ADVERTISEMENT

ತ್ವರಿತ ನ್ಯಾಯಕ್ಕೆ ಲೋಕ ಅದಾಲತ್ ಸಹಕಾರಿ: ನ್ಯಾಯಮೂರ್ತಿ ಸೋಮಶೇಖರ್‌

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2021, 16:30 IST
Last Updated 14 ಆಗಸ್ಟ್ 2021, 16:30 IST
ಹಾಸನದಲ್ಲಿ ಹೈಕೋರ್ಟ್‌ ನ್ಯಾಯಮೂರ್ತಿ ಸೋಮಶೇಖರ್‌ ಮಾತನಾಡಿದರು. ಜಿಲ್ಲಾ ಪ್ರಧಾನ ಮತ್ತುಸೆಷನ್ಸ್‌ ನ್ಯಾಯಾಧೀಶ ಶಿವಣ್ಣ, ಜಿಲ್ಲಾ ವಕೀಲರ ಸಂಘ ಜೆ.ಪಿ.ಶೇಖರ್‌ ಇದ್ದರು
ಹಾಸನದಲ್ಲಿ ಹೈಕೋರ್ಟ್‌ ನ್ಯಾಯಮೂರ್ತಿ ಸೋಮಶೇಖರ್‌ ಮಾತನಾಡಿದರು. ಜಿಲ್ಲಾ ಪ್ರಧಾನ ಮತ್ತುಸೆಷನ್ಸ್‌ ನ್ಯಾಯಾಧೀಶ ಶಿವಣ್ಣ, ಜಿಲ್ಲಾ ವಕೀಲರ ಸಂಘ ಜೆ.ಪಿ.ಶೇಖರ್‌ ಇದ್ದರು   

ಹಾಸನ: ‘ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ರಾಜ್ಯದಾದ್ಯಂತ ಲೋಕ
ಅದಾಲತ್ ನಡೆಸುತ್ತಿದ್ದು, ಜಿಲ್ಲೆಯಲ್ಲಿ ಹತ್ತುಸಾವಿರಕ್ಕೂ ಅಧಿಕ ಪ್ರಕರಣಗಳು ಒಂದೇ ದಿನ
ಇತ್ಯರ್ಥವಾಗಿವೆ’ ಎಂದು ಹೈಕೋರ್ಟ್ ನ್ಯಾಯಮೂರ್ತಿ ಸೋಮಶೇಖರ್ ಹೇಳಿದರು.

ಕಡಿಮೆ ಖರ್ಚಿನಲ್ಲಿ ತ್ವರಿತವಾಗಿ ನ್ಯಾಯ ವಿಲೇವಾರಿಗೆ ಲೋಕ ಅದಾಲತ್ ಅತ್ಯಂತ ಸಹಕಾರಿಯಾಗಿದ್ದು,
ಸಾರ್ವಜನಿಕರು ಹೆಚ್ಚಿನ ಪ್ರಮಾಣದಲ್ಲಿ ಸದುಪಯೋಗ ಪಡೆದುಕೊಳ್ಳಬೇಕು. ಅದಾಲತ್‍ನಲ್ಲಿ ಹಣ ಹಾಗೂ
ಸಮಯದ ಉಳಿತಾಯವಾಗುವುದರ ಜೊತೆಗೆ ಪ್ರಕರಣಗಳು ಸೌಹಾರ್ದಯುತವಾಗಿ ಮುಕ್ತಾಯಗೊಳ್ಳುತ್ತವೆ. ಇದರಿಂದ ನ್ಯಾಯಾಲಯದಲ್ಲಿ ಇತರೆ ಪ್ರಕರಣಗಳ ವಿಚಾರಗಳನ್ನು ಚುರುಕುಗೊಳಿಸಲು ಸಹಾಯವಾಗುತ್ತದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜಿಲ್ಲೆಯಲ್ಲಿ 79,435 ಪ್ರಕರಣಗಳು ಬಾಕಿ ಇದ್ದು, ಅದರಲ್ಲಿ 5,659 ಸಿವಿಲ್, 1,62,79 ಕ್ರಿಮಿನಲ್ ಪ್ರಕರಣಗಳನ್ನು ಲೋಕ ಅದಾಲತ್‍ನಲ್ಲಿ ತೆಗೆದುಕೊಳ್ಳಲಾಗಿದ್ದು, ಇದರಲ್ಲಿ 10,098ಪ್ರಕರಣಗಳು ಇತ್ಯರ್ಥವಾಗಿವೆ. 8978 ಕ್ರಿಮಿನಲ್‌ ಪ್ರಕರಣ , ಚೆಕ್‌ ಬೌನ್ಸ್‌ 127, ಎಂವಿಸಿ 265 ಹಾಗೂ ಸಿವಿಲ್‌ ಪ್ರಕರಣಗಳು ಇತ್ಯರ್ಥವಾಗಿದೆ. ಅದಾಲತ್ ಯಶಸ್ಸಿನಲ್ಲಿ ಮಾಧ್ಯಮಗಳ ಪಾತ್ರವು ದೊಡ್ಡದಾಗಿದ್ದು, ಈ ಪ್ರಕ್ರಿಯೆಯ ಬಗ್ಗೆ ಸಾರ್ವಜನಿಕರಿಗೆ ಹೆಚ್ಚಿನ ಮಟ್ಟದಲ್ಲಿ ಅರಿವು ಮೂಡಿಸಬೇಕಿದೆ ಎಂದು ಅವರು ಹೇಳಿದರು.

