ADVERTISEMENT

ಹೆತ್ತೂರು: ಕಣ್ಮನ ಸೆಳೆಯುವ ಮೂಕನಮನೆ ಜಲಪಾತ

ಮಳೆಗಾಲದಲ್ಲಿ ಧುಮ್ಮಿಕ್ಕಿ ಹರಿಯುತ್ತಿರುವ ಜಲಧಾರೆ

​ಪ್ರಜಾವಾಣಿ ವಾರ್ತೆ
Published 12 ಜುಲೈ 2021, 5:48 IST
Last Updated 12 ಜುಲೈ 2021, 5:48 IST
ಹೆತ್ತೂರು ಹೋಬಳಿಯ ಮೂಕನಮನೆ ಜಲಪಾತದ ರಮಣೀಯ ನೋಟ
ಹೆತ್ತೂರು ಹೋಬಳಿಯ ಮೂಕನಮನೆ ಜಲಪಾತದ ರಮಣೀಯ ನೋಟ   

ಹೆತ್ತೂರು: ಸಮೀಪದ ಮೂಕನಮನೆ ಜಲಪಾತ ಧುಮ್ಮಿಕ್ಕಿ ಹರಿಯುತ್ತಿದ್ದು, ನೋಡುಗರ ಕಣ್ಮನ ಸೆಳೆಯುತ್ತಿದೆ.

ತಾಲ್ಲೂಕು ಕೇಂದ್ರ ಸಕಲೇಶಪುರದಿಂದ 48 ಕಿ.ಮೀ ಹಾಗೂ ಹೆತ್ತೂರಿನಿಂದ 12 ಕಿ.ಮೀ ದೂರದಲ್ಲಿರುವ ಮೂಕನಮನೆ ಜಲಪಾತ ಭೋರ್ಗರೆದು ಹರಿಯುತ್ತಿದೆ.

ಮಳೆಗಾಲ ಹಾಗೂ ಬೇಸಿಗೆ ವೇಳೆಯಲ್ಲಿಯೂ ಇಲ್ಲಿಗೆ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಬರುತ್ತಿ ದ್ದರು. ಜಿಲ್ಲೆಯಲ್ಲಿ ಲಾಕ್‌ಡೌನ್‌ ವಿಸ್ತರಣೆ ಆದ್ದರಿಂದ ಜಲಪಾತದ ಸೌಂದರ್ಯ ಸವಿಯಲು ಪ್ರವಾಸಿಗರು
ಬರುತ್ತಿಲ್ಲ.

ADVERTISEMENT

ವಾಹನ ನಿಲುಗಡೆ ಸ್ಥಳದಿಂದ ಜಲಪಾತದ ಸನಿಹದವರೆಗೂ ಕಿರಿದಾದ ರಸ್ತೆಯಲ್ಲಿ ಪ್ರವಾಸಿಗರು ಸಾಗಬೇಕು. ಮೋಜು, ಮಸ್ತಿ ಮಾಡಲು ಜಲಪಾತದ ನೀರಿಗಿಳಿದು ಸುಳಿಯಲ್ಲಿ ಸಿಲುಕಿ ಹಲವರು ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಹೊಂಗಡಹಳ್ಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಂಟು ಗ್ರಾಮಗಳ ಪೈಕಿ ಮೂಕನಮನೆ ಗ್ರಾಮವೂ ಒಂದು. ಜಲಪಾತದಿಂದಾಗಿ ಈ ಹಳ್ಳಿ ಹೆಚ್ಚು ಪ್ರಸಿದ್ಧಿ
ಪಡೆದಿದೆ.

ಮಳೆಗಾಲದಲ್ಲಿ ಧುಮ್ಮಿಕ್ಕುವ ಜಲಪಾತವನ್ನು ಕಣ್ತುಂಬಿಕೊಳ್ಳುವುದೇ ಒಂದು ಆನಂದ. ಮೂಕನಮನೆ ಹಳ್ಳವು ಮುಂದೆ ಕೆಂಪು ಹೊಳೆ ಸೇರುತ್ತದೆ. ‍ಪ್ರವಾಸಿಗರಿಲ್ಲದೇ ಈ ಭಾಗದ ಹೋಂಸ್ಟೇ, ರೇಸಾರ್ಟ್‌ಗಳೂ ಖಾಲಿ ಖಾಲಿಯಾಗಿವೆ.

‘ಜಲಪಾತದ ಸನಿಹಕ್ಕೆ ತೆರಳುವುದನ್ನು ತಪ್ಪಿಸಲು ಹಾಗೂ ಮೋಜು ಮಸ್ತಿಗೆ ಕಡಿವಾಣ ಹಾಕಲು ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಸ್ಥಳೀಯರಾದ ರಾಜು
ಆಗ್ರಹಿಸಿದ್ದಾರೆ

‘ಪ್ರವಾಸಿಗರಿಗೆ ಸರಿಯಾದ ಮೂಲ ಸೌಕರ್ಯಗಳಿಲ್ಲ. ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ. ಸಂಬಂಧಪಟ್ಟ ಇಲಾಖೆ ಸೂಕ್ತ ವ್ಯವಸ್ಥೆ ಕಲ್ಪಿಸಿದಲ್ಲಿ ಪ್ರವಾಸಿಗರಿಗೆ ಅನುಕೂಲವಾಗುತ್ತದೆ’ ಎಂದು ಕಾಗಿನಹರೆ ಗ್ರಾಮಸ್ಥ ಚಂದ್ರು ಒತ್ತಾಯಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.