ADVERTISEMENT

ಆನ್‌ಲೈನ್‌ನಲ್ಲಿ 8 ಲಕ್ಷಕ್ಕೂ ಅಧಿಕ ಮಂದಿ ದರ್ಶನ

ಅಧಿದೇವತೆ ಹಾಸನಾಂಬೆ ಜಾತ್ರಾ ಮಹೋತ್ಸವಕ್ಕೆ ತೆರೆ

ಕೆ.ಎಸ್.ಸುನಿಲ್
Published 17 ನವೆಂಬರ್ 2020, 11:55 IST
Last Updated 17 ನವೆಂಬರ್ 2020, 11:55 IST
ಹಾಸನಾಂಬೆ ದೇಗುಲದ ಗರ್ಭಗುಡಿ ಬಾಗಿಲು ಬಂದ್‌ ಮಾಡುತ್ತಿರುವ ದೃಶ್ಯ‌
ಹಾಸನಾಂಬೆ ದೇಗುಲದ ಗರ್ಭಗುಡಿ ಬಾಗಿಲು ಬಂದ್‌ ಮಾಡುತ್ತಿರುವ ದೃಶ್ಯ‌   

ಹಾಸನ: ವರ್ಷಕ್ಕೊಮ್ಮೆ ದರ್ಶನ ಭಾಗ್ಯ ಕರುಣಿಸಿರುವ ಅಧಿದೇವತೆ ಹಾಸನಾಂಬೆ ಜಾತ್ರಾ ಮಹೋತ್ಸವಕ್ಕೆ ಸೋಮವಾರ ಶಾಸ್ತ್ರೋಕ್ತ ತೆರೆ ಬಿದ್ದಿತ್ತು.

ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಸಮ್ಮುಖದಲ್ಲಿ ಮಧ್ಯಾಹ್ನ 1.31ಕ್ಕೆ ದೇವಿಯ ಗರ್ಭಗುಡಿ ಬಾಗಿಲು ಮುಚ್ಚಲಾಯಿತು. ಈ ವೇಳೆ ಪಂಜಿನ ಪೂಜೆ, ಮಂಗಳವಾದ್ಯ, ಹಾಸನಾಂಬೆಯ ಪರ ಜಯಘೋಷ ಮೊಳಗಿತು. ಸಂಪ್ರದಾಯದ ಪ್ರಕಾರ ದೇವಿಯ ಸನ್ನಿಧಿಯಲ್ಲಿ ಹೂ, ನೈವೇದ್ಯ ಇಟ್ಟು, ದೀಪ ಹಚ್ಚಲಾಯಿತು. ಬಾಗಿಲು ಹಾಕಿದ ಬಳಿಕ ದೇವಿಗೆ ಅಲಂಕರಿಸಿದ್ದ ಆಭರಣಗಳಉತ್ಸವ ನಡೆಯಿತು.

ಕೋವಿಡ್‌ ಭೀತಿಯಿಂದ ಈ ಬಾರಿ ಸಾರ್ವಜನಿಕರಿಗೆ ನೇರ ದರ್ಶನಕ್ಕೆ ಅವಕಾಶ ಇರಲಿಲ್ಲ. ನ.5ರಿಂದ 16ರವರೆಗೆ ದೇವಿ ಬಾಗಿಲು ತೆರೆದಿದ್ದ ಸಮಯದಲ್ಲಿ ವಿಶೇಷ ಆಹ್ವಾನಿತರು , ಗಣ್ಯರು ಸೇರಿದಂತೆ ಸುಮಾರು 40 ಸಾವಿರಕ್ಕೂ ಹೆಚ್ಚು ಮಂದಿ ದೇವಿಯ ದರ್ಶನ ಪಡೆದಿದ್ದಾರೆ.

