ADVERTISEMENT

3 ಸಾವಿರಕ್ಕೂ ಹೆಚ್ಚು ಪ್ರಕರಣ ಇತ್ಯರ್ಥ

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಮೆಗಾ ಲೋಕ ಅದಾಲತ್‌

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2021, 14:38 IST
Last Updated 27 ಮಾರ್ಚ್ 2021, 14:38 IST
ಹಾಸನ ಜಿಲ್ಲಾ ನ್ಯಾಯಾಲಯದಲ್ಲಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಶಿವಣ್ಣ ಮಾತನಾಡಿದರು.
ಹಾಸನ ಜಿಲ್ಲಾ ನ್ಯಾಯಾಲಯದಲ್ಲಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಶಿವಣ್ಣ ಮಾತನಾಡಿದರು.   

ಹಾಸನ: ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರ ನ್ಯಾಯಾಲಯಗಳಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮೆಗಾ ಲೋಕ ಅದಾಲತ್‍ನಲ್ಲಿ 3 ಸಾವಿರಕ್ಕೂ ಹೆಚ್ಚು ಪ್ರಕರಣಗಳನ್ನು ರಾಜಿ ಸಂಧಾನದ
ಮೂಲಕ ಇತ್ಯರ್ಥಗೊಳಿಸಲಾಯಿತು.

ಹಾಸನದ ನ್ಯಾಯಾಲಯಗಳಲ್ಲಿ ಎಲ್ಲಾ ವಿಧದ ಒಟ್ಟು 72,881 ಪ್ರಕರಣಗಳು ಬಾಕಿ ಇದ್ದು, ರಾಜಿ ಸಂಧಾನಕ್ಕಾಗಿ ಎಲ್ಲಾ ರೀತಿಯ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣ ಒಳಗೊಂಡಂತೆ 10,387 ಪ್ರಕರಣಗಳನ್ನು ಗುರುತಿಸಲಾಗಿತ್ತು. ಮಧ್ಯಾಹ್ನ 3 ಗಂಟೆವರೆಗೆ ವಿವಿಧ ರೀತಿಯ ಮೂರು ಸಾವಿರ ಪ್ರಕರಣ ಇತ್ಯರ್ಥವಾಗಿದೆ. 10 ರಿಂದ 15 ವರ್ಷದ ಹಳೆ ಪ್ರಕರಣಗಳಿಗೆ ಆದ್ಯತೆ ನೀಡಲಾಯಿತು.

ನ್ಯಾಯಾಲಯದಲ್ಲಿ ಬಾಕಿ ಇರುವ ಎಲ್ಲಾ ವಿಧದ ಸಿವಿಲ್ ವ್ಯಾಜ್ಯಗಳು, ಬಗೆಹರಿಸಬಹುದಾದ ಕ್ರಿಮಿನಲ್ ಪ್ರಕರಣಗಳು, ಚೆಕ್ ಬೌನ್ಸ್, ಬ್ಯಾಂಕ್ ವಸೂಲಾತಿ, ಮೋಟಾರು ವಾಹನ, ಕೌಟುಂಬಿಕ, ಭೂಸ್ವಾಧೀನ, ಕಂದಾಯ , ಜನನ ಮತ್ತು ಮರಣ ನೋಂದಣಿ, ಜೀವನಾಂಶ ಹಾಗೂ ಇತರೆ ಲಘು ಕ್ರಿಮಿನಲ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಮತ್ತು ವ್ಯಾಜ್ಯಪೂರ್ವ ಬ್ಯಾಂಕ್ ಸಾಲ ಮರುಪಾವತಿಯ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಅವಕಾಶ ನೀಡಲಾಗಿತ್ತು.

ADVERTISEMENT

ಸಂಬಂಧಪಟ್ಟ ಕಕ್ಷಿದಾರರು ವಕೀಲರ ಮೂಲಕ ಹಾಗೂ ಖುದ್ದಾಗಿ ರಾಜಿ ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಂಡರು.

ಮೂರು ತಿಂಗಳಿಗೊಮ್ಮೆ ಅದಾಲತ್ ನಡೆಸಲಾಗುತ್ತಿದ್ದು, ಲಾಕ್‌ಡೌನ್‌ ವೇಳೆ ನಡೆದ ಅದಾಲತ್‌ನಲ್ಲಿ 4,500 ಪ್ರಕರಣಗಳನ್ನು ಇತ್ಯರ್ಥ ಮಾಡಲಾಗಿತ್ತು. ಕೋವಿಡ್‌ಗೂ ಮುನ್ನ ಅಂದಾಜು 12 ಸಾವಿರ ಪ್ರಕರಣಗಳನ್ನು ಇತ್ಯರ್ಥ ಮಾಡಲಾಗಿತ್ತು.

ನ್ಯಾಯಾಧೀಶ ಶಿವಣ್ಣ ಮಾತನಾಡಿ, ‘ರಾಜಿ ಪ್ರಕ್ರಿಯೆಯಿಂದ ಸಮಯ ಮತ್ತು ಹಣ ಉಳಿಸಬಹುದಾಗಿದ್ದು, ಉಭಯ ಪಕ್ಷಗಾರರ ನಡುವಿನ ಬಾಂಧವ್ಯ ಸಹ ವೃದ್ಧಿಸಲಿದೆ. ಲೋಕ ಅದಾಲತ್ ಪ್ರಗತಿ ನೋಡಿ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ರೀತಿಯಲ್ಲಿ ಪ್ರಕರಣ ಇತ್ಯರ್ಥಗೊಳಿಸುವ ನಿಟ್ಟಿನಲ್ಲಿ ಹೈಕೋರ್ಟ್ ತೀರ್ಮಾನಿಸಲಿದೆ. ಒಂದೇ ದಿನ ಮೂರು ಸಾವಿರಕ್ಕೂ ಹೆಚ್ಚು ಪ್ರಕರಣ ಇತ್ಯರ್ಥಗೊಂಡಿರುವುದು ಮಾರ್ಚ್ ತಿಂಗಳ ಹೆಗ್ಗಳಿಕೆಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ವಕೀಲರ ಸಂಘದ ಅಧ್ಯಕ್ಷ ಜೆ.ಪಿ. ಶೇಖರ್ ಮಾತನಾಡಿ, ‘ಇಂದು ಅಣ್ಣ-ತಮ್ಮಂದಿರು, ಅಕ್ಕ-ತಂಗಿಯರು
ಸೇರಿದಂತೆ ಎಲ್ಲಾ ಬಾಂಧ್ಯವ್ಯಗಳು ಹಾಳಾಗುತ್ತಿದೆ. ಲೋಕ್ ಅದಾಲತ್‍ನಲ್ಲಿ ರಾಜಿ ಮಾಡಿಕೊಳ್ಳುವ ಮೂಲಕ
ರಕ್ತ ಸಂಬಂಧಗಳು ಉಳಿದುಕೊಂಡು ಕುಟುಂಬದ ಜೊತೆ ಜೀವನ ನಡೆಸುತ್ತಾರೆ’ ಎಂದರು.

ಹಿರಿಯ ಸಿವಿಲ್ ನ್ಯಾಯಾಧೀಶ ಬಿ.ಕೆ. ರವಿಕಾಂತ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.