ADVERTISEMENT

ಹಾಸನ | ಮೊಬೈಲ್‌ ವ್ಯಸನಕ್ಕೆ ಬಲಿ ಆಗಬೇಡಿ: ನ್ಯಾಯಾಧೀಶೆ ಹೇಮಾವತಿ

ಹೆಣ್ಣುಮಕ್ಕಳ ಸಂರಕ್ಷಣೆ ಅರಿವು ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2025, 1:55 IST
Last Updated 5 ಆಗಸ್ಟ್ 2025, 1:55 IST
ಹಾಸನದ ಎವಿಕೆ ಮಹಿಳಾ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನ್ಯಾಯಾಧೀಶೆ ಹೇಮಾವತಿ ಮಾತನಾಡಿದರು
ಹಾಸನದ ಎವಿಕೆ ಮಹಿಳಾ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನ್ಯಾಯಾಧೀಶೆ ಹೇಮಾವತಿ ಮಾತನಾಡಿದರು   

ಹಾಸನ: ಮಕ್ಕಳು ಹರಿಹರೆಯದಲ್ಲಿ ಸಾಮಾಜಿಕ ಜಾಲತಾಣ, ಮೊಬೈಲ್‌ ಫೋನ್‌ ವ್ಯಸನಕ್ಕೆ ಬಲಿಯಾಗದೇ ಸಾಧನೆಯಡೆಗೆ ಮುನ್ನೆಡೆಯಿರಿ ಎಂದು ಪ್ರಧಾನ ಜಿಲ್ಲಾ ಹಾಗೂ ಸೆಷನ್ಸ್‌ ನ್ಯಾಯಾಧೀಶೆ ಹೇಮಾವತಿ ತಿಳಿಸಿದರು.

ರಾಜ್ಯ ಮಕ್ಕಳ ಹಕ್ಕುಗಳ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್ ಇಲಾಖೆ ,ಶಾಲಾ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ನಗರದ ಎವಿಕೆ ಕಾಲೇಜು ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಬಾಲ್ಯ ವಿವಾಹ ನಿಷೇಧ ಕಾಯ್ದೆ, ಪೋಕ್ಸೊ, ಹೆಣ್ಣುಮಕ್ಕಳ ಸಂರಕ್ಷಣೆ ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮ ದೇಶವು ಅತಿ ಹೆಚ್ಚು ಮಾನವ ಸಂಪನ್ಮೂಲ ಹೊಂದಿದ್ದು, ಉತ್ತಮ ಶಿಕ್ಷಣ, ಕೌಶಲ ಗಳಿಸಿದರೆ ಸಮಾಜಕ್ಕೆ ಅಮೂಲ್ಯ ಸಂಪನ್ಮೂಲ ಆಗುತ್ತಾರೆ. ಆದರೆ ಯುವ ಜನತೆ ಮೊಬೈಲ್‌ಗಳಿಗೆ ಬಲಿಯಾಗಿ ಸಮಯ ವ್ಯರ್ಥಮಾಡುತ್ತ, ದೇಶಕ್ಕೆ ಹೊರೆಯಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

ಮಕ್ಕಳು ನಮ್ಮ ಅಮೂಲ್ಯ ಆಸ್ತಿ. ನಿಮಗೆ ಸಮಾಜ, ಕುಟುಂಬ ಹಾಗೂ ದೇಶ ಉತ್ತಮ ಅವಕಾಶಗಳನ್ನು ಕಲ್ಪಿಸಿದೆ. ಪೌಷ್ಟಿಕ ಆಹಾರ ಸಿಗುತ್ತದೆ. ಈ ಅವಕಾಶ ಬಳಸಿಕೊಂಡು ಉತ್ತಮ ಶಿಕ್ಷಣ ಪಡೆಯಿರಿ. ಹೊಸ ಅನ್ವೇಷಣೆಯಲ್ಲಿ ತೊಡಗಿ. ದೇಶ ಮುನ್ನೆಡೆಯಲು ಸಹಕರಿಸಿ ಎಂದು ಸಲಹೆ ನೀಡಿದರು‌.

ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ದಿಲೀಪ್ ಕೆ.ಜಿ. ಮಾತನಾಡಿ, ಜಿಲ್ಲೆಯಲ್ಲಿ ಕಂಡು ಬರುವ ಅನಾಥ, ಪರಿತ್ಯಕ್ತ, ಸಂಕಷ್ಟ ಹಾಗೂ ಹಿಂಸೆ, ದೌರ್ಜನ್ಯಗಳಿಗೆ ಒಳಗಾಗುವ ಮಕ್ಕಳಿಗೆ ರಕ್ಷಣೆ, ಆಪ್ತ ಸಮಾಲೋಚನೆ, ಶಿಕ್ಷಣ ಹಾಗೂ ವಸತಿಯುತ ಪುನರ್ವಸತಿ ಕಲ್ಪಿಸಲು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಶ್ರಮಿಸುತ್ತಿದೆ. ಯಾವುದೇ ಸಂಕಷ್ಟ ಪರಿಸ್ಥಿತಿಯಲ್ಲಿ ಮಕ್ಕಳು ಕಂಡುಬಂದರೆ ಸಾರ್ವಜನಿಕರು 1098 ಕ್ಕೆ ಕರೆ ಮಾಡುವಂತೆ ತಿಳಿಸಿದರು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಕಾಂತರಾಜು, ಬಾಲ್ಯವಿವಾಹಕ್ಕೆ ಕಾರಣಗಳು, ಪರಿಣಾಮಗಳು ಹಾಗೂ ಕಾನೂನಿನ ಕುರಿತು ಹಾಗೂ ಪೋಕ್ಸೊ ಕಾಯ್ದೆಯ ಬಗ್ಗೆ ಮಾಹಿತಿ ನೀಡಿದರು. ಉಪನ್ಯಾಸಕರಾದ ಮುರುಳಿ, ಸುನೀಲ್ ಇತರರು ಹಾಜರಿದ್ದರು.

‘ಜೀವನ ಹಾಳುಮಾಡಿಕೊಳ್ಳದಿರಿ’:

ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಿರಿಯ ಸಿವಿಲ್‌ ನ್ಯಾಯಾಧೀಶೆ ದಾಕ್ಷಾಯಣಿ ಬಿ.ಕೆ. ಮಾತನಾಡಿ ಇತ್ತೀಚಿನ ದಿನಗಳಲ್ಲಿ ನಮ್ಮ ಜಿಲ್ಲೆಯಲ್ಲಿಯೂ ಬಾಲ್ಯವಿವಾಹ ಮತ್ತು ಪೋಕ್ಸೊ ಪ್ರಕರಣಗಳು ಹೆಚ್ಚಾಗುತ್ತಿವೆ. ಹರಿಹರೆಯದ ಮಕ್ಕಳು ತಮ್ಮ ವಯಸ್ಸಿನಲ್ಲಿ ಆಗುವ ಬದಲಾವಣೆ ಬೆಳವಣಿಗೆಯಿಂದ ಆಕರ್ಷಣೆಗಳಿಗೆ ಒಳಗಾಗುತ್ತಾರೆ ಎಂದರು. ಸಣ್ಣ ವಯಸ್ಸಿನಲ್ಲಿ ಮನೆ ಬಿಟ್ಟು ಓಡಿಹೋಗುವುದು ಬಾಲ್ಯವಿವಾಹಕ್ಕೆ ಒಳಗಾಗುವುದು ನಂತರ ಲೈಂಗಿಕ ದೌರ್ಜನ್ಯಗಳಿಗೆ ಒಳಗಾಗುತ್ತಾರೆ. ಚಿಕ್ಕ ವಯಸ್ಸಿನಲ್ಲಿ ಅಮೂಲ್ಯ ಜೀವನ ಹಾಳು ಮಾಡಿಕೊಳ್ಳಬಾರದು. ಉತ್ತಮ ಆಲೋಚನೆ ನಡವಳಿಕೆ ಬೆಳೆಸಿಕೊಳ್ಳಿ. ಉತ್ತಮ ಪ್ರಜೆಗಳಾಗಿ ಎಂದು ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.