ADVERTISEMENT

ರೈತರು ಸಾಲ ಮುಕ್ತರಾಗಲು ನೈಸರ್ಗಿಕ ಕೃಷಿ ಅಗತ್ಯ: ಚುಕ್ಕಿ ನಂಜುಂಡಸ್ವಾಮಿ

ಪಾಳೆಕಾರ್ ನೈಸರ್ಗಿಕ ಕೃಷಿ ರಾಷ್ಟ್ರೀಯ ಕಾರ್ಯಾಗರ ಜ.3 ರಿಂದ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2025, 6:00 IST
Last Updated 17 ಡಿಸೆಂಬರ್ 2025, 6:00 IST
ಹಳೇಬೀಡಿನ ಪುಷ್ಪಗಿರಿಯಲ್ಲಿ ಜ.3ರಿಂದ ನಡೆಯುವ ಸುಭಾಷ್ ಪಾಳೇಕರ್ ನೈಸರ್ಗಿಕ ಕೃಷಿ ರಾಷ್ಟ್ರೀಯ ಕಾರ್ಯಾಗಾರದ ಪೂರ್ವಭಾವಿ ಸಭೆಯಲ್ಲಿ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ, ರೈತಸಂಘ ರಾಜ್ಯ ಸಾಮೂಹಿಕ ನಾಯಕಿ ಚುಕ್ಕಿ ನಂಜುಂಡಸ್ವಾಮಿ ಹಾಗೂ ಮುಖಂಡರು ಕರಪತ್ರ ಪ್ರದರ್ಶಿಸಿದರು 
ಹಳೇಬೀಡಿನ ಪುಷ್ಪಗಿರಿಯಲ್ಲಿ ಜ.3ರಿಂದ ನಡೆಯುವ ಸುಭಾಷ್ ಪಾಳೇಕರ್ ನೈಸರ್ಗಿಕ ಕೃಷಿ ರಾಷ್ಟ್ರೀಯ ಕಾರ್ಯಾಗಾರದ ಪೂರ್ವಭಾವಿ ಸಭೆಯಲ್ಲಿ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ, ರೈತಸಂಘ ರಾಜ್ಯ ಸಾಮೂಹಿಕ ನಾಯಕಿ ಚುಕ್ಕಿ ನಂಜುಂಡಸ್ವಾಮಿ ಹಾಗೂ ಮುಖಂಡರು ಕರಪತ್ರ ಪ್ರದರ್ಶಿಸಿದರು    

ಹಳೇಬೀಡು: ‘ರೈತರನ್ನು ಸಾಲದಿಂದ ಮುಕ್ತರನ್ನಾಗಿ ಮಾಡಲು ನೈಸರ್ಗಿಕ ಕೃಷಿಯಿಂದ ಮಾತ್ರ ಸಾಧ್ಯ. ಈ ನಿಟ್ಟಿನಲ್ಲಿ ರೈತರನ್ನು ನೈಸರ್ಗಿಕ ಕೃಷಿಯತ್ತ ಸೆಳೆಯಲು ಹಳೇಬೀಡಿನ ಪುಷ್ಪಗಿರಿಯಲ್ಲಿ ಜನವರಿ 3 ರಿಂದ 6 ವರೆಗೆ ಸುಭಾಷ್ ಪಾಳೇಕರ್ ನೈಸರ್ಗಿಕ ಕೃಷಿ ಕಾರ್ಯಾಗಾರ ನಡೆಸುತ್ತಿದ್ದೇವೆ’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಸಾಮೂಹಿಕ ಅಧ್ಯಕ್ಷೆ ಚುಕ್ಕಿ ನಂಜುಂಡಸ್ವಾಮಿ ಹೇಳಿದರು.

ಪುಷ್ಪಗಿರಿಯ ಸಭಾಂಗಣದಲ್ಲಿ ಮಂಗಳವಾರ ಸಂಜೆ ನಡೆದ ಸುಭಾಷ್ ಪಾಳೇಕರ್ ನೈಸರ್ಗಿಕ ಕೃಷಿ ರಾಷ್ಟ್ರೀಯ ಕಾರ್ಯಾಗಾರದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

‘ಆಧುನಿಕ ಕೃಷಿಯಿಂದ ಹೆಚ್ಚಿನ ಪಾಲು ರೈತರು ಸಾಲಗಾರರಾಗುತ್ತಿದ್ದಾರೆ. ದೇಶಕ್ಕೆ ಅನ್ನ ಕೊಡುವ ರೈತರ ಕುಟುಂಬಕ್ಕೆ ಆಹಾರ ಭದ್ರತೆ ಇಲ್ಲದಂತಾಗಿದೆ. ರೈತರು ಮಾರುಕಟ್ಟೆಗೆ ಹೋಗಿ ಆಹಾರ ಪದಾರ್ಥ ಕೊಂಡು ತರುವ ಪರಿಸ್ಥಿತಿಗೆ ಕಡಿವಾಣ ಬಿದ್ದರೆ ಮಾತ್ರ ರೈತರ ಬದುಕು ಹಸನಾಗುತ್ತದೆ’ ಎಂದು ಹೇಳಿದರು.

