
ಆಲೂರು: ಹೊಸ ವರ್ಷವನ್ನು ಸಡಗರ, ಸಂಭ್ರಮದಿಂದ ಬರಮಾಡಿಕೊಳ್ಳಲು ಜನಸಾಮಾನ್ಯರು ಅಷ್ಟಾಗಿ ಸ್ಪಂದಿಸಲಿಲ್ಲ. ಇದರಿಂದಾಗಿ ಮದ್ಯ, ಬೇಕರಿಗಳ ವಹಿವಾಟು ಕಳೆಗುಂದಿತ್ತು. ಮಾಂಸದ ವ್ಯಾಪಾರ ಜೋರಾಗಿತ್ತು.
ಹೊಸ ವರ್ಷದ ಸಂಭ್ರಮಾಚರಣೆ ಸಂದರ್ಭದಲ್ಲಿ ಅಹಿತಕರ ಘಟನೆಗಳು ಸಂಭವಿಸದಂತೆ ಪೊಲೀಸ್ ಇಲಾಖೆ ಹದ್ದಿನ ಕಣ್ಣು ಇಟ್ಟು ಕಾರ್ಯಾಚರಣೆ ನಡೆಸಿತ್ತು. ಕಳೆದ ವರ್ಷ ಯುವಜನರು ತಂಡೋಪ ತಂಡವಾಗಿ ಮಧ್ಯರಾತ್ರಿಯಲ್ಲಿ ಬೀದಿ ಬೀದಿಯಲ್ಲಿ ವಾದ್ಯದೊಂದಿಗೆ ಕುಣಿದು ಕುಪ್ಪಳಿಸಿ ಸಂಭ್ರಮಿಸಿದ್ದರು.
ಆದರೆ ಪ್ರತಿ ವರ್ಷ ನಡೆಯುತ್ತಿದ್ದ ಸಂಭ್ರಮಾಚರಣೆ ಪ್ರಸಕ್ತ ಸಾಲಿನಲ್ಲಿ ನಡೆಯಲಿಲ್ಲ. ಸಂಜೆ ವೇಳೆಯಲ್ಲಿ ಎಂದಿನಂತೆ ಜನರು ತಮ್ಮ ಮನೆ ಸೇರಿದ್ದರು. ಹೊಸ ವರ್ಷಕ್ಕೆ ಕಾಲಿಟ್ಟ ನಂತರ ಮಧ್ಯರಾತ್ರಿ 12 ಗಂಟೆಯ ನಂತರ ಜನಸಾಮಾನ್ಯರು, ಸಂಘಟನೆಗಳು ಬೀದಿಗಿಳಿದು ಆಚರಣೆ ಮಾಡಲಿಲ್ಲ. ಬಹುತೇಕ ಕುಟುಂಬಗಳಲ್ಲಿ ತಮ್ಮ ಮನೆಗಳಲ್ಲಿ ಕುಟುಂಬದವರೊಂದಿಗೆ ಕೇಕ್ ಕತ್ತರಿಸಿ ಹೊಸ ವರ್ಷವನ್ನು ಬರಮಾಡಿಕೊಂಡರು.
ಹಿಂದೂಗಳ ಹೊಸ ವರ್ಷ ಆರಂಭವಾಗುವುದು ಯುಗಾದಿ ಹಬ್ಬದ ಸಂದರ್ಭದಲ್ಲಿ. ಕ್ರೈಸ್ತ ವರ್ಷ ಕ್ಯಾಲೆಂಡರ್ ಬದಲಾವಣೆಗೆ ಮಾತ್ರ ಸೀಮಿತ. ಯುಗಾದಿ ಹಬ್ಬವನ್ನು ಸಂಭ್ರಮದಿಂದ ಆಚರಿಸೋಣ ಎಂದು ಹಿರಿಯರು ಅಭಿಪ್ರಾಯ ವ್ಯಕ್ತಪಡಿಸಿದರು.
ಪ್ರತಿಯೊಂದು ಬೇಕರಿ, ಶಾಖಾಹಾರ ಹೋಟೆಲ್‍ಗಳಲ್ಲಿ ಆಫರ್ ನೀಡುವುದರೊಂದಿಗೆ ಜನರನ್ನು ಆಕರ್ಷಿಸಲು ಅಂಗಡಿಗಳ ಮುಂದೆ ಶಾಮಿಯಾನ ಹಾಕಿ ಗ್ರಾಹಕರನ್ನು ಕೈ ಬೀಸಿ ಕರೆದಿತ್ತು. ಆದರೆ ಮಾಲೀಕರ ಯೋಚನೆಯಂತೆ ಗ್ರಾಹಕರು ಸ್ಪಂದಿಸದೇ ವ್ಯಾಪಾರ ಸಾಗಲಿಲ್ಲ. ಮದ್ಯದಂಗಡಿಗಳಲ್ಲಿ ವ್ಯಾಪಾರ ಕುಂಠಿತವಾಗಿತ್ತು. ತಾಲ್ಲೂಕಿನಲ್ಲಿರುವ ಹೋಂಸ್ಟೇಗಳು ಬಹುತೇಕ ಭರ್ತಿಯಾಗಿದ್ದವು.
ಕಳೆದ ವರ್ಷದಷ್ಟು ವ್ಯಾಪಾರ ವಹಿವಾಟು ನಡೆಯಲಿಲ್ಲ. ನಡುಗುವ ಚಳಿಯಲ್ಲಿ ಮದ್ಯ ಮಾರಾಟ ಚೆನ್ನಾಗಿ ಆಗಬೇಕಿತ್ತು. ಆದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 40 ರಷ್ಟು ಕಡಿಮೆಯಾಗಿದೆ. ಎಚ್.ಎಂ. ಪುನೀತ್ ಎಂಎಸ್ಐಎಲ್ ವ್ಯವಸ್ಥಾಪಕ
ಕುರಿ ಮಾಂಸ ಕೋಳಿ ಅಂಗಡಿಗಳಲ್ಲಿ ವ್ಯಾಪಾರ ಜೋರಾಗಿತ್ತು. ಕುರಿ ಮಾಂಸ ದೊರಕದೆ ಗ್ರಾಹಕರು ಬೇಸರದಿಂದ ವಾಪಸಾದರು. ಇನ್ನೂ ಹತ್ತು ಕುರಿಗಳಿದ್ದರೂ ವ್ಯಾಪಾರವಾಗುತ್ತಿತ್ತು.ಇನಾಯತ್ ಮಟನ್ ಸ್ಟಾಲ್ ಮಾಲೀಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.