ADVERTISEMENT

ಧಾರ್ಮಿಕ ಪ್ರಜ್ಞೆ ಉಳಿಸಿಕೊಳ್ಳುವುದು ಕರ್ತವ್ಯ: ನಿಖಿಲ್‌ ಕುಮಾರಸ್ವಾಮಿ

ಕೆಳಗಳಲೆ ದೇವಸ್ಥಾನ ಲೋಕಾರ್ಪಣೆ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2026, 6:28 IST
Last Updated 10 ಫೆಬ್ರುವರಿ 2026, 6:28 IST
ಅರಕಲಗೂಡು ತಾಲ್ಲೂಕಿನ ಕೆಳಗಳಲೆ ಗ್ರಾಮದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ನಿಖಿಲ್‌ ಕುಮಾರಸ್ವಾಮಿ ಮಾತನಾಡಿದರು
ಅರಕಲಗೂಡು ತಾಲ್ಲೂಕಿನ ಕೆಳಗಳಲೆ ಗ್ರಾಮದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ನಿಖಿಲ್‌ ಕುಮಾರಸ್ವಾಮಿ ಮಾತನಾಡಿದರು   

ಅರಕಲಗೂಡು: ‘ವಿಜ್ಞಾನ ಬಹಳ ವೇಗವಾಗಿ ಬೆಳೆಯುತ್ತಿದೆ. ಅದರೂ ನಮ್ಮ ‌ಪೂರ್ವಜರು ನಮಗೆ ಧಾರ್ಮಿಕ ಪ್ರಜ್ಞೆ ‌ಹಾಗೂ ಆಧ್ಯಾತ್ಮಿಕ ಪ್ರಜ್ಞೆ ಉಳಿಸಿ ಕೊಟ್ಟು ಹೋಗಿದ್ದಾರೆ. ಅದನ್ನು ಉಳಿಸಿಕೊಳ್ಳುವುದು ನಮ್ಮ ಕರ್ತವ್ಯ’ ಎಂದು ಯುವ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.

ತಾಲ್ಲೂಕಿನ ಕೆಳಗಳಲೆ ಗ್ರಾಮದಲ್ಲಿ ಸೋಮವಾರ ಕಲ್ಲೇಶ್ವರ ಮತ್ತು ಬಸವೇಶ್ವರ ದೇವರ ಪ್ರತಿಷ್ಠಾಪನೆ ಮತ್ತು ನೂತನ ದೇವಸ್ಥಾನದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಏತ ನೀರಾವರಿ ಬಗ್ಗೆ ಶಾಸಕ ಎ.ಮಂಜು ಅವರು ಹೇಳಿದ್ದಾರೆ. ನೂರಕ್ಕೆ ನೂರರಷ್ಟು ವಿಶ್ವಾಸ ನಂಬಿಕೆ ಇದೆ. ರೈತರ ಬದುಕು ಹಸನುಗೊಳಿಸಲು ಹಾಗೂ ಅವರಿಗೆ ಆತ್ಮ ಸ್ಥೈರ್ಯ ತುಂಬಲು ಕೊಡಬೇಕಾಗಿರುವುದು ನೀರು’ ಎಂದರು.

ADVERTISEMENT

‘ಉತ್ತರ ಕರ್ನಾಟಕದ ಭಾಗದಲ್ಲಿ ಅತಿವೃಷ್ಡಿಯಾಗಿದ್ದ ಸಂದರ್ಭದಲ್ಲಿ ನಾನು ಆ ಭಾಗದ ಅನೇಕ ರೈತರ ಹೊಲಗದ್ದೆಗಳಿಗೆ ಭೇಟಿ ನೀಡಿ ಅವರನ್ನು ‌ಮಾತನಾಡಿಸಿ ಬಂದೆ. ರೈತರು ಭೂಮಿ ತಾಯಿಯನ್ನು‌ ನಂಬಿ ಬದುಕುತ್ತಾರೆ. ರೈತರಿಗೆ ವಹಿವಾಟು, ವ್ಯಾಪಾರಗಳ ಚಿಂತನೆ ಇಲ್ಲ. ಆ ರೈತರಿಗೆ ನೀರಾವರಿ ಒದಗಿಸುವುದು ನಮ್ಮ ಆದ್ಯತೆ ಆಗಿರಬೇಕು’ ಎಂದರು.

‘ಎಚ್‌.ಡಿ. ಕುಮಾರಸ್ವಾಮಿ ಕೇಂದ್ರ ಸಚಿವರಾಗಿ ಅವರ ಇಲಾಖೆಗೆ ಸೀಮಿತವಾಗಿ ಮಾತ್ರ  ಕೆಲಸ ಮಾಡುತ್ತಿಲ್ಲ. ರಾಜ್ಯದ ಯಾವುದೇ ಸಮಸ್ಯೆ ಇದ್ದರೂ ಕೇಂದ್ರ ಸರ್ಕಾರದ ಸಚಿವರ ಬಳಿ ಮಾತನಾಡುತ್ತಾರೆ. ಹಾಸನ ಜಿಲ್ಲೆಯ ಕಾಡಾನೆ ಸಮಸ್ಯೆ, ‌ತಂಬಾಕು ಬೆಳೆಗಾರರ ಸಮಸ್ಯೆ ಪರಿಹರಿಸುತ್ತಿದ್ದಾರೆ’ ಎಂದು ತಿಳಿಸಿದರು.

