ADVERTISEMENT

ಮೃತಪಟ್ಟವರ ದಾಖಲಾತಿ ಸಂಗ್ರಹಿಸಿ

ಅಧಿಕಾರಿಗಳಿಗೆ ರಾಜೇಂದ್ರ ಕುಮಾರ್ ಕಠಾರಿಯಾ ಸೂಚನೆ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2019, 14:42 IST
Last Updated 2 ನವೆಂಬರ್ 2019, 14:42 IST
ಹಾಸನದಲ್ಲಿ ನಡೆದ ಮತದಾರರ ಪಟ್ಟಿ ಪರಿಷ್ಕರಣೆ ಕುರಿತ ಸಭೆಯಲ್ಲಿ ಮತದಾರ ಪಟ್ಟಿ ಪರಿಷ್ಕರಣಾ ಕಾರ್ಯದ ವೀಕ್ಷಕ ರಾಜೇಂದ್ರ ಕುಮಾರ್ ಕಠಾರಿಯಾ ಮಾತನಾಡಿದರು.
ಹಾಸನದಲ್ಲಿ ನಡೆದ ಮತದಾರರ ಪಟ್ಟಿ ಪರಿಷ್ಕರಣೆ ಕುರಿತ ಸಭೆಯಲ್ಲಿ ಮತದಾರ ಪಟ್ಟಿ ಪರಿಷ್ಕರಣಾ ಕಾರ್ಯದ ವೀಕ್ಷಕ ರಾಜೇಂದ್ರ ಕುಮಾರ್ ಕಠಾರಿಯಾ ಮಾತನಾಡಿದರು.   

ಹಾಸನ: ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಲೋಪ ಆಗದಂತೆ ಎಚ್ಚರ ವಹಿಸಬೇಕು ಹಾಗೂ ಯಾವುದೇ ಅರ್ಹ ಮತದಾರ ಮತಪಟ್ಟಿಯಿಂದ ಹೊರಗುಳಿಯದಂತೆ ಜಾಗ್ರತೆ ವಹಿಸಬೇಕು ಎಂದು ಮತದಾರ ಪಟ್ಟಿ ಪರಿಷ್ಕರಣಾ ಕಾರ್ಯದ ವೀಕ್ಷಕ ರಾಜೇಂದ್ರ ಕುಮಾರ್ ಕಠಾರಿಯಾ ಅಧಿಕಾರಿಗಳಿಗೆ ಸೂಚಿಸಿದರು.

ಮತದಾರ ಪಟ್ಟಿ ಪರಿಷ್ಕರಣೆ ಕುರಿತು ಏರ್ಪಡಿಸಿದ್ದ ಅಧಿಕಾರಿಗಳು ಹಾಗೂ ರಾಜಕೀಯ ಪದಾಧಿಕಾರಿಗಳೊಂದಿಗೆ ಸಭೆಯಲ್ಲಿ ಮಾತನಾಡಿದ ಅವರು, ಮತದಾರರ ಪಟ್ಟಿ ಪರಿಷ್ಕರಣೆ ನಡೆಸುವಾಗ ಮೃತ ಹಾಗೂ ವರ್ಗಾವಣೆಗೊಂಡ ಮತದಾರರನ್ನು ಮತಪಟ್ಟಿಯಿಂದ ಕೈಬಿಡುವಾಗ ಹೆಚ್ಚಿನ ಎಚ್ಚರ ವಹಿಸಿ ಎಂದರು.

10 ತಿಂಗಳಲ್ಲಿ ಮೃತಪಟ್ಟವರ ದಾಖಲಾತಿ ಸಂಗ್ರಹಿಸುವಂತೆ ಮತ್ತು ನಿರ್ದಿಷ್ಟ ಗುರಿ ಇಟ್ಟುಕೊಂಡು ಹೊಸ ಮತದಾರರ ನೋಂದಣಿ ಕಾರ್ಯಕ್ಕೆ ಆದ್ಯತೆ ನೀಡಿ ಎಂದು ಅಧಿಕಾರಿಗಳಿಗೆ ಹೇಳಿದರು.

