಳ ಜೀರ್ಣೋದ್ಧಾರ, ವಸತಿ ಶಾಲೆಗಳು, ಎಂಜಿನಿಯರಿಂಗ್ ಕಾಲೇಜು, ಪಾಲಿಟೆಕ್ನಿಕ್ ಕಾಲೇಜು ಸೇರಿದಂತೆ ಹಲವು ಜನಪರ ಯೋಜನೆಗಳನ್ನು ಮಂಜೂರು ಮಾಡಿಸಿಕೊಳ್ಳುವ ಮೂಲಕ ಜಾರಿಗೆ ತಂದಿದ್ದೇನೆ ಎಂದು ವಿವರಿಸಿದರು.

ಜನ್ಮದಿನದ ಪ್ರಯುಕ್ತ ಡೊಳ್ಳು ಕುಣಿತ, ತಮಟೆ ವಾದ್ಯ, ಚೆಂಡೆ ವಾದ್ಯಗಳ ಭೋರ್ಗರಿತದೊಂದಿಗೆ ಹಾಗೂ ಭಾರಿ ಮದ್ದು ಗುಂಡುಗಳ ಸುರಿಮಳೆಯೊಂದಿಗೆ ತೆರೆದ ವಾಹನದಲ್ಲಿ ಶಾಸಕ ಕೆ.ಎಂ. ಶಿವಲಿಂಗೇಗೌಡರ ಮೆರವಣಿಗೆ ನಡೆಸಲಾಯಿತು. ಮಡೆನೂರು ಮನು ಮತ್ತು ತಂಡದವರಿಂದ ಸುಗಮ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಸಂಸದ ಶ್ರೇಯಸ್ ಎಂ ಪಾಟೀಲ್, ಕಾಂಗ್ರೆಸ್ ಮುಖಂಡರಾದ ಎಂ.ಎ. ಗೋಪಾಲಸ್ವಾಮಿ, ಶ್ರೀಧರ್ ಗೌಡ, ಪುಟ್ಟಸ್ವಾಮಿಗೌಡ, ಮುರುಳಿ ಮೋಹನ್, ಎಚ್.ಕೆ. ಮಹೇಶ್, ಲಕ್ಷ್ಮಣ್, ಬಾಗೂರು ಮಂಜೇಗೌಡ, ಶ್ರೀನಿವಾಸ್, ಬಿಳಿ ಚೌಡಯ್ಯ, ಹುಚ್ಚೇಗೌಡ, ಧರ್ಮಶೇಖರ್, ಅರುಣ್ ಕುಮಾರ್, ಇತರರು ಹಾಜರಿದ್ದರು. 

ಜೆಡಿಎಸ್ ನಿಮ್ಮ ಮನೆತನಕ್ಕೆ ಸೀಮಿತವಾದ ಪಕ್ಷ. ಬಿಳಿ ಚೌಡಯ್ಯನವರಿಗೆ ಭರವಸೆ ನೀಡಿ ನಿಮ್ಮ ಮನೆ ಮಗನಿಗೆ ಎಂಎಲ್‌ಸಿ ಮಾಡಿ ಮಾತಿಗೆ ತಪ್ಪಿದವರು ನೀವು. ಅರಸೀಕೆರೆಗೆ ನಿಮ್ಮ ಕೊಡುಗೆ ಏನು ಎಂಬುದನ್ನು ಸಾಬೀತುಪಡಿಸಿ
ಕೆ.ಎಂ. ಶಿವಲಿಂಗೇಗೌಡ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.