ADVERTISEMENT

ಹಾಸನ: ಹಲ್ಮಿಡಿಯಲ್ಲಿ ಅಭಿವೃದ್ಧಿ ಮರೀಚಿಕೆ

ಕನ್ನಡದ ಮೊದಲ ಶಿಲಾಶಾಸನ ದೊರೆತ ಗ್ರಾಮದ ದುಸ್ಥಿತಿ

ಕೆ.ಎಸ್.ಸುನಿಲ್
Published 1 ನವೆಂಬರ್ 2021, 7:05 IST
Last Updated 1 ನವೆಂಬರ್ 2021, 7:05 IST
ಬೇಲೂರು ತಾಲ್ಲೂಕಿನ ಹಲ್ಮಿಡಿ ಗ್ರಾಮದಲ್ಲಿರುವ ಕನ್ನಡದ ಪ್ರಥಮ ಶಿಲಾ ಶಾಸನದ ಪ್ರತಿಕೃತಿ ಮಂಟಪ.
ಬೇಲೂರು ತಾಲ್ಲೂಕಿನ ಹಲ್ಮಿಡಿ ಗ್ರಾಮದಲ್ಲಿರುವ ಕನ್ನಡದ ಪ್ರಥಮ ಶಿಲಾ ಶಾಸನದ ಪ್ರತಿಕೃತಿ ಮಂಟಪ.   

ಹಾಸನ: ಕನ್ನಡದ ಮೊದಲ ಶಿಲಾ ಶಾಸನ ದೊರೆತ ಬೇಲೂರು ತಾಲ್ಲೂಕಿನ ಕೊನೇ ಗ್ರಾಮ ‘ಹಲ್ಮಿಡಿ’ ಗ್ರಾಮದ ಅಭಿವೃದ್ಧಿ ಮರೀಚಿಕೆಯಾಗಿದೆ.

ತಾಲ್ಲೂಕು ಕೇಂದ್ರದಿಂದ ಕೇವಲ 16 ಕಿ.ಮೀ. ದೂರದಲ್ಲಿರುವ, ನಾರಾಯಣಪುರ ಪಂಚಾಯ್ತಿಗೆ ಸೇರಿದ ಗ್ರಾಮದಲ್ಲಿ 400 ಕುಟುಂಬ, 2 ಸಾವಿರ ಜನಸಂಖ್ಯೆ ಇದೆ. ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯೇ ಗುಂಡಿಮಯವಾಗಿದ್ದು, ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲ.

ಬೆಳಿಗ್ಗೆ ಮತ್ತು ಸಂಜೆ ಮಾತ್ರ ಸಾರಿಗೆ ಬಸ್‌ ವ್ಯವಸ್ಥೆ ಇದೆ. ಉಳಿದ ವೇಳೆ ಆಟೋರಿಕ್ಷಾದಲ್ಲಿ ದುಪ್ಪಟ್ಟು ಹಣ ನೀಡಿ ಜನ ಪ್ರಯಾಣಿಸುತ್ತಾರೆ. ಬೇಲೂರಿನ ನಿಲ್ದಾಣಕ್ಕೆ ಬಸ್‌ ಬಾರದಿದ್ದರೆ ಜನ ಚಿಕ್ಕಮಗಳೂರು ಬಸ್‌ನಲ್ಲಿ ಚನ್ನಪುರದವರೆಗೆ ಬಂದು ಅಲ್ಲಿಂದ ಮೂರು ಕಿಲೋ ಮೀಟರ್‌ ನಡೆದು ಗ್ರಾಮಕ್ಕೆ ಬರುತ್ತಾರೆ.

ADVERTISEMENT

ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವಿಲ್ಲ. ಅಂಚೆ ಕಚೇರಿ, ಗ್ರಂಥಾಲಯ, ಬಯಲು ರಂಗ ಮಂದಿರವೂ ಇಲ್ಲ. ಸರ್ಕಾರಿ ಶಾಲೆಗೆ ಕಾಂಪೌಡ್‌ ಇಲ್ಲ.ನಿರ್ವಹಣೆ ಇಲ್ಲದೆ ಸಾಂಸ್ಕೃತಿಕ ಭವನ ಪಾಳು ಬಿದ್ದಿದೆ.