ADVERTISEMENT

ಕಾನೂನಿನ ಇತಿಮಿತಿಯೊಳಗೆ ಸಾಧ್ಯವಾಗುವ ಪ್ರಕರಣಗಳನ್ನು ಎರಡೂ ಕಡೆಯಿಂದ ಕಕ್ಷಿದಾರರು,
ವಕೀಲರ ಸಮ್ಮುಖದಲ್ಲಿ ಇತ್ಯರ್ಥಪಡಿಸಲಾಗುತ್ತದೆ. ಇದಕ್ಕೆ ವಕೀಲರು ಸಂಪೂರ್ಣ ಸಹಕಾರ
ನೀಡುತ್ತಿದ್ದಾರೆ ಎಂದು ನುಡಿದರು.

ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶ ಶಿವಣ್ಣ ಮಾತನಾಡಿ, ‘ಅದಾಲತ್‌ನಲ್ಲಿ 22 ವರ್ಷ ಹಳೆಯದಾದ ಸಿವಿಲ್ ಪ್ರಕರಣ ಆಲೂರು ನ್ಯಾಯಾಲಯದಲ್ಲಿ ಬಗೆಹರಿದಿದೆ. ಅದೇ ರೀತಿ ಹಾಸನದಲ್ಲಿ ಕೇವಲ ಒಂದು ತಿಂಗಳ ಹಿಂದೆ ದಾಖಲಾಗಿದ್ದ ವ್ಯಾಜ್ಯವೊಂದು ಇತ್ಯರ್ಥವಾಗಿದೆ. ಇದುಅದಾಲತ್‍ನ ಶಕ್ತಿಯಾಗಿದೆ’ ಎಂದರು.

ಸಿವಿಲ್‌, ಕ್ರಿಮಿನಲ್‌ ಪ್ರಕರಣ, ಚೆಕ್ ಬೌನ್ಸ್ , ಬ್ಯಾಂಕ್ ವಸೂಲಾತಿ, ಮೋಟಾರು ವಾಹನ, ಕೌಟುಂಬಿಕ,
ಕಂದಾಯ, ಜನನ ಮತ್ತು ಮರಣ ನೋಂದಣಿ, ಜೀವನಾಂಶ ಪ್ರಕರಣ ಹಾಗೂ ಇನ್ನಿತರ ಲಘು ಕ್ರಿಮಿನಲ್
ಪ್ರಕರಣಗಳಿಗೆ ಸಂಬಂಧಿಸಿದಂತೆ ಮತ್ತು ವ್ಯಾಜ್ಯಪೂರ್ವ ಬ್ಯಾಂಕ್ ಸಾಲ ಮರುಪಾವತಿಯ ಪ್ರಕರಣ
ಇತ್ಯರ್ಥ ಪಡಿಸಲಾಗಿದೆ. ಅದಾಲತ್ ಪ್ರತಿ ಮೂರು ತಿಂಗಳಿಗೊಮ್ಮೆ ನಡೆಸಲಾಗುತ್ತಿದ್ದು, ಕಳೆದ
ಮಾರ್ಚ್‌ನಲ್ಲಿ 4,261 ಪ್ರಕರಣ ಇತ್ಯರ್ಥ‍‍ಪಡಿಸಲಾಗಿತ್ತು ಎಂದು ಹೇಳಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ನ್ಯಾಯಾಧೀಶ ಬಿ.ಕೆ ರವಿಕಾಂತ್,
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಜೆ.ಪಿ ಶೇಖರ್. ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ಕಾರ್ಲೆ
ಮೊಗಣ್ಣಗೌಡ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.