ADVERTISEMENT

ಚಿತ್ತಾಕರ್ಷಕ ಹೊನಗಾನಹಳ್ಳಿ ಬಸ್ ತಂಗುದಾಣ

​ಪ್ರಜಾವಾಣಿ ವಾರ್ತೆ
Published 3 ಜೂನ್ 2023, 22:30 IST
Last Updated 3 ಜೂನ್ 2023, 22:30 IST
ಕೊಣನೂರು ಹೋಬಳಿಯ ಹೊನಗಾನಹಳ್ಳಿಯಲ್ಲಿ ನೂತನವಾಗಿ ನಿರ್ಮಿಸಿರುವ ಆಕರ್ಷಕ ಬಸ್‌ ತಂಗುದಾಣ.
ಕೊಣನೂರು ಹೋಬಳಿಯ ಹೊನಗಾನಹಳ್ಳಿಯಲ್ಲಿ ನೂತನವಾಗಿ ನಿರ್ಮಿಸಿರುವ ಆಕರ್ಷಕ ಬಸ್‌ ತಂಗುದಾಣ.   

ಬಿ.ಪಿ. ಗಂಗೇಶ್

ಕೊಣನೂರು: ಗ್ರಾಮ ಪಂಚಾಯಿತಿ ಸದಸ್ಯರೊಬ್ಬರ ಶ್ರಮ ಮತ್ತು ಆಸಕ್ತಿಯಿಂದ ವೈವಿಧ್ಯಮಯ ಬಣ್ಣ ಮತ್ತು ಚಿತ್ರಗಳಿಂದ ಕೂಡಿರುವ ಗ್ರಾಮೀಣ ಪ್ರಯಾಣಿಕರ ತಂಗುದಾಣವು ಎಲ್ಲರ ಗಮನ ಸೆಳೆದಿದ್ದು ಮನೆ ಮಾತಾಗಿದೆ.

ಹೋಬಳಿಯ ಹೊನಗಾನಹಳ್ಳಿಯಲ್ಲಿ ನೂತನವಾಗಿ ನಿರ್ಮಾಣಗೊಂಡು, ಮದುವಣಗಿತ್ತಿಯಂತೆ ತಲೆಯೆತ್ತಿ ನಿಂತಿರುವ ಪ್ರಯಾಣಿಕರ ತಂಗುದಾಣವನ್ನು ಕಂಡಾಗ ಪುಟ್ಟ ಶಾಲೆಯೊಂದರ ಕೊಠಡಿಯಂತೆ ಭಾಸವಾಗುತ್ತಿದ್ದು, ದಾರಿಯಲ್ಲಿ ಹೋಗಿ ಬರುವವರೆಲ್ಲರೂ ಕೆಲಹೊತ್ತು ನಿಂತು ನೋಡಿ ಮುಂದೆ ಸಾಗುತ್ತಿದ್ದಾರೆ.

ADVERTISEMENT

ಕೊಡಗಿನ ಗಡಿಭಾಗದ ಗ್ರಾಮ ಹೊನಗಾನಹಳ್ಳಿಯಲ್ಲಿ ಕಳೆದ ವಾರವಷ್ಟೇ ನಿರ್ಮಿಸಿರುವ ಈ ತಂಗುದಾಣ ವಾಟ್ಸ್‌ಆ್ಯಪ್‌ ಮತ್ತು ಫೇಸ್‌ಬುಕ್‌ನಲ್ಲೂ ಜನಮೆಚ್ಚುಗೆಗೆ ಪಾತ್ರವಾಗಿದೆ.

ಜನರು ವಾಸಿಸುವ ಮನೆಗಿಂತಲೂ ಆಕರ್ಷಕವಾಗಿ ಕಾಣುವಂತೆ ಕಾಳಜಿ ವಹಿಸಿ ನಿರ್ಮಿಸಿರುವ ತಂಗುದಾಣದ ಒಳಭಾಗದ ಎಡಗೋಡೆಯ ಮೇಲೆ ಕನ್ನಡ ಚಲನಚಿತ್ರ ರಂಗದ ಮೇರು ಪ್ರತಿಭೆಗಳಾದ ಡಾ.ರಾಜ್‌ಕುಮಾರ್, ವಿಷ್ಣವರ್ಧನ್, ಅಂಬರೀಷ್, ಶಂಕರನಾಗ್ ಅವರ  ಭಾವಚಿತ್ರ ಬಿಡಿಸಿದ್ದು, ಕನ್ನಡ ಭಾಷೆಗೆ ಸಲ್ಲಿಸಿದ ಅವರನ್ನು ಸ್ಮರಿಸಲಾಗಿದೆ.