ADVERTISEMENT

ಇಂದಿನ ಕೃಷಿ ಪದ್ಧತಿಯಿಂದ ಕ್ರಿಮಿ–ಕೀಟ ನಾಶಕ ಹಾಗೂ ಗೊಬ್ಬರದ ವ್ಯಾಪಾರಿಗಳು ಮಾತ್ರ ಶ್ರೀಮಂತರಾಗುತ್ತಿದ್ದಾರೆ ಎಂಬುದು ರೈತರಿಗೆ ಮನವರಿಕೆ ಆಗಬೇಕಾಗಿದೆ ಎಂದರು.

‘ನಾಲ್ಕು ದಿನಗಳ ಕಾರ್ಯಾಗಾರಕ್ಕೆ 8 ದೇಶದ ರೈತರು ನೋಂದಣಿ ಮಾಡಿಸಿದ್ದಾರೆ. ಭಾರತದ ವಿವಿಧ ರಾಜ್ಯದ ರೈತರು ಸೇರಿ 350 ಮಂದಿಯ ನೋಂದಣಿ ಆಗಿದೆ. ಒಟ್ಟು 1,000 ರೈತರು ಭಾಗವಹಿಸಲಿದ್ದಾರೆ.
ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಮಂತ್ರಿ ಹಾಗೂ ಕೃಷಿ ಸಚಿವರನ್ನು ಕಾರ್ಯಾಗಾರಕ್ಕೆ ಅಹ್ವಾನಿಸುತ್ತೇವೆ. ಶಿಬಿರಾರ್ಥಿಗಳಿಗೆ ಉತ್ತರ ಕರ್ನಾಟಕದ ಜೋಳದ ರೊಟ್ಟಿ, ರಾಗಿ ಮುದ್ದೆ ಹಾಗೂ ಸಿರಿ ಧಾನ್ಯಗಳ ಔತಣ ಉಣಬಡಿಸಿ ಲಾಗುವುದು. ಕೊನೆಯ ದಿನ ನೈಸರ್ಗಿಕ ಕೃಷಿ ತೋಟಗಳ ಭೇಟಿ ಇರುತ್ತದೆ’ ಎಂದು ಚುಕ್ಕಿ ನಂಜುಂಡ ಸ್ವಾಮಿ ವಿವರಿಸಿದರು.

ಪುಷ್ಪಗಿರಿ ಮಠದ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ಭೂಮಿಯನ್ನು ಫಲವತ್ತಾಗಿಟ್ಟುಕೊಳ್ಳುವಲ್ಲಿ ನೈಸರ್ಗಿಕ ಕೃಷಿ ಅತ್ಯಗತ್ಯ. ಸುಭಾಷ್ ಪಾಳೇಕರ್ ನೈಸರ್ಗಿಕ ಕೃಷಿಯನ್ನು ಜೀವಾಳ ಮಾಡಿಕೊಂಡು ಬದುಜು ಕಟ್ಟಿಕೊಂಡಿದ್ದಾರೆ. ಸ್ಥಳೀಯರು ಶಿಬಿರಾರ್ಥಿಗಳು ವಸತಿ, ಊಟ ಉಪಚಾರವನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು’ ಎಂದರು.

ರೈತ ಮುಖಂಡರಾದ ಹೊನ್ನೂರು ಪ್ರಕಾಶ್, ಕಣಗಾಲ್ ಮೂರ್ತಿ, ಗ್ಯಾರಂಟಿ ರಾಮಣ್ಣ, ಹರುಬಿಹಳ್ಳಿ ಗುರುಸ್ವಾಮಿ ಗೌಡ, ಟಿ.ಬಿ.ಹಾಲಪ್ಪ, ಅಂದಾಲೆ ಪರಮೇಶ್, ಎಲ್.ಈ.ಶಿವಪ್ಪ, ರಾಜಗೆರೆ ಗಂಗಾಧರ ಪಾಲ್ಗೊಂಡಿದ್ದರು.

ನಾಟಿ ಹಸು ಸಾಕಿಕೊಂಡು ಸ್ಥಳೀಯ ಸಂಗ್ರಹದ ಬಿತ್ತನೆ ಬೀಜ ಸಂಗ್ರಹಿಸಿಕೊಂಡು ಕಡಿಮೆ ಖರ್ಚಿನ ಕೃಷಿ ಮಾಡಿದವರು ನೆಮ್ಮದಿಯ ಜೀವನ ಸಾಗಿಸಬಹುದು
–ಚುಕ್ಕಿ ನಂಜುಂಡಸ್ವಾಮಿ, ಕರ್ನಾಟಕ ರಾಜ್ಯ ರೈತ ಸಂಘ ಸಾಮೂಹಿಕ ಅಧ್ಯಕ್ಷೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.