ADVERTISEMENT

ರಾಜಕೀಯ ಪಕ್ಷಗಳು ಮತಗಟ್ಟೆವಾರು ಪ್ರತಿನಿಧಿಗಳನ್ನು ನೇಮಿಸಿ ಅವರ ವಿವರಗಳನ್ನು ಚುನಾವಣಾ ಶಾಖೆಗೆ ನೀಡಬೇಕು. ಬೂತ್ ಮಟ್ಟದಲ್ಲಿ ನಡೆಯುವ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದಲ್ಲಿ ಮತ್ತು ಮತದಾನ ಪಟ್ಟಿ ಪರಿಶೀಲನೆ ಸಾರ್ವಜನಿಕ ಜಾಗೃತಿ ಕಾರ್ಯದಲ್ಲಿ ಸಹಕರಿಸುವಂತೆ ತಿಳಿಸಿದರು.

ನಿತ್ಯವು ದೂರದೂರಿಗೆ ಕೆಲಸಕ್ಕೆ ಹೋಗುವವರಿದ್ದಾರೆ. ಅಂತಹ ವ್ಯಕ್ತಿಗಳನ್ನು ಮತಪಟ್ಟಿಯಿಂದ ತೆಗೆದು ಹಾಕಬೇಕು. ಮತದಾರ ಪಟ್ಟಿ ಪರಿಷ್ಕರಣೆ, ಪರಿಶೀಲನೆ ಮತ್ತು ಮತದಾನ ಕಾರ್ಯದಲ್ಲಿ ಸಾರ್ವಜನಿಕರು ಆಸಕ್ತಿ ವಹಿಸುವಂತೆ ಮಾಡಲು ಮತದಾರ ಜಾಗೃತಿ ಚಟುವಟಿಕೆ ಚುರುಕುಗೊಳಿಸಬೇಕು ಎಂದು ನಿರ್ದೇಶನ ನೀಡಿದರು.

ಜಿಲ್ಲಾಧಿಕಾರಿ ಆರ್.ಗಿರೀಶ್ ಮಾತನಾಡಿ, ಜಿಲ್ಲೆಯಲ್ಲಿ ಮತದಾರ ಪಟ್ಟಿ ಪರಿಷ್ಕರಣೆಗೆ ನ. 18 ರವರೆಗೆ ಕಾಲಾವಕಾಶವಿದ್ದು, ಜಿಲ್ಲೆಯಲ್ಲಿ ಮತದಾರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಚುರುಕಾಗಿದೆ. ಈ ಬಗ್ಗೆ ಜಾಗೃತಿ ಚಟುವಟಿಕೆಗಳನ್ನು ಕೈಗೊಳ್ಳಲಾಗಿದೆ ಎಂದರು.

ಪ್ರತಿ ಗ್ರಾಮ ಪಂಚಾಯಿತಿಗಳ ಮತಗಟ್ಟೆವಾರು ಅರಿವು ಮೂಡಿಸಲಾಗಿದೆ. ಎಲ್ಲಾ ಮತಗಟ್ಟೆಗಳ ಅಧಿಕಾರಿಗಳಿಗೆ ತರಬೇತಿ ನೀಡಿದ್ದು, ಕ್ಷೇತ್ರ ಮಟ್ಟದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.

ಖಾರೀಫ್ ಬೆಳೆಯ ಕಟಾವು ಮುಂಚೆಯೇ ಅದರ ಫೋಟೊ ತೆಗೆದು ದಾಖಲು ಮಾಡುವಂತೆ ಕೃಷಿ ಜಂಟಿ ನಿರ್ದೇಶಕರಿಗೆ ತಿಳಿಸಿದರು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಕವಿತಾ ರಾಜಾರಾಂ, ಉಪವಿಭಾಗಾಧಿಕಾರಿಗಳಾದ ನವೀನ್ ಭಟ್, ಗಿರೀಶ್ ನಂದನ್, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಮಹೇಶ್, ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ತಹಶೀಲ್ದಾರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.