ADVERTISEMENT

ಮೊದಲ ಬಾರಿಗೆ ಆನ್ ಲೈನ್ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಯೂಟ್ಯೂಬ್‌, ಫೇಸ್‌ಬುಕ್‌ ನಲ್ಲಿ 8.80 ಲಕ್ಷಕ್ಕೂ ಅಧಿಕ ಮಂದಿ ದೇವಿ ದರ್ಶನ ಪಡೆದಿದ್ದಾರೆ. ಕೊನೆಯ ಎರಡು ದಿನ ದೇವಾಲಯದ ಬಳಿ ಹಾಜರಿದ್ದ ಸಾರ್ವಜನಿಕರಿಗೂ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು. 12 ದಿನ ದರ್ಶನ ಭಾಗ್ಯ ಕರುಣಿಸಿದ ಅಧಿದೇವತೆ ಮತ್ತೆ ಒಂದು ವರ್ಷ ಮರೆಗೆ ಸರಿದಳು.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, ಜಿಲ್ಲಾಧಿಕಾರಿ ಆರ್.ಗಿರೀಶ್, ತಹಶೀಲ್ದಾರ್‌ ಶಿವಶಂಕರಪ್ಪ, ಉಪವಿಭಾಗಾಧಿಕಾರಿ ಬಿ.ಎ.ಜಗದೀಶ್, ಶಾಸಕ ಪ್ರೀತಂ ಗೌಡ ಬಾಗಿಲು ಹಾಕುವಾಗ ಹಾಜರಿದ್ದರು. ಮುಜರಾಯಿ ಇಲಾಖೆ ಅಧಿಕಾರಿಗಳು ಬೀಗ ಹಾಕಿ, ಸೀಲ್‌ ಒತ್ತಲಾಯಿತು.

ಜೆಡಿಎಸ್‌ ರಾಜ್ಯಸಭಾ ಸದಸ್ಯ ಎಚ್.ಡಿ.ದೇವೇಗೌಡ, ಶಾಸಕ ಎಚ್.ಡಿ.ರೇವಣ್ಣ, ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ, ಕೃಷಿ ಸಚಿವ ಬಿ.ಸಿ.ಪಾಟೀಲ್, ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ಕೆಪಿಸಿಸಿ ಸದಸ್ಯ ಡಿ.ಕೆ.ಶಿವಕುಮಾರ್‌, ರಾಜ್ಯ ಸರ್ಕಾರದ ಸಚಿವರು, ಶಾಸಕರು, ನ್ಯಾಯಾಧೀಶರು ಹಾಗೂ ಭಕ್ತರು ದೇವಿಯ ದರ್ಶನ ಪಡೆದು ಪುನೀತರಾದರು.

ಸಾರ್ವಜನಿಕ ದರ್ಶನಕ್ಕೆ ಅವಕಾಶ ಇಲ್ಲದಿದ್ದರೂ ಕೊನೆ ದಿನವೂ ಅಪಾರ ಸಂಖ್ಯೆಯಲ್ಲಿ ಭಕ್ತರು ಬಂದಿದ್ದರು. ಎಲ್ಲರಿಗೂ ದೇವಿ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು.

‘ಜಾತ್ರಾ ಮಹೋತ್ಸವ ಸರಳವಾಗಿ ನಡೆದರೂ, ಸುಸೂತ್ರವಾಗಿ ಸಂಪನ್ನಗೊಂಡಿದೆ. ಆನ್‌ಲೈನ್‌ನಲ್ಲಿ 8.80 ಲಕ್ಷ ಜನರು ವೀಕ್ಷಣೆ ಮಾಡಿದ್ದಾರೆ. ಮುಂದಿನ ವರ್ಷದ ಹಾಸನಾಂಬೆ ಜಾತ್ರಾ ಮಹೋತ್ಸವದ ದಿನಾಂಕವನ್ನು ಪಂಚಾಂಗ ನೋಡಿ ತಿಳಿಸಲಾಗುವುದು’ಎಂದು ಜಿಲ್ಲಾಧಿಕಾರಿ ಆರ್‌.ಗಿರೀಶ್ ತಿಳಿಸಿದರು.

ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಮಾತನಾಡಿ, ‘ಹಾಸನಾಂಬೆ ಮತ್ತು ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ
ಯಶಸ್ವಿಯಾಗಿ ಸಮಾಪ್ತಿಗೊಂಡಿದೆ. ಸರಳ ಉತ್ಸವಕ್ಕೆ ಎಲ್ಲರೂ ಸಹಕಾರ ನೀಡಿದ್ದಾರೆ. ಧಾರ್ಮಿಕ ಪರಿಷತ್‌ ಹಾಗೂ
ದೇವಾಲಯದ ಅರ್ಚಕರ ತೀರ್ಮಾನದಂತೆ ಗರ್ಭಗುಡಿ ಬಾಗಿಲು ಮುಚ್ಚಲಾಗಿದೆ. ಜಾತ್ರಾ ಮಹೋತ್ಸವ ವೇಳೆ ಯಾವುದೇ ಅಹಿತಕರ ಘಟನೆ ನಡೆದಿಲ್ಲ’ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.