ADVERTISEMENT

ತಹಶೀಲ್ದಾರ್‌ ವಿರುದ್ಧ ಶಾಸಕ ಲಿಂಗೇಶ್‌ ಆಕ್ರೋಶ

ಬರ ಪರಿಸ್ಥಿತಿ ನಿಭಾಯಿಸಲು ತಾಲ್ಲೂಕು ಆಡಳಿತ ವಿಫಲ

​ಪ್ರಜಾವಾಣಿ ವಾರ್ತೆ
Published 18 ಮೇ 2019, 20:20 IST
Last Updated 18 ಮೇ 2019, 20:20 IST

ಬೇಲೂರು: ‘ತಾಲ್ಲೂಕಿನ ಬರ ತಾಂಡವವಾಡುತ್ತಿದ್ದರೂ ಜಿಲ್ಲಾ ಹಾಗೂ ತಾಲ್ಲೂಕು ಆಡಳಿತ ನೀತಿ ಸಂಹಿತೆಯ ಕುಂಟು ನೆಪವೊಡ್ಡಿ ಬರ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ವಿಫಲವಾಗಿದೆ. ಅಧಿಕಾರಿಶಾಹಿ ಆಡಳಿತದಿಂದಾಗಿ ಜನರು ತೊಂದರೆಗೀಡಾಗಿದ್ದಾರೆ’ ಎಂದು ಶಾಸಕ ಕೆ.ಎಸ್‌.ಲಿಂಗೇಶ್‌ ಆಕ್ರೋಶ ವ್ಯಕ್ತಪಡಿಸಿದರು.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕುಡಿಯುವ ನೀರಿಗೆ ಹಾಹಾಕಾರದ ಪರಿಸ್ಥಿತಿ ಇದೆ. ಜಾನುವಾರುಗಳಿಗೆ ಮೇವಿಲ್ಲದಂತಾಗಿದೆ. ಬರಗಾಲ ಸ್ಥಿತಿ ಎದುರಿಸಲಾಗದೆ ಜನರು ಗುಳೆ ಹೋಗುತ್ತಿದ್ದಾರೆ’ ಎಂದರು.

‘ತಾಲ್ಲೂಕು ಮೂರ್ನಾಲ್ಕು ವರ್ಷಗಳಿಂದ ಸತತ ಬರಗಾಲದಿಂದ ನರಳುತ್ತಿದೆ. ಹಳೇಬೀಡು, ಮಾದಿಹಳ್ಳಿ, ಬಿಕ್ಕೋಡು, ಅರೇಹಳ್ಳಿ ಮತ್ತು ಕಸಬಾ ಹೋಬಳಿಗಳಲ್ಲಿ ಬರಗಾಲ ತಾಂಡವವಾಡುತ್ತಿದೆ. 20ಕ್ಕೂ ಹೆಚ್ಚು ಹಳ್ಳಿಗಳ ಜನರು ಕುಡಿಯುವ ನೀರು ದೊರಕದೆ ತೊಂದರೆಗೀಡಾಗಿದ್ದಾರೆ. ಜಾನುವಾರುಗಳಿಗೆ ಮೇವು ಸಿಗುತ್ತಿಲ್ಲ. ಮೇವು ಬ್ಯಾಂಕ್‌ ಸ್ಥಾಪಿಸಿ ದನಕರುಗಳಿಗೆ ಮೇವು ಒದಗಿಸಬೇಕಾದ ತಹಶೀಲ್ದಾರ್‌ ಜಿ. ಮೇಘನಾ ಕಾಲಹರಣ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

‘ತಾಲ್ಲೂಕಿನಲ್ಲಿ ಪರಿಸ್ಥಿತಿ ಕೈ ಮೀರುವ ಮುನ್ನ ಅಧಿಕಾರಿಗಳು ಜನ– ಜಾನುವಾರುಗಳಿಗೆ ಕುಡಿಯುವ ನೀರು ಒದಗಿಸುವುದರ ಜೊತೆಗೆ ಮೇವು ಬ್ಯಾಂಕ್‌ ಸ್ಥಾಪಿಸಿ ದನ–ಕರುಗಳಿಗೆ ಮೇವು ನೀಡಬೇಕು. ಒಂದು ವೇಳೆ ಯಾವುದೇ ಅಹಿತಕರ ಘಟನೆ ನಡೆದರೆ ಅದಕ್ಕೆ ತಹಶೀಲ್ದಾರ್‌ ಮತ್ತು ಜಿಲ್ಲಾಧಿಕಾರಿಯೇ ಹೊಣೆ’ ಎಂದು ಎಚ್ಚರಿಕೆ ನೀಡಿದರು.

