ADVERTISEMENT

‘ಹಣ ನೀಡಿದರಷ್ಟೇ ಸನ್ಮಾನ, ಸಮ್ಮೇಳನಾಧ್ಯಕ್ಷ ಸ್ಥಾನ‘

ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ ವಿರುದ್ಧ ಗೋಪಾಲಗೌಡ ಆರೋಪ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2020, 15:03 IST
Last Updated 17 ಡಿಸೆಂಬರ್ 2020, 15:03 IST
ಗಂಜಲಗೂಡು ಗೋಪಾಲಗೌಡ
ಗಂಜಲಗೂಡು ಗೋಪಾಲಗೌಡ   

ಹಾಸನ: ‘ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ ಮತ್ತು ಅವರ ತಂಡ ಸಾಕಷ್ಟು ಭ್ರಷ್ಟಾಚಾರ ನಡೆಸಿದೆ. ಪರಿಷತ್‌ ವತಿಯಿಂದ ಸನ್ಮಾನ ಹಾಗೂ ಸಮ್ಮೇಳನ ಅಧ್ಯಕ್ಷರಾಗಬೇಕಾದರೆ ಹಣ ನೀಡಬೇಕು’ ಎಂದು ಪರಿಷತ್‌ ಹಾಸನ ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷ ಗಂಜಲಗೂಡು ಗೋಪಾಲಗೌಡ ಆರೋಪಿಸಿದರು.

‘ಸಾಹಿತ್ಯ ಸಮ್ಮೇಳನಗಳಲ್ಲಿ ಸನ್ಮಾನ ಮಾಡಿಸಿಕೊಳ್ಳಲು ಮೂರು ಸಾವಿರ ರೂಪಾಯಿ ನೀಡಬೇಕು. ತಾಲ್ಲೂಕು ಸಮ್ಮೇಳನ ಅಧ್ಯಕ್ಷ ಸ್ಥಾನಕ್ಕೆ ಕೆಲವರಿಂದ ₹25 ಸಾವಿರ ವಸೂಲಿ ಮಾಡಲಾಗಿದೆ. ಪದಾಧಿಕಾರಿಗಳ ಆಯ್ಕೆಯಲ್ಲಿಯೂ ಇದೇ ರೀತಿ ನಡೆದಿದ್ದು, ಹಣ ಕೊಟ್ಟರೆ ಮಾತ್ರವೇ ಹುದ್ದೆಗಳನ್ನು ನೀಡಲಾಗುತ್ತಿತ್ತು. ಇದನ್ನು ಪ್ರಶ್ನಿಸಿದ್ದರಿಂದ ತಾಲ್ಲೂಕು ಘಟಕದ ಅಧ್ಯಕ್ಷಸ್ಥಾನದಿಂದ ತೆಗೆಯಲಾಯಿತು’ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

’ಸಾಹಿತ್ಯ ಪರಿಷತ್‌ ಭವನದ ಸ್ವಾಗತ ಕಮಾನು ನಿರ್ಮಾಣಕ್ಕೆ ಬೇಲೂರು ಕ್ಷೇತ್ರದ ಶಾಸಕರಾಗಿದ್ದ ವೈ.ಎನ್‌ ರುದ್ರೇಶಗೌಡ ಅವರು₹ 3 ಲಕ್ಷ ನೀಡುವುದಾಗಿ ಹೇಳಿದ್ದರು. ಮೊದಲ ಕಂತು ₹1.5 ಲಕ್ಷ ನೀಡಿದ್ದರು. ಆದರೆ, ಸಾಹಿತ್ಯ ಪರಿಷತ್‌ ರಶೀದಿ ಪುಸ್ತಕದಲ್ಲಿ ಹಣದ ವಿವರ ನಮೂದಾಗಿಲ್ಲ. ಈ ಹಣ ಎಲ್ಲಿಗೆ ಹೋಯಿತು? ಅಲ್ಲದೇ ಕಲಾವಿದರ ಕೊಠಡಿ ನಿರ್ಮಾಣಕ್ಕೂ ದೇಣಿಗೆ ಸಂಗ್ರಹಿಸಲಾಗಿತ್ತು. ಏಕೆ ಇನ್ನೂ ನಿರ್ಮಿಸಿಲ್ಲ’ ಎಂದು ಪ್ರಶ್ನಿಸಿದರು.

