ADVERTISEMENT

ಎತ್ತಿನ ಗಾಡಿಗೆ ಸುಂಕವಿಲ್ಲ: ಶಾಸಕ

ಬೂಕನ ಬೆಟ್ಟ: ಉತ್ತಮ ರಾಸುಗಳಿಗೆ 2 ಚಿನ್ನದ ಬಹುಮಾನ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2025, 2:57 IST
Last Updated 10 ಡಿಸೆಂಬರ್ 2025, 2:57 IST
ಹಿರೀಸಾವೆ ಹೋಬಳಿಯ ಬೂಕನಬೆಟ್ಟದಲ್ಲಿ ಸೋಮವಾರ ‌ರಂಗನಾಥಸ್ವಾಮಿಯ ರಾಸು ಜಾತ್ರೆಯ ಪೂರ್ವಭಾವಿ ಸಭೆಯಲ್ಲಿ ಶಾಸಕ ಬಾಲಕೃಷ್ಣ ಅವರು ರೈತರು, ಅಧಿಕಾರಿಗಳೊಂದಿಗೆ ಜಾತ್ರೆಯ ಸಿದ್ದತೆ ಬಗ್ಗೆ ಚರ್ಚಿಸಿದರು 
ಹಿರೀಸಾವೆ ಹೋಬಳಿಯ ಬೂಕನಬೆಟ್ಟದಲ್ಲಿ ಸೋಮವಾರ ‌ರಂಗನಾಥಸ್ವಾಮಿಯ ರಾಸು ಜಾತ್ರೆಯ ಪೂರ್ವಭಾವಿ ಸಭೆಯಲ್ಲಿ ಶಾಸಕ ಬಾಲಕೃಷ್ಣ ಅವರು ರೈತರು, ಅಧಿಕಾರಿಗಳೊಂದಿಗೆ ಜಾತ್ರೆಯ ಸಿದ್ದತೆ ಬಗ್ಗೆ ಚರ್ಚಿಸಿದರು    

ಹಿರೀಸಾವೆ: ಹೋಬಳಿಯ ಬೂಕನ ಬೆಟ್ಟದಲ್ಲಿ ಜ.10ರಿಂದ 21ರವರೆಗೆ ನಡೆಯುವ ಶ್ರೀರಂಗನಾಥಸ್ವಾಮಿಯ ಜಾತ್ರೆಗೆ ಬರುವ ಜಾನುವಾರಗಳಿಗೆ ಮತ್ತು ಎತ್ತಿನ ಗಾಡಿಗೆ ಸುಂಕ ವಸೂಲಾತಿ ಇರುವುದಿಲ್ಲ. 18 ಜೊತೆ ಉತ್ತಮ ಎತ್ತುಗಳಿಗೆ ನೀಡುತ್ತಿದ್ದ ನಗದು ಬಹುಮಾನದ ಬದಲು 2 ಗ್ರಾಂ ಚಿನ್ನ ವೈಯಕ್ತಿಕವಾಗಿ ನೀಡುವುದಾಗಿ ಶಾಸಕ ಸಿ.ಎನ್. ಬಾಲಕೃಷ್ಣ ಘೋಷಿಸಿದರು.

ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಸೋಮವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

‘ಸಭೆಯ ಆರಂಭದಲ್ಲಿ ಸುಂಕವನ್ನು ಕೈಬಿಡುವಂತೆ ರೈತ ಮುಖಂಡರು ಆಗ್ರಹಿಸಿದ್ದು, ಇದಕ್ಕೆ ಎಲ್ಲರ ಸಹಮತವಿದೆ. ಇತರೆ ಸುಂಕಗಳ ಬಹಿರಂಗ ಹರಾಜು ಪ್ರಕ್ರಿಯೆಯನ್ನು ತಹಶೀಲ್ದಾರ್ ದಿನಾಂಕವನ್ನು ನಿಗದಿಪಡಿಸಿ ನಡೆಸುತ್ತಾರೆ’ ಎಂದು ಹೇಳಿದರು.