2016ರಲ್ಲಿ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ಹಲ್ಮಿಡಿ ಉತ್ಸವವನ್ನು ಆಚರಿಸಿದ ಬಳಿಕ ಕನ್ನಡ ಸಂಘ–ಸಂಸ್ಥೆಗಳು ಗ್ರಾಮವನ್ನು ಮರೆತುಬಿಟ್ಟಿವೆ. ಜಯಕರ್ನಾಟಕ ಸಂಘಟನೆಯು ಗ್ರಾಮಕ್ಕೆ ಸ್ವಾಗತ ಕಮಾನು ನಿರ್ಮಿಸಿಕೊಟ್ಟಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಾಂಸ್ಕೃತಿಕ ಭವನದಲ್ಲಿ ನೀರಿಲ್ಲದೆ ಶೌಚಗೃಹ ಬಂದ್‌ ಆಗಿದೆ. ಭವನದ ಕಿಟಕಿ ಗಾಜುಗಳು ಒಡೆದಿವೆ. ವರ್ಷಕ್ಕೆ ಒಂದೆರಡು ಕಾರ್ಯಕ್ರಮ ನಡೆದರೆ ಅದೇ ಹೆಚ್ಚು.

‘ಹಲ್ಮಿಡಿ ಶಾಸನ ಗ್ರಾಮಾಭಿವೃದ್ಧಿ ಟ್ರಸ್ಟ್’ ರಾಜ್ಯೋತ್ಸವದಲ್ಲಿ ಮಾತ್ರ, ಶಾಸನದ ಪ್ರತಿಕೃತಿಯನ್ನು ಇರಿಸಲಾಗಿರುವ ಮಂಟಪದ ಆವರಣವನ್ನು ಸ್ವಚ್ಛಗೊಳಿಸಿ, ಶಾಲೆ ಮಕ್ಕಳೊಂದಿಗೆ ಕಾರ್ಯಕ್ರಮವನ್ನು ಆಯೋಜಿಸುತ್ತದೆ. ಮತ್ತೆ ಮಂಟಪದ ಕಡೆ ಜನ ಸುಳಿಯುವುದಿಲ್ಲ.

‘ಗ್ರಾಮವನ್ನು ಪ್ರವಾಸಿ ಕೇಂದ್ರವನ್ನಾಗಿಸಬೇಕು. ಶಾಸನದ ಪ್ರತಿರೂಪ ಮಂಟಪದ ನಿರ್ವಹಣೆಗೆ ನೀಲಿನಕ್ಷೆ ಸಿದ್ಧಗೊಳ್ಳಬೇಕು. ಜನಪ್ರತಿನಿಧಿಗಳು ನೀಡಿದ ಯಾವ ಭರವಸೆಯೂ ಈಡೇರಿಲ್ಲ’ ಎಂದು ಟ್ರಸ್ಟ್‌ ಸದಸ್ಯ ಗುರುಸಿದ್ದೇಗೌಡ ಬೇಸರ ವ್ಯಕ್ತಪಡಿಸಿದರು.

‘ಯಗಚಿ ನದಿ ಹಿನ್ನೀರಿನಿಂದ ಕುಡಿಯುವ ನೀರು ಪೂರೈಸಬಹುದಾದರೂ ಅಧಿಕಾರಿಗಳು ಕ್ರಮ ವಹಿಸಿಲ್ಲ. ವಾರದಲ್ಲಿ ಎರಡು ಬಾರಿ ಕೊಳವೆ ಬಾವಿ ನೀರು ಪೂರೈಸಲಾಗುತ್ತದೆ’ ಎಂದು ಹಲ್ಮಿಡಿ ನಿವಾಸಿ ಈಶ್ವರ್‌ ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.