ತಂಗುದಾಣದ ಮುಂಭಾಗದಲ್ಲಿ ಯುವಕರ ಕಣ್ಮಣಿ ದಿವಂಗತ ಪುನೀತ್ ರಾಜಕುಮಾರ್ ಅವರ ಭಾವಚಿತ್ರವನ್ನು ಬರೆಸಲಾಗಿದೆ. ಒಳಗಿನ ಬಲಭಾಗದ ಗೋಡೆಯ ಮೇಲೆ ಆಧ್ಯಾತ್ಮ, ಶಿಕ್ಷಣ ಮತ್ತು ಆರೋಗ್ಯ ಸೇವೆಯನ್ನು ರಾಜ್ಯದ ಸಾವಿರಾರು ಮಕ್ಕಳಿಗೆ ನೀಡಿ ತ್ರಿವಿಧ ದಾಸೋಹಿಗಳು ಎಂದೇ ಜನಮಾನಸದಲ್ಲಿ ನೆಲೆಸಿರುವ ಶಿವಕುಮಾರ ಸ್ವಾಮೀಜಿ ಮತ್ತು ಬಾಲ ಗಂಗಾಧರನಾಥ ಸ್ವಾಮೀಜಿಯವರ ಭಾವಚಿತ್ರಗಳು ಮತ್ತು ಸಮಾಜ ಸುಧಾರಣೆ ಮತ್ತು ಮಹಿಳಾ ಸಬಲೀಕರಣಕ್ಕಾಗಿ ಶ್ರಮಿಸುತ್ತಿರುವ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಮತ್ತು ನೂರಾರು ಮರಗಳನ್ನು ಬೆಳೆಸಿ ಪರಿಸರ ಜಾಗೃತಿ ಉಂಟು ಮಾಡುತ್ತಿರುವ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಅವರ ಭಾವಚಿತ್ರ ಬಿಡಸುವ ಮೂಲಕ ಜನರಲ್ಲಿ ಆಧ್ಯಾತ್ಮ, ಸಮಾಜಸೇವ, ಪರಿಸರ ಕಾಳಜಿ, ನಾಡು ನುಡಿಯ ಪ್ರೇಮದ ಭಾವನೆಯನ್ನು ಮೂಡಿಸುವ ಪ್ರಯತ್ನ ಮಾಡಲಾಗಿದೆ.

ಬಸ್‌ಗಾಗಿ ಕಾಯುವ ಜನರು ಕುಳಿತುಕೊಳ್ಳುವ ಆಸನಗಳು ನೋಡಲು ಸೋಫಾ ರೀತಿಯಲ್ಲಿ ಕಾಣುತ್ತಿದ್ದು, ಎದುರಿನ ತುಂಡು ಗೋಡೆಗಳಲ್ಲಿ ರಾಜ್ಯದ ಪ್ರಸಿದ್ಧ ಜಲಾಶಯಗಳ ಚಿತ್ರಗಳು, ತಂಗುದಾಣದ ಎಡ ಮತ್ತು ಬಲ ಬದಿಗಳ ಗೋಡೆಯಲ್ಲಿ ಸೂರ್ಯೋದಯ ಮತ್ತು ಸೂರ್ಯಾಸ್ತದ ದೃಶ್ಯ, ಕಂಬಗಳನ್ನು ಬಿದಿರಿನಿಂದ ನಿರ್ಮಿಸಿರುವಂತೆ ಮತ್ತು ಒಳ ಮೇಲ್ಚಾವಣೆಯಲ್ಲಿ ಭಾರತೀಯ ಸೇನೆ ಕುರಿತು ಅರಿವು ಮೂಡುವಂತೆ ಭಾರತೀಯ ಭೂಸೇನೆ, ವಾಯುಪಡೆ ಮತ್ತು ನೌಕಾದಳಗಳ ಚಟುವಟಿಕೆಗಳನ್ನು ಮನಮುಟ್ಟುವಂತೆ ಚಿತ್ರಿಸಲಾಗಿದೆ.