ADVERTISEMENT

‘ದಾನಿಗಳು ಮತ್ತು ಹಾಲು ಒಕ್ಕೂಟದ ವತಿಯಿಂದ ಕುಡಿಯುವ ನೀರು ಸರಬರಾಜು ಮಾಡಲಿದ್ದು, ಮತಿಘಟ್ಟ ಪಂಚಾಯಿತಿಯವರು ವಿದ್ಯುತ್ ದೀಪಗಳ ವ್ಯವಸ್ಥೆ, ಬೆಳಗೀಹಳ್ಳಿ ಪಂಚಾಯಿತಿಯವರು ಕುಡಿಯುವ ನೀರು ಸರಬರಾಜು ಮಾಡಬೇಕು. ಗ್ರಾಮೀಣ ಕ್ರೀಡೆಗಳನ್ನು ಹಿರೀಸಾವೆ ಗ್ರಾಮ ಪಂಚಾಯಿತಿಯವರು ಮತ್ತು ಕೃಷಿ ಮತ್ತು ತೋಟಗಾರಿಕೆ ಇಲಾಖೆಯವರು ಕೃಷಿ ಮೇಳವನ್ನು ಆಯೋಜಿಸಬೇಕು’ ಎಂದರು.

‘ಪಶು ಸಂಗೋಪನಾ ಮತ್ತು ಆರೋಗ್ಯ ಇಲಾಖೆಯ ವೈದ್ಯರು ಜಾತ್ರೆಯಲ್ಲಿ ಕರ್ತವ್ಯ ನಿರ್ವಹಿಸಬೇಕು. ಸೆಸ್ಕ್ ವತಿಯಿಂದ ತಾತ್ಕಾಲಿಕವಾಗಿ 63 ಕೆವಿ ವಿದ್ಯುತ್ ಪರಿವರ್ತಕವನ್ನು (ಟಿಸಿ) ಆಳವಡಿಸುವಂತೆ ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು. ಜಾತ್ರೆ ಮತ್ತು ರಥೋತ್ಸವ ಯಶಸ್ವಿಗೆ ಎಲ್ಲರೂ ಸಹಕರಿಸಿ’ ಎಂದು ಮನವಿ ಮಾಡಿದರು.

ರೈತರ ಪರವಾಗಿ ಎಚ್.ಎಸ್. ರವಿಕುಮಾರ್ ಹೆಗ್ಗಡಿಹಳ್ಳಿ ಕೃಷ್ಣಮೂರ್ತಿ, ಮತಿಘಟ್ಟ ನಾಗೇಶ್, ರಂಗಸ್ವಾಮಿ, ಜನಿವಾರ ಸಂತೋಷ್, ಬೊಮ್ಮೇನಹಳ್ಳಿ ಗಿರೀಶ್, ಸುಂಡಹಳ್ಳಿ ರವಿ, ಕೃಷಿ ಸಂದೀಪ್, ಬೂಕದ ರಾಶಿಗೌಡ ಸಮಸ್ಯೆಗಳು ಮತ್ತು ಸಿದ್ಧತೆ ಬಗ್ಗೆ ಮಾತನಾಡಿದರು.

ಸಭೆಯಲ್ಲಿ ತಹಶೀಲ್ದಾರ್ ಜಿ.ಎಸ್. ಶಂಕರಪ್ಪ, ಉಪ ತಹಶೀಲ್ದಾರ್ ರವಿ, ಪಿಎಲ್‌ಡಿಬಿ ಅಧ್ಯಕ್ಷ ಬಿ.ಎಂ. ಮುಂಜುನಾಥ್. ಕೆಡಿಪಿ ನಾಮನಿರ್ದೇಶಿತ ಸದಸ್ಯ ಯೋಗೇಶ್, ಕೃಷಿ ಪತ್ತಿನ ಸಹಾರ ಸಂಘದ ಅಧ್ಯಕ್ಷ ಮಹೇಶ್, ಮುಖಂಡರಾದ ಎಚ್.ಜಿ. ರಾಮಕೃಷ್ಣ, ಎಚ್.ಎಂ. ರಘು ದೇವಸ್ಥಾನದ ಪಾರುಪತ್ತೇದಾರ ರಂಗರಾಜ್, ಆರ್‌ಐ ಯೋಗೇಶ್ ಸೇರಿದಂತೆ ಚನ್ನರಾಯಪಟ್ಟಣ ತಾಲ್ಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ರೈತರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.