ADVERTISEMENT

ಅಧಿಕಾರಕ್ಕಾಗಿ ಯಾರ ಮನೆ ಬಾಗಿಲು ತಟ್ಟಿಲ್ಲ: ಶಾಸಕ ಎಚ್‌.ಡಿ.ರೇವಣ್ಣ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 13 ಜನವರಿ 2021, 12:55 IST
Last Updated 13 ಜನವರಿ 2021, 12:55 IST
ಎಚ್‌.ಡಿ. ರೇವಣ್ಣ
ಎಚ್‌.ಡಿ. ರೇವಣ್ಣ   

ಹಾಸನ‌: ಯಾವ ಪಕ್ಷದಲ್ಲಿ ಅಪ್ಪ, ಮಕ್ಕಳು ಇಲ್ಲ ಎಂಬುದನ್ನು ತಿಳಿಸಲಿ. ಅಧಿಕಾರಕ್ಕಾಗಿ ಜೆಡಿಎಸ್‌ ಎಂದಿಗೂ ಯಾರ ಮನೆ ಬಾಗಿಲಿಗೆ ಹೋಗಿಲ್ಲ ಎಂದು ಶಾಸಕ ಎಚ್‌.ಡಿ. ರೇವಣ್ಣ ಹೇಳಿದರು.

ರಾಜ್ಯದಲ್ಲಿ ಮೊದಲ ಬಾರಿಗೆ ಬಿಜೆಪಿ ಅಧಿಕಾರಕ್ಕೆ ಬರಲು ಸಸಿ ನೆಟ್ಟಿದ್ದು ಜೆಡಿಎಸ್. 2008ರಲ್ಲಿಯೂ ಅಪ್ಪ,
ಮಕ್ಕಳು ಅಧಿಕಾರ ಹಸ್ತಾಂತರಿಸಲಿಲ್ಲ ಎಂದು ಹೇಳಿಕೊಂಡೇ ಅಧಿಕಾರಕ್ಕೆ ಬಂತು. ಅಪ್ಪ, ಮಕ್ಕಳ ಪಕ್ಷ
ಇಲ್ಲದಿದ್ದರೆ ಬಿಜೆಪಿ ಅಧಿಕಾರಕ್ಕೆ ಬರುತ್ತಿರಲಿಲ್ಲವೆಂಬುದನ್ನು ತಿಳಿಯದೇ ಬಿಜೆಪಿ ನಾಯಕರು ಟೀಕೆ ಮಾಡುತ್ತಿದ್ದಾರೆ. ದೇವೇಗೌಡರ ಕುಟುಂಬ ಹಿಂಬಾಗಿಲ ರಾಜಕೀಯ ಮಾಡಿಲ್ಲ ಎಂದು ಬುಧವಾರ ಸುದ್ದಿಗೋಷ್ಟಿಯಲ್ಲಿ ಸ್ಪಷ್ಟಪಡಿಸಿದರು.

ದೇವೇಗೌಡರು ಅಧಿಕಾರಕ್ಕೆ ಆಸೆ ಪಟ್ಟವರಲ್ಲ. ಅಟಲ್‌ ಬಿಹಾರಿ ವಾಜಪೇಯಿ ಅವರು ಬೆಂಬಲ
ನೀಡುವುದಾಗಿ ಹೇಳಿದರೂ ಪ್ರಧಾನ ಮಂತ್ರಿ ಹುದ್ದೆ ಬಿಟ್ಟು ಕೊಟ್ಟರು. ದೇವೇಗೌಡರ ಕಣ್ಣಲ್ಲಿ ನೀರು ಬತ್ತುವುದಿಲ್ಲಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಲಘುವಾಗಿ ಮಾತನಾಡಿದ್ದಾರೆ.ಗೌಡರ ರಾಜಕೀಯ ಅನುಭವಗಳೇನು? ನಳೀನ್‌ ಕುಮಾರ್‌ ಅವರ ವಯಸ್ಸೇನು? ಜನರ ಕಷ್ಟ ನೋಡಿ ಕಣ್ಣೀರು ಹಾಕಿರುವುದೇ ಹೊರತು ಅಧಿಕಾರದ ಆಸೆಯಿಂದಲ್ಲ.ಅವರ ಬಗ್ಗೆ ಮಾತನಾಡಲು ಕಟೀಲ್‌ಗೆ ಯಾವ ನೈತಿಕತೆ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ರಾಜಕೀಯ ಇತಿಹಾಸದಲ್ಲಿ ದೇವೇಗೌಡರಂತಹ ಸಜ್ಜನ ರಾಜಕಾರಣಿಯನ್ನು ನಾನು ನೋಡಿಲ್ಲ. ಜಿಲ್ಲೆಗೆ ಗೌಡರ ಕೊಡುಗೆ ಸಾಕಷ್ಟಿದೆ. ಹೇಮಾವತಿ ಅಣೆಕಟ್ಟು, ಮೆಡಿಕಲ್‌ ಕಾಲೇಜು, ಹಾಸನ–ಬೆಂಗಳೂರು ರೈಲು ಮಾರ್ಗ ಸೇರಿದಂತೆ ಸಾಕಷ್ಟು ಅಭಿವೃದ್ಧಿ ಕೈಗೊಂಡಿದ್ದಾರೆ. 35 ವರ್ಷದಿಂದ ಸಕ್ರಿಯ ರಾಜಕಾರಣದಲ್ಲಿ ಇದ್ದೇನೆ. ಅಧಿಕಾರಕ್ಕಾಗಿ ಯಾರ ಮನೆ ಬಾಗಿಲು ತಟ್ಟಲು ಹೋಗಿಲ್ಲ ಎಂದರು.

