ADVERTISEMENT

ಸಿ.ಎಂ. ಇಬ್ರಾಹಿಂ ಕಾಂಗ್ರೆಸ್‌ಗೆ ಹೋಗುವುದಾದರೆ ಹೋಗಲಿ: ಎಚ್‌.ಡಿ. ರೇವಣ್ಣ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2023, 13:40 IST
Last Updated 17 ಅಕ್ಟೋಬರ್ 2023, 13:40 IST
<div class="paragraphs"><p>ಶಾಸಕ ಎಚ್‌.ಡಿ. ರೇವಣ್ಣ</p></div>

ಶಾಸಕ ಎಚ್‌.ಡಿ. ರೇವಣ್ಣ

   

ಹಾಸನ: ಇಬ್ರಾಹಿಂ ಕಾಂಗ್ರೆಸ್‌ಗೆ ಹೋಗುವುದಾದರೆ ಹೋಗಲಿ, ನನ್ನದೇನು ಅಭ್ಯಂತರವಿಲ್ಲ, ಜೆಡಿಎಸ್ ವರಿಷ್ಠರಾದ ಹೆಚ್.ಡಿ. ದೇವೇಗೌಡರು ಕುಳಿತುಕೊಂಡು ತೀರ್ಮಾನ ಮಾಡ್ತಾರೆ. ಯಾರನ್ನು ಉಚ್ಚಾಟನೆ ಮಾಡ್ತಾರೆ ನೋಡೋಣ, ಅದಕ್ಕೆಲ್ಲಾ ಯಾಕೆ ತಲೆ ಕೆಡಿಸಿಕೊಳ್ಳುತ್ತೀರಾ ಎಂದು ಶಾಸಕ ಹೆಚ್.ಡಿ.ರೇವಣ್ಣ ಹೇಳಿದರು‌.

ನಗರದ ಸಂಸದರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಹೇಳಿಕೆ ನೀಡುತ್ತಿರುವ ಹಿಂದೆ ಕಾಂಗ್ರೆಸ್ ಪಕ್ಷದ ಕುತಂತ್ರ ಅಡಗಿದೆ. ಇತ್ತೀಚೆಗೆ ಇಬ್ರಾಹಿಂ ಕರೆದ ಸಭೆಯಲ್ಲಿ ಯಾರು ಕುಳಿತಿದ್ದರು ನೋಡಿದ್ದೀರ, ಆ ಜೆ.ಎಚ್.ಪಟೇಲ್ ಮಗನನ್ನು ಕೂರಿಸಿಕೊಂಡು ಸಭೆ ಮಾಡಿದ್ದಾರೆ. ದೇವೇಗೌಡರನ್ನು ಅರವತ್ತು ವರ್ಷ ಕಾಂಗ್ರೆಸ್ ಹೇಗೆ ನಡೆಸಿಕೊಂಡಿತು, ಕೋಮುವಾದಿ ದೂರವಿಡಬೇಕು ಅಂತ ನಮ್ಮ ಜೊತೆ ಬರುತ್ತಾರೆ, ದೇವೇಗೌಡರು, ಕುಮಾರಸ್ವಾಮಿ ಮಗನನ್ನು ಸೋಲಿಸಿದವರು ಯಾರು..!? ಅಂತಹ ಕಾಂಗ್ರೆಸ್‌ಗೆ ಹೋಗಿ ಬೀಳ್ತಿವಿ ಅಂದರೆ ನಮಗೇನು ಅಭ್ಯಂತರ ಇಲ್ಲ ಎಂದು ಹೇಳಿದರು.

ADVERTISEMENT

ಕಾಂಗ್ರೆಸ್ ಸಿಪಿಎಂ ಮುಗಿಸಿ ಆಯ್ತು, ಈಗ ನಮ್ಮ ಹತ್ತಿರ ಬಂದಿದ್ದಾರೆ, ಇವತ್ತು ಒರಿಜಿನಲ್ ಕಾಂಗ್ರೆಸ್ ಇಲ್ಲವಾಗಿದೆ. ನೆಹರು, ಗಾಂಧಿ ಕಾಲದ ಕಾಂಗ್ರೆಸ್ ಈಗಿಲ್ಲವಾಗಿದೆ. ಇಂತಹ ಕಾಂಗ್ರೆಸ್‌ಗೆ ಹೆದರುವುದಾದರೆ ಮನೆ ಸೇರಿಕೊಳ್ಳಬೇಕಾಗುತ್ತದೆ, ಕಾಂಗ್ರೆಸ್‌ನ ಇಂತಹ ಕುತಂತ್ರಕ್ಕೆ ನಾವು ಹೆದರುವುದಿಲ್ಲ, ಸ್ವಲ್ಪ ದಿನ ತಡೆಯಿರಿ ಕಾಲವೇ ನಿರ್ಧರಿಸುತ್ತದೆ ಎಂದು ಹೇಳಿದರು.