93 ವರ್ಷದ ಎಚ್.ಡಿ. ದೇವೇಗೌಡರು ರಾಜ್ಯಸಭೆಯಲ್ಲಿ ನೀರಿಗಾಗಿ ಕಣ್ಣೀರು ಹಾಕಿರುವುದನ್ನು ಇಡೀ ದೇಶವೆ ನೋಡಿದೆ. 1996ರಲ್ಲಿ ದೇವೇಗೌಡರು ಪ್ರಧಾನಿಯಾದ ಸಂದರ್ಭದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮಹಿಳೆಯರಿಗೆ ಶೇ 50 ಮೀಸಲಾತಿ ನೀಡುವ ‌ನಿರ್ಣಯ ತೆಗೆದುಕೊಂಡರು. ಬೆಂಬಲದ ಕೊರತೆ ಇದ್ದುದರಿಂದ ಆ ಬಿಲ್ ಬಿದ್ದುಹೋಗಿತ್ತು. ಇಂದು ಆ ಕನಸನ್ನು ‌ನನಸು ಮಾಡಿರುವುದು ಪ್ರಧಾನಿ ನರೇಂದ್ರ ಮೋದಿ’ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಎ. ಮಂಜು ಮಾತನಾಡಿ, ‘ಗ್ರಾಮಸ್ಥರೆಲ್ಲರೂ ಸೇರಿ ದೇವಾಲಯ ನಿರ್ಮಾಣ ಮಾಡಿರುವುದು ‌ಸಂತಸದ ವಿಷಯ. ಶಾಸಕರ ನಿಧಿಯಿಂದ ₹10 ಲಕ್ಷ ‌ನೀಡಿದ್ದೇನೆ. ಈ ಗ್ರಾಮಕ್ಕೆ ರಸ್ತೆ ಅಭಿವೃದ್ಧಿಗೆ ವಿಶೇಷ ಅನುದಾನ ನೀಡಿರುವುದಾಗಿ ತಿಳಿಸಿದರು.

‘ಇನ್ನೂ 3 –4 ತಿಂಗಳೊಳಗೆ ಮಲ್ಲಿಪಟ್ಟಣ ಏತ ನೀರಾವರಿ ಯೋಜನೆ ಮೊದಲನೇ ಹಂತದ ನೀರು ಈ ಭಾಗದಲ್ಲಿ ಹರಿಸಲಾಗುವುದು’ ಎಂದು ತಿಳಿಸಿದರು.

ತಾಲ್ಲೂಕಿನಲ್ಲಿ ಇಂದು ವಿಶೇಷ ದಿನ. ಅಣ್ಣ ತಮ್ಮಂದಿರಾದ ನಿಖಿಲ್ ‌ಹಾಗೂ ಸೂರಜ್ ಬಂದಿರುವುದು ವಿಶೇಷ ಎಂದರು.

ವಿಧಾನ ಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ ಮಾತನಾಡಿ, ‘ಈ ಗ್ರಾಮಕ್ಕೆ ಕಳೆದ ಚುನಾವಣೆ ಸಂದರ್ಭದಲ್ಲಿ  ಬಂದಾಗ, ಗ್ರಾಮಸ್ಥರೆಲ್ಲರೂ ಸೇರಿ ಆದಷ್ಟು ಬೇಗ ದೇವಾಲಯ ಕಾಮಗಾರಿ ಮುಗಿಸಿಕೊಡುವಂತೆ ಕೋರಿದ್ದರು. ಅದಕ್ಕಾಗಿ ನನ್ನ ಅನುದಾನದಡಿ ₹ 9 ಲಕ್ಷ ಕೊಟ್ಟಿದ್ದೇನೆ’ ಎಂದರು.

ಇದಕ್ಕೂ ಮೊದಲು ಕಲ್ಲೇಶ್ವರ ದೇವಾಲಯ ಸಮಿತಿ ಸದಸ್ಯ ಕೆ.ಎನ್.ಮಧು ನೇತೃತ್ವದಲ್ಲಿ ವಿವಿಧ ಧಾರ್ಮಿಕ ವಿಧಿ–ವಿಧಾನಗಳು ಜರುಗಿದವು.

ಕಲ್ಲೇಶ್ವರ, ಬಸವೇಶ್ವರ ಸ್ವಾಮಿ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ, ಪಂಚಕಳಸ, ನವಗ್ರಹ ಪೂಜೆ, ಮಹಾ ಮೃತ್ಯುಂಜಯ ಹೋಮ, ಮಹಾನ್ಯಾಸ ಪೂರ್ವಕ ಪ್ರತಿಷ್ಠಾಪನಾಂಗ ಹೋಮ, ಅಗ್ನಿದರ್ಶನ, ಕದಳಿ ಛೇದನ, ಅಷ್ಟೋತ್ತರ ರಾಜೋಪಚಾರ ಸೇವೆಯೊಂದಿಗೆ ಮಹಾಮಂಗಳಾರತಿ ಹಾಗೂ ತೀರ್ಥಪ್ರಸಾದ ವಿನಿಯೋಗ, ಗೋಪುರ ಕಳಸರೋಹಣ ನೆರವೇರಿಸಲಾಯಿತು.

ಅದಿಚುಂಚನಗಿರಿ ಹಾಸನದ ಶಾಖಾಮಠದ ಶಂಭುನಾಥ ಸ್ವಾಮೀಜಿ, ದೊಡ್ಡಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಕೊಡ್ಲಿಪೇಟೆ ಕಲ್ಲುಮಠದ ಮಹಾಂತ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.