ADVERTISEMENT

‘ಕುಮಾರಸ್ವಾಮಿಗೆ ತಲೆಕೆಟ್ಟಿದ್ದು, ಸೋಲಿನ ಹತಾಶೆಯಿಂದ ಏನೇನೋ ಮಾತನಾಡುತ್ತಿದ್ದಾರೆ’

ಯಡಿಯೂರಪ್ಪ ಟೀಕೆ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2019, 17:09 IST
Last Updated 10 ಏಪ್ರಿಲ್ 2019, 17:09 IST
   

ಹಾಸನ: ‘ಚುನಾವಣಾ ಪ್ರಚಾರಕ್ಕೆ ಹೆಲಿಕಾಪ್ಟರ್‌ ಸಿಗದಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಕಾರಣ ಎಂಬ ಹೇಳಿಕೆ ನೀಡಿರುವ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಗೆ ತಲೆಕೆಟ್ಟಿದ್ದು, ಸೋಲಿನ ಹತಾಶೆಯಿಂದ ಏನೇನೋ ಮಾತನಾಡುತ್ತಿದ್ದಾರೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂಪ್ಪ ಲೇವಡಿ ಮಾಡಿದರು.

ಹಾಸನ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎ.ಮಂಜು ಪರವಾಗಿ ಬೇಲೂರಿನಲ್ಲಿ ಚುನಾವಣಾ ಪ್ರಚಾರ ನಡೆಸಿದ ಅವರು ‘ದೇಶದಾದ್ಯಂತ ಚುನಾವಣೆ ನಡೆಯುತ್ತಿದೆ. ವಿವಿಧ ರಾಜಕೀಯ ಪಕ್ಷಗಳು ಮುಂಚಿತವಾಗಿಯೇ ಹೆಲಿಕಾಪ್ಟರ್‌ಗಳನ್ನು ಬುಕ್‌ ಮಾಡಿಕೊಂಡಿವೆ. ಆದರೆ, ಕುಮಾರಸ್ವಾಮಿ ಅವರು ಹೆಲಿಕಾಪ್ಟರ್‌ಗಳನ್ನು ಮುಂಚೆಯೇ ಬುಕ್‌ ಮಾಡಿಕೊಳ್ಳದೇ ಈಗ ಮೋದಿ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ’ ಎಂದು ದೂರಿದರು.

ಅರಸೀಕೆರೆಯಲ್ಲಿ ನಡೆದ ಪ್ರಚಾರ ಸಭೆಯಲ್ಲೂ ಸಮ್ಮಿಶ್ರ ಸರ್ಕಾರ ವಿರುದ್ಧ ವಾಗ್ದಳಿ ನಡೆಸಿದ ಯಡಿಯೂರಪ್ಪ, ‘ಕಾಮಗಾರಿಗಳು ಆರಂಭವಾಗುವ ಮುನ್ನವೇ ಹಾಸನಕ್ಕೆ ₹1350 ಕೋಟಿ ಅನುದಾನ ಏಕೆ ಬಂತು’ ಎಂದು ಪ್ರಶ್ನಿಸಿದರು.

ADVERTISEMENT

‘ಪುಲ್ವಾಮಾದಲ್ಲಿ ಸೈನಿಕರ ಮೇಲೆ ನಡೆದ ದಾಳಿ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಎರಡು ವರ್ಷಗಳ ಹಿಂದೆಯೇ ಗೊತ್ತಿದ್ದರೆ ರಕ್ಷಣಾ ಇಲಾಖೆ ಹಾಗೂ ಕೇಂದ್ರ ಗೃಹ ಇಲಾಖೆಗೆ ಏಕೆ ಮಾಹಿತಿ ನೀಡಲಿಲ್ಲ. ಹಾಗಾದರೆ ಹುತಾತ್ಮರಾದ 42 ಯೋಧರ ಸಾವಿಗೆ ಕುಮಾರಸ್ವಾಮಿಯೇ ಪರೋಕ್ಷ ಕಾರಣನಾ? ಈ ರೀತಿಯ ಬೇಜವಾಬ್ದಾರಿ ಹೇಳಿಕೆ ನೀಡಿರುವ ಕುಮಾರಸ್ವಾಮಿ ಒಬ್ಬ ಅಪ್ರಯೋಜಕ. ಕಾಂಗ್ರೆಸ್ ನ ಹಿರಿಯ ಮುಖಂಡ ಜನಾರ್ದನ ಪೂಜಾರಿ ಅವರೇ ನರೇಂದ್ರ ಮೋದಿ ಮತ್ತೆ ಎರಡು ಅವಧಿಗೆ ಪ್ರಧಾನಿ ಆಗಬೇಕೆಂದು ಹೇಳಿದ್ದಾರೆ’ ಎಂದು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.