
ಹಳೇಬೀಡು: ‘ಭೂಮಿಯ ಫಲವತ್ತತೆ ಹೆಚ್ಚಿಸಲು ನೈಸರ್ಗಿಕ ಕೃಷಿಯ ಅಗತ್ಯವಿದೆ. ಜನವರಿ 3ರಿಂದ 6ರವರೆಗೆ ಪುಷ್ಪಗಿರಿಯಲ್ಲಿ ನಡೆಯುವ ಸುಭಾಷ್ ಪಾಳೇಕರ್ ನೈಸರ್ಗಿಕ ಕೃಷಿ ಕಾರ್ಯಾಗಾರವನ್ನು ರೈತರು ಸುದುಪಯೋಗ ಮಾಡಿಕೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಹೇಳಿದರು.
ಪುಷ್ಪಗಿರಿಯ ಸಭಾಂಗಣದಲ್ಲಿ ಮಂಗಳವಾರ ನಡೆದ ಸುಭಾಷ್ ಪಾಳೇಕರ್ ನೈಸರ್ಗಿಕ ಕೃಷಿ ಕಾರ್ಯಗಾರದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
‘ರೈತರಿಗೆ ಮಾಧ್ಯಮಗಳಲ್ಲಿ ದೊರಕುವ ಕೃಷಿ ಮಾಹಿತಿಗಿಂತ ಹೆಚ್ಚಿನ ಅನುಭವ ಇರುತ್ತದೆ. ರೈತರು ಸ್ವತಃ ವಿಜ್ಞಾನಿಗಳಾಗಿದ್ದಾರೆ. ಜಮೀನಿನಲ್ಲಿ ಶ್ರಮವಹಿಸುವ ರೈತನಿಗೆ ಓದಿ ಕಲಿಯುವುದಕ್ಕಿಂತ ಹೆಚ್ಚಿನ ಅನುಭವವಿದೆ’ ಎಂದು ಲತಾಕುಮಾರಿ ಹೇಳಿದರು.
‘ಕಾಲಮಾನಕ್ಕೆ ತಕ್ಕಂತೆ ಯಾವ ಬೆಳೆ ಮಾಡಬೇಕು. ಯಾವ ಸಂದರ್ಭದಲ್ಲಿ ಮಳೆ ಬರುತ್ತದೆ. ತಮ್ಮ ಭಾಗದ ಮಣ್ಣಿನ ಗುಣಕ್ಕೆ ತಕ್ಕಂತೆ ಬೆಳೆ ಮಾಡುವುದನ್ನು ರೈತರು ಕಲಿತಿದ್ದಾರೆ. ಆದರೆ ಸಾಕಷ್ಟು ರೈತರು ಭೂಮಿಗೆ ಪೂರಕವಾದ ಕೃಷಿಯಿಂದ ದೂರ ಸರಿಯುತ್ತಿದ್ದಾರೆ. ಜನರಿಗೆ ತಿಳಿವಳಿಕೆ ಕೊಡುವುದು ಸುಲಭ ಸಾಧ್ಯವಾಗಿಲ್ಲ. ಭೂಮಿಯನ್ನು ಉಳಿಸಿಕೊಂಡು, ರೈತರು ಸಮೃದ್ಧವಾಗುವಂತಹ ಕೃಷಿ ಕಾಯಕ ನಡೆಸಬೇಕು’ ಎಂದು ಲತಾಕುಮಾರಿ ಹೇಳಿದರು.
ಪುಷ್ಪಗಿರಿ ಮಠದ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ಕೃಷಿಯಲ್ಲಿ ಉತ್ಪಾದನೆ ಹೆಚ್ಚಿಸಲು ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕ ಬಳಸಲಾಗುತ್ತಿದೆ. ಮಣ್ಣು, ಜಲ, ಪರಿಸರ ಹಾಗೂ ಮಾನವನ ಆರೋಗ್ಯದ ಮೇಲೆ ನಿರ್ಲಕ್ಷ್ಯ ವಹಿಸಲಾಗಿದೆ. ಜನರ ಆರೋಗ್ಯ ಹಾಗೂ ರೈತರ ಆದಾಯ ಹೆಚ್ಚಿಸಲು ನೈಸರ್ಗಿಕ ಕೃಷಿ ಸುರಕ್ಷಿತ ಮಾರ್ಗವಾಗಿದೆ. ರೈತಸಂಘ ಪುಷ್ಪಗಿರಿ ಮಠದ ಪಾದ ಬೆಳೆಸಿದ ನಂತರ ಪುಷ್ಪಗಿರಿಯಲ್ಲಿ ಒಂದಲ್ಲ ಒಂದು ಕೃಷಿ ಕಾರ್ಯಕ್ರಮ ನಡೆಯುತ್ತಿವೆ’ ಎಂದರು.
ತಹಶೀಲ್ದಾರ್ ಶ್ರೀಧರ ಕಂಕಣವಾಡಿ, ಜಂಟಿ ಕೃಷಿ ನಿರ್ದೇಶಕ ರಮೇಶ್ ಕುಮಾರ್ ಪಿ, ಸಹಾಯಕ ಕೃಷಿ ನಿರ್ದೇಶಕ ಕಾಂತರಾಜು ಜಿ, ರೈತ ಸಂಘ ಜಿಲ್ಲಾ ಪ್ರತಿನಿಧಿಗಳಾದ ಕಣಗಾಲ್ ಮೂರ್ತಿ, ಮಂಜುನಾಥ, ಪ್ರಕಾಶ್, ಸಂಕೇನಹಳ್ಳಿ ರಾಜಣ್ಣ, ಅಂದಾಲೆ ಪರಮೇಶ್, ಹೋಬಳಿ ಸಾಮೂಹಿಕ ನಾಯಕ ಟಿ.ಬಿ.ಹಾಲಪ್ಪ, ಮುಖಂಡರಾದ ಎಲ್.ಈ.ಶಿವಪ್ಪ, ಗಂಗಾಧರಪ್ಪ, ಮುನ್ನಾಭಾಯಿ, ಅಡುಗೆ ರಾಜು ಶಿವಕುಮಾರ್, ಎಂ.ಸಿ.ಕುಮಾರ್, ರಘುನಾಥ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.