ಅಲ್ಲಿ ಬಂದು ಕುಳಿತುಕೊಳ್ಳುವ ಜನರು ಚಿತ್ರಗಳನ್ನು ನೋಡುತ್ತಿದ್ದಂತೆ ನಮ್ಮ ರಾಜ್ಯ, ದೇಶಕ್ಕೆ ಸಂಬಂಧಿಸಿದ ಭಾಷೆ, ಪರಿಸರ, ಸೇನೆ, ನಾಡಿನ ಕುರಿತ ಅನೇಕ ವಿಷಯಗಳು ಅರಿವಿಗೆ ಬರುವಂತೆ ಮತ್ತು ಮರೆತಿದ್ದ ವಿಷಯಗಳು ಮತ್ತೊಮ್ಮೆ ನೆನಪಾಗುವಂತೆ ಯೋಚಿಸಿ ನಿರ್ಮಿಸಲಾಗಿದೆ. ಗ್ರಾಮದಲ್ಲಿ ಯುವಕರು, ವೃದ್ಧರಾದಿಯಾಗಿ ಯಾವುದೇ ವಿಚಾರವನ್ನು ಚರ್ಚಿಸಲು ಇದೇ ಸ್ಥಳವನ್ನು ಆಯ್ಕೆ ಮಾಡುಕೊಳ್ಳುತ್ತಿದ್ದಾರೆ.

ಪ್ರಶಂಸೆಗೆ ಪಾತ್ರವಾದ ಗ್ರಾ.ಪಂ.ಸದಸ್ಯ

ಪ್ರಶಂಸೆಗೆ ಪಾತ್ರವಾಗಿರುವ ಪ್ರಯಾಣಿಕರ ತಂಗುದಾಣದ ನಿರ್ಮಾಣಕ್ಕೆ ಕಾರಣವಾಗಿರುವ ಶ್ರೀನಾಥ್ ಹೊನಗಾನಹಳ್ಳಿಯಿಂದ ಸತತವಾಗಿ 4 ನೇ ಬಾರಿ ಗ್ರಾಮ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ‘ಗ್ರಾಮವನ್ನು ಮಾದರಿಯನ್ನಾಗಿಸುವ ನಿಟ್ಟಿನಲ್ಲಿ ಅನೇಕ ಕಾರ್ಯಗಳನ್ನು ಮಾಡುತ್ತಿದ್ದು ನಮ್ಮೂರಿನ ಪ್ರಯಾಣಿಕರ ತಂಗುದಾಣವು ವಿಶೇಷವಾಗಿರುವ ಜೊತೆಗೆ ಸಮಾಜಸೇವೆ ಮಾಡಿದ ಗಣ್ಯರನ್ನು ನೆನೆಸಿಕೊಳ್ಳಲಾಗಿದೆ. ನಾಡಿನ ಹಿರಿಮೆ ಗರಿಮೆಯನ್ನು ಪ್ರಚುರ ಪಡಿಸುವ ಜೊತೆಗೆ ಪರಿಸರ ಕಾಳಜಿಯನ್ನು ಬೆಳೆಸುವ ನಿಟ್ಟಿನಲ್ಲಿ ಶಾಸಕ ಎ.ಟಿ.ರಾಮಸ್ವಾಮಿಯವರು ನೀಡಿದ್ದ ಅನುದಾನದ ₹ 3 ಲಕ್ಷ ಹಣದ ಸದುಪಯೋಗ ಪಡಿಸಿಕೊಳ್ಳುವ ಪುಟ್ಟ ಪ್ರಯತ್ನ ಇದಾಗಿದೆ’ ಎಂದು ಶ್ರೀನಾಥ್‌ ತಿಳಿಸಿದರು.

ತಂಗುದಾಣದಲ್ಲಿ ಇರುವ ಭಾರತೀಯ ಸೇನೆ ಕುರಿತಾದ ಇರುವ ಚಿತ್ರ.
ಬಸ್‌ ತಂಗುದಾಣದ ಒಳಭಾಗದ ಗೋಡೆಯ ಮೇಲೆ ಮೂಡಿರುವ ಮಹನೀಯರ ಚಿತ್ರಗಳು.
ತಂಗುದಾಣದಲ್ಲಿ ಅಳವಡಿಸಿರುವ ಆಕರ್ಷಕ ಆಸನಗಳು
ಶ್ರೀನಾಥ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.