ಜೆಡಿಎಸ್ ಇಬ್ಬಾಗ ಆಗಲ್ಲ, ನಾವು ಹತ್ತೊಂಭತ್ತು ಜನ ಶಾಸಕರು ಇದ್ದೇವೆ. ದೇವೇಗೌಡರು, ಕುಮಾರಸ್ವಾಮಿ ಈ ಪಕ್ಷಕ್ಕಾಗಿ ಏನೇನ್ ಮಾಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ದೇವೇಗೌಡರ ಅಂಗಳದಲ್ಲಿ ಚೆಂಡು ಇದೆ, ಅವರು ರಾಷ್ಟ್ರೀಯ ಅಧ್ಯಕ್ಷರಿದ್ದಾರೆ ತೀರ್ಮಾನ ಮಾಡ್ತಾರೆ. ಇಬ್ರಾಹಿಂ ಕಾಂಗ್ರೆಸ್ ಹೋಗುವುದಾದರೆ ಸಂತೋಷ, ನಮ್ಮದೇನು ಅಭ್ಯಂತರವಿಲ್ಲ ಎಂದರು.


ರೈತರ ಹಿತದೃಷ್ಟಿಯಿಂದ ಹೇಮಾವತಿ ಜಲಾಶಯದಿಂದ ತಕ್ಷಣ ನಾಲೆಗಳಿಗೆ ನೀರುಹರಿಸುವಂತೆ ಒತ್ತಾಯಿಸಿದ ಅವರು ಹೇಮಾವತಿ ಜಲಾಶಯದಿಂದ ಜಿಲ್ಲೆಯ ಸುಮಾರು ೧.೦೭ ಲಕ್ಷ ಎಕರೆ ಪ್ರದೇಶಗಳಿಗೆ ನೀರಾವರಿ ಒದಗಿಸಲಾಗುತ್ತಿದೆ. ಮಳೆಯ ಕೊರತೆಯಿಂದ ಬಹುತೇಕ ಬೆಳೆ ಒಣಗುವ ಪರಿಸ್ಥಿತಿ ಎದುರಾಗಿದ್ದು ಸಾಕಷ್ಟು ಬೆಳೆ ಇದಾಗಲೇ ನೆಲ ಕಚ್ಚಿದೆ.ಆದ್ದರಿಂದ ಅಳಿದುಳಿದ ಬೆಳೆಯನ್ನು ಉಳಿಸಿಕೊಳ್ಳುವ ದೃಷ್ಟಿಯಿಂದ ಜಲಾಶಯದಿಂದ ನೀರು ಹರಿಸಬೇಕು ಎಂದು ಆಗ್ರಹಿಸಿದರು.

ಮುಂದಿನ ಅಕ್ಟೋಬರ್ ೧೯ ರಂದು ನೀರಾವರಿ ಸಲಹಾ ಸಮಿತಿ ಸಭೆಯನ್ನು ಕರೆಯಲಾಗುತ್ತಿದೆ ಈ ಸಂದರ್ಭದಲ್ಲಿ ಅಗತ್ಯ ಸಲಹೆ ಸೂಚನೆಗಳನ್ನು ಪತ್ರ ಮುಖೇನ ನೀಡಲಿದ್ದೇನೆ ಆದರೆ ಸಭೆಯಲ್ಲಿ ಹಾಜರಾಗುವುದಿಲ್ಲ ಎಂದು ರೇವಣ್ಣ ಸ್ಪಷ್ಟಪಡಿಸಿದರು.

ಹೇಮಾವತಿ ಜಲಾಶಯದಿಂದ ನಾಲೆಗೆ ನೀರು ಹರಿಸದಿದ್ದರೆ ನೀರಾವರಿ ಸಲಹಾ ಸಮಿತಿ ಸಭೆಯ ಬಳಿಕ ಜೆಡಿಎಸ್ ಪಕ್ಷದಿಂದ ಡ್ಯಾಮ್ ಎದುರು ಪ್ರತಿಭಟನೆ ಹಮ್ಮಿಕೊಳ್ಳುವ ಸಂಬಂಧ ತೀರ್ಮಾನ ಕೈಗೊಳ್ಳಲಾ ಗುವುದು ಎಂದು ರೇವಣ್ಣ ಎಚ್ಚರಿಸಿದರು.


ಜಿಲ್ಲೆಯಲ್ಲಿ ಬೆಳೆ ನಷ್ಟದ ಸಂಬಂಧ ಜಿಲ್ಲಾಡಳಿತ ಸಮಗ್ರ ಸರ್ವೆ ಕಾರ್ಯ ನಡೆಸಿ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಕೃಷಿ, ಕಂದಾಯ,ತೋಟಗಾರಿಕೆ ಸೇರಿದಂತೆ ಇತರ ಇಲಾಖೆ ಅಧಿಕಾರಿಗಳು ಬೆಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಸಮೀಕ್ಷೆ ನಡೆಸಿ ಅಗತ್ಯ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದರೆ.ಪರಿಹಾರ ವಿತರಣೆಗೆ ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಬೇಕು ಎಂದು ಆಗ್ರಹಿಸಿದರು.