ADVERTISEMENT

‘ತಾಲ್ಲೂಕು ಘಟಕದ ಅಧ್ಯಕ್ಷರನ್ನು ನೇಮಕ ಮಾಡುವಾಗಲೂ ಅಭ್ಯರ್ಥಿಗಳು ತಾಲ್ಲೂಕು ಭವನಕ್ಕೆ ಸ್ವಂತ ಹಣದಿಂದ
ನಿವೇಶನ ನೀಡಬೇಕು ಎಂದು ₹50 ಛಾಪಾ ಕಾಗದದಲ್ಲಿ ಒಪ್ಪಂದಕ್ಕೆ ಸಹಿ ಮಾಡಿಸಿಕೊಳ್ಳಲಾಗಿದೆ. ಪರಿಷತ್‌ನ ಸೀಲು ಮತ್ತು ಚೆಕ್‌ ಪುಸ್ತಕ ಇಂದಿಗೂ ಅಧ್ಯಕ್ಷರ ಮನೆಯಲ್ಲಿವೆ. ಪ್ರತಿ ಕಾರ್ಯಕ್ರಮಕ್ಕೂ ಸಂಘ, ಸಂಸ್ಥೆಗಳಳಿಂದ ಚಂದಾ ಎತ್ತಲಾಗಿದೆ’ ಎಂದು ಆರೋಪಿಸಿದರು.

‘ಹೋಬಳಿ ಮಟ್ಟದಲ್ಲಿ ತಾಲ್ಲೂಕಿಗೆ ಒಂದು ಸಾಹಿತ್ಯ ಭವನ ನಿರ್ಮಾಣ ಮಾಡಲು ಒಂದೂವರೆ ಕೋಟಿ ರೂಪಾಯಿ ಅನುದಾನ ಮಂಜೂರಾಗಿತ್ತು. ಆ ಅನುದಾನ ನೇರವಾಗಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಜಿಲ್ಲಾಧಿಕಾರಿ ಖಾತೆಗೆ ಹೋಗುವುದರಿಂದ ತಮಗೆ ಲಾಭವಿಲ್ಲ ಎಂದು ಪತ್ರಕ್ಕೆ ಸಹಿ ಮಾಡಿಲ್ಲ. ಹಾಗಾಗಿ ಹೋಬಳಿ ಮಟ್ಟದ ಸಾಹಿತ್ಯ ಭವನ ನಿರ್ಮಾಣ ಇಂದಿಗೂ ಆಗಿಲ್ಲ’ ಎಂದರು.

‘ತಾಲ್ಲೂಕು ಘಟಕದ ಅಧ್ಯಕ್ಷ ಸ್ಥಾನದಿಂದ ತೆಗೆದ ಬಳಿಕ ಅಲ್ಲಿನ ಅಕ್ರಮಗಳನ್ನು ಬಯಲಿಗೆ ತೆರೆಯಲು ಮುಂದಾದಾಗ ಹಾಗೂ ‘ತಿರುಕನೋರ್ವ ಕನಸು ಕಂಡ ಮುರುಕು ಶಾಲೆಯಲ್ಲಿ’ ಎಂಬ ಕಥೆ ಬರೆಯಲು ಪ್ರಾರಂಭಿಸಿದ ಬಳಿಕ ನಾಯಕರಹಳ್ಳಿ ಮಂಜೇಗೌಡ ಅವರು ಗೂಂಡಾಗಳಿಂದ ನನ್ನ ಮೇಲೆ ಹಲ್ಲೆ ನಡೆಸಿ, ಕೊಲೆ ಪ್ರಯತ್ನ ಮಾಡಿದ್ದರು. ಆ ಪ್ರಕರಣ ಈಗ ನ್ಯಾಯಾಲಯದಲ್ಲಿದೆ’ ಎಂದು ವಿವರಿಸಿದರು.

‘ಹಿಂದಿನ ಅವಧಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಯುವ ಬರಹಗಾರರು, ಮಹಿಳೆಯರು ಸಾಹಿತ್ಯಾಸಕ್ತರು ಕಾಲಿಡಂತಹ
ವಾತಾವರಣ ನಿರ್ಮಾಣವಾಗಿತ್ತು. ಸಾಹಿತ್ಯ ಪರಿಷತ್‌ ಇಂತಹ ಪರಿಸ್ಥಿತಿಯಿಂದ ಹೊರ ತರಲು ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡುತ್ತಿದ್ದೇನೆ’ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಸಾಹಿತಿಗಳಾದ ವಾಣಿ ಮಹೇಶ್‌, ಪವಿತ್ರ ಉದಯವಾರ, ಕಲಾವಿದರಾದ ಯಲಗುಂದ ಶಾಂತಕುಮಾರ್‌,
ನಾಗಮೋಹನ್‌, ಮಾನವ ಹಕ್ಕುಗಳ ವೇದಿಕೆಯ ಗಿರೀಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.