2006ರಲ್ಲಿ ಲೋಕೋಪಯೋಗಿ ಸಚಿವನಾಗಿದ್ದಾಗಲೇ ಹಾಸನ-ಬಿ.ಸಿ ರೋಡ್ ರಸ್ತೆ ಪ್ರಸ್ತಾವನೆ ಸಲ್ಲಿಸಿದ್ದೆ.
ಹದಿನಾಲ್ಕು ವರ್ಷ ಕಳೆದರೂ ರಸ್ತೆ ಕಾಮಗಾರಿ ಪೂರ್ಣಗೊಂಡಿಲ್ಲ. ಹಿಂದೆ ಐದು ವರ್ಷ ಮೋದಿ ನೇತೃತ್ವದ ಸರ್ಕಾರವೇ ಇದ್ದಾಗ ಯಾಕೆ ಕೆಲಸ ಮಾಡಲಿಲ್ಲ. ಜಿಲ್ಲೆಯಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ದೇವೇಗೌಡರ ಮಕ್ಕಳು ಅಧಿಕಾರಕ್ಕೆ ಬರಬೇಕಾಯ್ತಾ ಎಂದು ಪ್ರಶ್ನಿಸಿದರು.

ರಾಷ್ಟ್ರೀಕೃತ ಮತ್ತು ಸಹಕಾರಿ ಬ್ಯಾಂಕ್‌ಗಳಲ್ಲಿ ರಾಜ್ಯದ ರೈತರ ₹36 ಸಾವಿರ ಕೋಟಿ ಸಾಲ ಮನ್ನಾ ಮಾಡಲು ಇದೇ ಅಪ್ಪ, ಮಕ್ಕಳ ಸರ್ಕಾರ ಬರಬೇಕಾಯಿತು. ಬಿಜೆಪಿಗೆ ತಾಕತ್ತಿದ್ದರೆ ಕೇಂದ್ರ ಮತ್ತು ರಾಜ್ಯ ಬಜೆಟ್‌ನಲ್ಲಿ ರೈತರ ಸಾಲ ಮನ್ನಾಪ್ರಕಟಿಸಲಿಎಂದು ಸವಾಲು ಹಾಕಿದರು.

‘ಹಾಸನವನ್ನು ಯಾರಿಗೂ ಗುತ್ತಿಗೆ ನೀಡಿಲ್ಲ’ ಎಂಬ ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ಪ್ರತಿಕ್ರಿಯಿಸಿದ ರೇವಣ್ಣ, ಸಂಸದರು ಹಾಸನದ ಚಿಂತೆ ಬಿಟ್ಟು ಮೈಸೂರು–ಕೊಡಗು ಅಭಿವೃದ್ಧಿಗೆ ಗಮನ ನೀಡಲಿ. ರೈಲ್ವೆ
ಮೇಲ್ಸೇತುವೆ ಮಾಡಿಸಲು ಹತ್ತು ವರ್ಷ ಬೇಕಿತ್ತಾ? ಅನುದಾನ ತರಲು ರೇವಣ್ಣನೇ ಬರಬೇಕಾಯ್ತು. ಈ ಕಾಮಗಾರಿಗೆ ರಾಜ್ಯ ಸರ್ಕಾರವೂ ಅನುದಾನ ನೀಡಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.