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರೇ ಸಭೆ ನಡೆಸಿ ತುರ್ತಾಗಿ ಬರ ಪರಿಹಾರ ಕಾರ್ಯಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಆದರೂ ತಾಲ್ಲೂಕು ಆಡಳಿತ ಈ ಬಗ್ಗೆ ಗಮನಹರಿಸಿಲ್ಲ. ಬರಕ್ಕೆ ಸಂಬಂಧಿಸಿದಂತೆ ತಾಲ್ಲೂಕಿನಲ್ಲಿ ಕೈಗೊಂಡ ಕೆಲಸಗಳ ಬಗ್ಗೆ ಮಾಹಿತಿ ಪಡೆಯಲು ಇತ್ತೀಚೆಗೆ ತಹಶೀಲ್ದಾರ್‌ ಕೊಠಡಿಗೆ ಹೋದರೆ, ತಮ್ಮ ಜೊತೆ ಸೌಜನ್ಯಕ್ಕೂ ಮಾತನಾಡಲಿಲ್ಲ. ‘ಚುನಾವಣೆ ನೀತಿ ಸಂಹಿತೆ ಇರುವುದರಿಂದ ಶಾಸಕರೊಂದಿಗೆ ಮಾತನಾಡಬೇಡಿ ಎಂದು ಜಿಲ್ಲಾಧಿಕಾರಿ ಸೂಚಿಸಿದ್ದಾರೆ’ ಎಂದು ಹೇಳಿ ಹೊರ ಹೋಗಿ ತಮಗೆ ಅಗೌರವ ತೋರಿದರು ಎಂದರು.

‘ಎರಡು ವಾರಕ್ಕೆ ಸಾಕಾಗುವಷ್ಟು ದನ–ಕರುಗಳಿಗೆ ಮೇವು ಇದೆ ಎಂದು ಪಶು ಇಲಾಖೆ ಅಧಿಕಾರಿಗಳು ವರದಿ ನೀಡಿದ್ದಾರೆ. ಆದ್ದರಿಂದ ಮೇವು ಬ್ಯಾಂಕ್‌ ಸ್ಥಾಪಿಸುವುದಿಲ್ಲ’ ಎಂದು ತಹಶೀಲ್ದಾರ್‌ ಹೇಳುತ್ತಾರೆ. ಆದರೆ ಎರಡು ವಾರಗಳ ಬಳಿಕ ಜಾನುವಾರುಗಳ ಸ್ಥಿತಿ ಏನು. ಮುನ್ನೆಚ್ಚರಿಕೆಯಾಗಿ ಮೇವು ಸಂಗ್ರಹಿಸುವುದು ತಾಲ್ಲೂಕು ಆಡಳಿತದ ಜವಾಬ್ದಾರಿಯಲ್ಲವೇ? ಎರಡು ವಾರಗಳ ಬಳಿಕ ಮೇವಿಗೆ ಕೊರತೆಯಾದರೆ ತಹಶೀಲ್ದಾರ್‌ ಅವರನ್ನೇ ಹೊಣೆಗಾರರನ್ನಾಗಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ನೀತಿ ಸಂಹಿತೆಯ ನೆಪವೊಡ್ಡುತ್ತಿರುವ ಅಧಿಕಾರಿಗಳಿಗೆ ನೀತಿ ಸಂಹಿತೆ ಮುಕ್ತಾಯದ ಬಳಿಕ ಮೈಚಳಿ ಬಿಡಿಸಲಾಗುವುದು ಎಂದು ಶಾಸಕ ಕಿಡಿಕಾರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.