ADVERTISEMENT

ಹಾಸನ: ಶಾಸಕ ಶಿವಲಿಂಗೇಗೌಡ ಕ್ಷಮೆಯಾಚಿಸಲಿ

ಅರಸೀಕೆರೆ ಜೆಡಿಎಸ್ ಬಂಡಾಯ ಸದಸ್ಯರ ಆಗ್ರಹ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2021, 17:08 IST
Last Updated 15 ನವೆಂಬರ್ 2021, 17:08 IST

ಹಾಸನ: ‘ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಹಾಗೂ ಎಚ್.ಡಿ. ಕುಮಾರಸ್ವಾಮಿ ಅವರ ಬಗ್ಗೆ ಲಘುವಾಗಿ ಮಾತನಾಡಿರುವ ಶಾಸಕ ಕೆ.ಎಂ. ಶಿವಲಿಂಗೇಗೌಡ ಅವರು ಬಹಿರಂಗ ಕ್ಷಮೆ ಕೇಳಬೇಕು’ ಎಂದು ಅರಸೀಕೆರೆ ನಗರಸಭೆ ಜೆಡಿಎಸ್ ಬಂಡಾಯ ಸದಸ್ಯರು ಒತ್ತಾಯಿಸಿದರು.

‘ಪರಿಷತ್ ಚುನಾವಣೆಯಲ್ಲಿ ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರು ಬಂದು ಹೇಳಿದಾಕ್ಷಣ ಯಾರೂ ಮತ ಹಾಕುವುದಿಲ್ಲ ಎಂದು ಶಿವಲಿಂಗೇಗೌಡ ಹೇಳಿರುವುದು ಖಂಡನಾರ್ಹ. ಅರಸೀಕೆರೆಯಲ್ಲಿ ಜೆಡಿಎಸ್ ಪಕ್ಷ ಕಟ್ಟಿ ಮೂರು ಬಾರಿ ಅವರನ್ನು ಶಾಸಕರನ್ನಾಗಿ ಮಾಡಿದ್ದೇವೆ. ಪ್ರತಿ ಚುನಾವಣೆಯಲ್ಲೂ ದೇವೇಗೌಡರ ಮುಖ ನೋಡಿಕೊಂಡು ಜೆಡಿಎಸ್‍ಗೆ ಮತ ನೀಡಿದ್ದೇವೆಯೇ ಹೊರತು ಶಿವಲಿಂಗೇಗೌಡರ ಮುಖ ನೋಡಿ ಮತ ಹಾಕಿಲ್ಲ. ಕೂಡಲೇ ಶಾಸಕರು ತಮ್ಮ ಹೇಳಿಕೆ ಬಗ್ಗೆ ಕ್ಷಮೆ ಕೇಳಬೇಕು’ ಎಂದು ಸದಸ್ಯರಾದ ಸಿಕಂದರ್, ಹರ್ಷವರ್ಧನ್, ನೀಲಗಿರಿ ಗೌಡ ಸೋಮವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಹರ್ಷವರ್ಧನ್ ಮಾತನಾಡಿ, ‘ಅರಸೀಕೆರೆಯಲ್ಲಿ ಯಾವ ಸದಸ್ಯರಿಗೂ ಶಿವಲಿಂಗೇಗೌಡರು ಬೆಲೆ ನೀಡುವುದಿಲ್ಲ. ಅವರ ದಬ್ಬಾಳಿಕೆ ಹಾಗೂ ಸರ್ವಾಧಿ ಕಾರಿ ಧೋರಣೆಯಿಂದ ಬೇಸತ್ತು ಜೆಡಿಎಸ್‌ನಿಂದ ಬಂಡಾಯ ಎದ್ದು ಹೊರ ಬಂದಿದ್ದೇವೆ. ಆದರೆ ಯಾವ ಪಕ್ಷಕ್ಕೂ ಸೇರ್ಪಡೆಯಾಗಿಲ್ಲ. ಜೆಡಿಎಸ್‌ನಲ್ಲಿಯೇ ಇದ್ದೇವೆ. ಇನ್ನೂ 6 ಮಂದಿ ನಮ್ಮ ಜೊತೆ ಬರಲು ಸಿದ್ಧರಿದ್ದಾರೆ. ಜೊತೆಗೆ ಹತ್ತಕ್ಕೂ ಹೆಚ್ಚು ಗ್ರಾಮ ಪಂಚಾಯಿತಿ ಅಧ್ಯಕ್ಷರು ಕೂಡಾ ಪಕ್ಷ ತೊರೆಯಲು ಸಿದ್ಧರಿದ್ದಾರೆ’ ಎಂದು ತಿಳಿಸಿದರು.

ADVERTISEMENT

ನೀಲಗಿರಿ ಗೌಡ ಮಾತನಾಡಿ, ‘ನಗರಸಭೆ ಸದಸ್ಯರನ್ನು ಲೆಕ್ಕಕ್ಕೇ ಇಡುವು ದಿಲ್ಲ. ಕ್ಷೇತ್ರದಲ್ಲಿ ಜೆಡಿಎಸ್ ಉಳಿಯ ಬೇಕಾದರೆ ಮುಂದಿನ ಚುನಾವಣೆ ಯಲ್ಲಿ ನಿಷ್ಠಾವಂತ ಕಾರ್ಯಕರ್ತರಿಗೆ ಅವಕಾಶ ನೀಡಬೇಕು. ಅಥವಾ ದೇವೇಗೌಡರ ಕುಟುಂಬದ ಸದಸ್ಯರು ಬಂದು ಸ್ಪರ್ಧಿಸಿದರೂ ಅವರನ್ನು ಗೆಲ್ಲಿಸುತ್ತೇವೆ. ಮತ್ತೆ ಶಿವಲಿಂಗೇಗೌಡರಿಗೆ ಟಿಕೆಟ್ ನೀಡಿದರೆ ಬೆಂಬಲಿಸುವುದಿಲ್ಲ. ಜೆಡಿಎಸ್ ಸೋಲು ಖಚಿತ’ ಎಂದು ಎಚ್ಚರಿಸಿದರು.

ಸದಸ್ಯ ವಿದ್ಯಾಧರ್ ಮಾತನಾಡಿ, ‘ಶಿವಲಿಂಗೇಗೌಡರ ವಿರುದ್ಧ ನಮ್ಮ ಬಂಡಾಯವೇ ಹೊರತು ಜೆಡಿಎಸ್ ವಿರುದ್ಧ ಅಲ್ಲ. ನಮಗೆ ಪಕ್ಷದಿಂದಲೂ ವಿಪ್ ಜಾರಿ ಆಗಿಲ್ಲ. ಈ ಪ್ರಕರಣ ಜಿಲ್ಲಾಧಿ ಕಾರಿ ನ್ಯಾಯಾಲಯದಲ್ಲಿದೆ’ ಎಂದರು.

ನಗರಸಭೆ ಸದಸ್ಯರಾದ ದರ್ಶನ್, ಪುಟ್ಟಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.