ADVERTISEMENT

ರೈತನಿಗೆ ಹೆಣ್ಣು ಕೊಡಲು ಮೀನಮೇಷ: ಬಸವ ಮರುಳಸಿದ್ದ ಸ್ವಾಮೀಜಿ ಬೇಸರ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2022, 3:18 IST
Last Updated 8 ಏಪ್ರಿಲ್ 2022, 3:18 IST
ಬೇಲೂರು ತಾಲ್ಲೂಕಿನ ಬನದಹಳ್ಳಿಯಲ್ಲಿ ನಡೆದ ಕಾರ್ಯಕ್ರಮವನ್ನು ಸೋಮಶೇಖರ ಸ್ವಾಮೀಜಿ ಉದ್ಘಾಟಿಸಿದರು. ಬಸವ ಮರುಳಸಿದ್ದ ಸ್ವಾಮೀಜಿ, ಕೆ.ಎಸ್.ಲಿಂಗೇಶ್ ಇದ್ದರು
ಬೇಲೂರು ತಾಲ್ಲೂಕಿನ ಬನದಹಳ್ಳಿಯಲ್ಲಿ ನಡೆದ ಕಾರ್ಯಕ್ರಮವನ್ನು ಸೋಮಶೇಖರ ಸ್ವಾಮೀಜಿ ಉದ್ಘಾಟಿಸಿದರು. ಬಸವ ಮರುಳಸಿದ್ದ ಸ್ವಾಮೀಜಿ, ಕೆ.ಎಸ್.ಲಿಂಗೇಶ್ ಇದ್ದರು   

ಬೇಲೂರು: ‌‘ರೈತನಿಗೆ ಹೆಣ್ಣು ಕೊಡಲು ಜನ ಮೀನಮೇಷ ಎಣಿಸುತ್ತಿರುವುದು ಬೇಸರದ ಸಂಗತಿ’ ಎಂದು ‌ಚಿಕ್ಕಮಗಳೂರು ಬಸವತತ್ವ ಪೀಠದ ಬಸವ ಮರುಳಸಿದ್ದ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಬನದಹಳ್ಳಿಯಲ್ಲಿ ಗುರುವಾರ ಆಯೋಜಿಸಿದ್ದ ಲಕ್ಷ್ಮಿದೇವಿ ಅಮ್ಮನವರ ರಥೋತ್ಸವ, ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ದೇಶಕ್ಕೆ ಅನ್ನ ನೀಡುವ ರೈತನ ಹೆಸರಿನಲ್ಲಿ ಜನಪ್ರತಿನಿಧಿಗಳು ಪ್ರಮಾಣ ವಚನ ಸ್ವೀಕರಿಸುತ್ತಾರೆ. ಆದರೆ, ರೈತರಿಗೆ ಅನುಕೂಲವಾಗುವಂತಹ ಕೆಲಸ ಮಾಡುವಲ್ಲಿ ವಿಫಲರಾಗುತ್ತಿದ್ದಾರೆ’ ಎಂದು ದೂರಿದರು.

ADVERTISEMENT

ಹಳೇಬೀಡು ಪುಷ್ಪಗಿರಿ ಮಠದ ಸೋಮಶೇಖರ ಸ್ವಾಮೀಜಿ ಮಾತನಾಡಿ, ‘ವೇದಿಕೆಗಳಲ್ಲಿ ಜಾತ್ಯತೀತವಾಗಿ ಮಾತನಾಡುವ ಜನಪ್ರತಿನಿಧಿಗಳು ಜಾತಿ, ಧರ್ಮ ಆಧಾರದ ಮೇಲೆಯೇ ರಾಜಕಾರಣ ಮಾಡುತ್ತಾರೆ’ ಎಂದು ದೂರಿದರು.

‘ಇಂದಿನ ರಾಜಕೀಯ ಮತ್ತು ಜಾತಿ ವ್ಯವಸ್ಥೆ ದೇಶಕ್ಕೆ ಆಪತ್ತು ತರಲಿದೆ. ಜಾತ್ರೆ, ರಥೋತ್ಸವಗಳು ಧರ್ಮಾಂಧತೆ ಮತ್ತು ಜಾತಿ ಸಂಘರ್ಷವನ್ನು ದೂರ ಮಾಡಿ ಎಲ್ಲರೂ ಒಂದೇ ಎಂಬುದನ್ನು ಸಾರುತ್ತವೆ. ನಮ್ಮ ಆಚರಣೆಗಳು ಬದುಕಿಗೆ ಪೂರಕವಾಗಿರಬೇಕು. ಆದರೆ, ಇತ್ತೀಚಿನ ದಿನಗಳಲ್ಲಿ ಭಕ್ತಿ ಎಂಬುದು ನಶಿಸಿ ಹೋಗಿದೆ’ ಎಂದು ಬೇಸರ ವ್ಯಕ್ತಪಡಿಸಿಸಿದರು.

ಶಾಸಕ ಕೆ.ಎಸ್.ಲಿಂಗೇಶ್, ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಕೊರಟಿಕೆರೆ ಪ್ರಕಾಶ್, ರಾಷ್ಟ್ರಧರ್ಮ ಸಂಘಟನೆ ಅಧ್ಯಕ್ಷ ಸಂತೋಷ್ ಕೆಂಚಾಂಬ, ಬಿಜೆಪಿ ರಾಜ್ಯ ಮಹಿಳಾ ಘಟಕದ ಕೋಶಾಧ್ಯಕ್ಷೆ ಸುರಭಿರಘು, ಅಖಿಲ ಭಾರತ ವೀರಶೈವ– ಲಿಂಗಾಯತ ಮಹಾಸಭಾದ ತಾಲ್ಲೂಕು ಘಟಕದ ಅಧ್ಯಕ್ಷ ಬಲ್ಲೇನಹಳ್ಳಿ ರವಿಕುಮಾರ್, ಮಾಜಿ ಅಧ್ಯಕ್ಷ ರಾಜಶೇಖರ, ಪುಷ್ಪಗಿರಿ ಮಠದ ಕಾರ್ಯದರ್ಶಿ ರಾಜಶೇಖರ, ಎಂಜಿನಿಯರ್ ಮಲ್ಲೇಶ್, ಮಹಾದೇವ್, ಭದ್ರಕಾಳಿ ಬನದ ಅಧ್ಯಕ್ಷ ಸಿದ್ದರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.