ಜಿಲ್ಲೆಯಲ್ಲಿ ಆಡಳಿತ ಸಂಪೂರ್ಣ ಕುಸಿತವಾಗಿದೆ ಕೆಎಂಎಫ್ ಮೂಲಕ ಮೆಕ್ಕೆಜೋಳ ಖರೀದಿ ಸಂಬಂಧ ಪ್ರತಿಭಟಿಸಿ ಒತ್ತಾಯಿಸಿದರು ಇದುವರೆಗೂ ಸಹ ಕ್ರಮ ಕೈಗೊಂಡಿಲ್ಲ ಕೇವಲ ಮೂರು ಗುತ್ತಿಗೆದಾರರ ಲಾಭಕ್ಕಾಗಿ ಜೋಳ ಖರೀದಿ ಮಾಡಲಾಗುತ್ತಿದೆ. ಲಕ್ಷಾಂತರ ಮಂದಿ ರೈತರು ನೇರವಾಗಿ ಜೋಳ ಮಾರಾಟ ಮಾಡಲು ಸಿದ್ಧವಿದ್ದರೂ ಸರ್ಕಾರ ಖರೀದಿಸಲು ಮುಂದಾಗುತ್ತಿಲ್ಲ ಎಂದು ಆರೋಪಿಸಿದರು.

ಸಾವಿರ ತೆಂಗಿನ ಕಾಯಿ ಒಡೆದು ಪ್ರಾರ್ಥನೆ:

ವಾರದ ನಂತರ ತೆಂಗಿಗೆ ಬೆಂಬಲ ಬೆಲೆ ಕೆಎಂಎಫ್ ಮೂಲಕ ಜೋಳ ಖರೀದಿ ಮಾಡುವಂತೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಇದೇ ಸಂದರ್ಭದಲ್ಲಿ ಒಂದು ಸಾವಿರ ತೆಂಗಿನಕಾಯಿ ಒಡೆಯುವ ಮೂಲಕ ಕಾಂಗ್ರೆಸ್ ಸರ್ಕಾರ ಉತ್ತಮ ಆಡಳಿತ ನೀಡಲು ಮುಂದಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಲಾಗುವುದು ಎಂದು ಹೇಳಿದರು.

ಮುಂದಿನ ತಿಂಗಳು ಹಾಸನಾಂಬ ಜಾತ್ರಾ ಮಹೋತ್ಸವ ಆರಂಭವಾಗಲಿದ್ದು ಇದನ್ನೇ ನೆಪವಾಗಿ ಇಟ್ಟುಕೊಂಡು ರೈತರಿಗೆ ಜಿಲ್ಲಾಡಳಿತ ಅನ್ಯಾಯ ಮಾಡಬಾರದು. ಕಂದಾಯ ಕೃಷಿ ತೋಟಗಾರಿಕೆ ಸೇರಿದಂತೆ ಇತರೆ ಇಲಾಖೆಗಳನ್ನು ಜಾತ್ರಾ ಮಹೋತ್ಸವ ಕೆಲಸಗಳಿಗೆ ನಿಯೋಜಿಸದೆ ಮೊದಲು ರೈತರ ಬೆಳೆ ನಷ್ಟ ಪರಿಹಾರ ಕುರಿತು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ರೇವಣ್ಣ ಒತ್ತಾಯಿಸಿದರು.

ಎಲ್ಲಾ ತಾಲ್ಲೂಕಿನಲ್ಲಿ ಎಸಿ ಕಚೇರಿ ಆಗಲಿ:

ನಿನ್ನೆ ಅರಸೀಕೆರೆಯಲ್ಲಿ ನಡೆದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಅರಸೀಕೆರೆಯಲ್ಲಿಯೇ ಉಪವಿಭಾಗಾಧಿಕಾರಿ ಕಚೇರಿ ತೆರೆಯಲು ಸ್ಥಳೀಯ ಶಾಸಕರು ಒತ್ತಾಯಿಸಿದ್ದಾರೆ. ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿಯೂ ಎಸಿ ಕಚೇರಿ ತೆರೆದರೆ ಎಲ್ಲರಿಗೂ ಅನುಕೂಲವಾಗಲಿದೆ. ಅರಸೀಕೆರೆಗೆ ಹೆಚ್ಚು ಅನುದಾನ ನೀಡುತ್ತಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು ಅರಸೀಕೆರೆ ಅಭಿವೃದ್ಧಿಯಾದರೆ ಇನ್ನೂ ಉತ್ತಮ ಇತರೆ ತಾಲೂಕಿಗೆ ನೆರವು ನೀಡಿದರೆ ಅನುಕೂಲವಾಗಲಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.