ಹಾಸನ: ನಿತ್ಯ ಬಸ್‌ನಲ್ಲಿ ಓಡಾಡುವ ನೌಕರರು, ವಿದ್ಯಾರ್ಥಿಗಳಿಗೆ ಅಗತ್ಯವಿರುವ ಬಸ್ ಪಾಸ್ ನೀಡುವಲ್ಲಿ ವಿಳಂಬ ಮಾಡಲಾಗುತ್ತಿದ್ದು, ಹಣ ಕೊಟ್ಟು ಪ್ರಯಾಣಿಸುವಂತಾಗಿದೆ ಎಂದು ಪ್ರಯಾಣಿಕರು ದೂರುತ್ತಿದ್ದಾರೆ.
2–3 ತಿಂಗಳಿನಿಂದ ಮಾಸಿಕ ಬಸ್ ಪಾಸ್ ವಿತರಣೆ ವಿಳಂಬವಾಗುತ್ತಿದೆ. ಚನ್ನರಾಯಪಟ್ಟಣ ಸೇರಿದಂತೆ ಇತರೆ ತಾಲ್ಲೂಕುಗಳಿಗೂ ಪಾಸ್ ವಿತರಣೆಗೆ ವಿಳಂಬ ಮಾಡಲಾಗುತ್ತಿದೆ.
ಇದರಿಂದ ನಿತ್ಯ ತಾಲ್ಲೂಕು ಕೇಂದ್ರದಿಂದ ಜಿಲ್ಲಾ ಕೇಂದ್ರಕ್ಕೆ ಹಾಗೂ ಇತರೆ ತಾಲ್ಲೂಕುಗಳಿಗೆ ಪ್ರಯಾಣ ಮಾಡುವ ಖಾಸಗಿ ಹಾಗೂ ಸರ್ಕಾರಿ ಉದ್ಯೋಗಿಗಳಿಗೆ ತೊಂದರೆ ಉಂಟಾಗಿದೆ.
ಪ್ರತಿ ತಿಂಗಳು ಮಾಸಿಕ ಪಾಸ್ ಪಡೆಯಲು ನಗರದ ಕೇಂದ್ರ ಬಸ್ ನಿಲ್ದಾಣಕ್ಕೆ ಬರುತ್ತಿದ್ದು, ಪಾಸ್‌ಗಳು ಖಾಲಿಯಾಗಿವೆ ಎಂದು ಪಾಸ್ ವಿತರಣಾ ಕೇಂದ್ರದ ಸಿಬ್ಬಂದಿ ಹಾರಿಕೆ ಉತ್ತರ ನೀಡುತ್ತಿದ್ದಾರೆ ಎಂದು ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಸಾರಿಗೆ ನಿಗಮದಿಂದಲೇ ಪಾಸ್‌ಗಳು ಸಮರ್ಪಕವಾಗಿ ವಿತರಣೆಯಾಗಿಲ್ಲ. ಆದ್ದರಿಂದ ವಿಳಂಬವಾಗುತ್ತಿದೆ ಎಂದು ಉತ್ತರ ನೀಡುವ ಇಲ್ಲಿನ ಸಿಬ್ಬಂದಿ, ಸಮಯಕ್ಕೆ ಸರಿಯಾಗಿ ಪಾಸ್ ವಿತರಣೆಯಲ್ಲಿ ಲೋಪ ಎಸಗಿದ್ದಾರೆ’ ಎಂದು ಖಾಸಗಿ ನೌಕರ ಲೋಕೇಶ್ ದೂರಿದ್ದಾರೆ.
ಮುಂದಿನ ದಿನಗಳಲ್ಲಿ ಸಮಯಕ್ಕೆ ಸರಿಯಾಗಿ ಮಾಸಿಕ ಪಾಸ್ ವಿತರಣೆಗೆ ಕ್ರಮ ಕೈಗೊಳ್ಳುವಂತೆ ಪ್ರಯಾಣಿಕರು ಆಗ್ರಹಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆಗೆ ಕೆಎಸ್ಆರ್‌ಟಿಸಿ ಡಿಪೋ ವ್ಯವಸ್ಥಾಪಕರು ಹಾಗೂ ಅಧಿಕಾರಿಗಳನ್ನು ಸಂಪರ್ಕಿಸಲು ಪ್ರಯತ್ನಿಸಿದರೂ, ಕರೆ ಸ್ವೀಕರಿಸಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.