ಹಾಸನ: ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಬಸವೇಶ್ವರರ ಜಯಂತಿ ಆಚರಿಸಲಾಯಿತು. ಡಾ.ಅಂಬೇಡ್ಕರ್ ಹಾಗೂ ಬಸವೇಶ್ವರರ ಭಾವಚಿತ್ರಗಳಿಗೆ ಗಣ್ಯರು ಪುಷ್ಪನಮನ ಸಲ್ಲಿಸಿದರು.
ನಗರದ ಸರ್ಕಾರಿ ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಾ.ಮಂಜಯ್ಯ ಮಾತನಾಡಿ, ದೇಶದ ಹಾಗೂ ಸಮಾಜದ ಏಳ್ಗೆಗೆ ಶ್ರಮಿಸಿದ ಅಂಬೇಡ್ಕರ್ ಹಾಗೂ ಬಸವೇಶ್ವರರ ಜಯಂತಿಯನ್ನು ಪತ್ರಕರ್ತರ ಭವನದಲ್ಲಿ ಆಚರಿಸುತ್ತಿರುವುದು ಶ್ಲಾಘನೀಯ ಎಂದರು.
‘ಅಂಬೇಡ್ಕರ್ ಕೇವಲ ಒಂದು ಜಾತಿ, ಸಮುದಾಯಗಳಿಗೆ ಸೀಮಿತವಲ್ಲ. ಅವರು ಬರೆದಿರುವ ಸಂವಿಧಾನದಲ್ಲಿಯೂ ಎಲ್ಲ ಜಾತಿ, ವರ್ಗಗಳಿಗೆ ಸಮಾನವಾಗಿ ಹಕ್ಕುಗಳನ್ನು ನೀಡುವ ಕುರಿತು ಪ್ರಸ್ತಾಪಿಸಿದ್ದಾರೆ. ಅದಕ್ಕಾಗಿಯೇ ಅವರು ಹೋರಾಟ ನಡೆಸಿದರು. ಅವರ ಜಯಂತಿ ಆಚರಣೆ ಔಚಿತ್ಯಪೂರ್ಣವಾಗಿದೆ’ ಎಂದರು.
‘ಅಂಬೇಡ್ಕರ್ ಅವರು ಸಮಾಜದಲ್ಲಿ ಅನುಭವಿಸಿದ ನೋವನ್ನು ಮೆಟ್ಟಿ ನಿಂತು ಬೆಳೆದರು. 29ಕ್ಕೂ ಹೆಚ್ಚು ಪದವಿಗಳನ್ನು ಪಡೆದರು. ಜನಸಂಖ್ಯೆಗೆ ಅನುಗುಣವಾಗಿ ಪ್ರತಿಯೊಬ್ಬರಿಗೂ ಸಮಾನತೆ ಹಾಗೂ ಹಕ್ಕುಗಳನ್ನು ಎಲ್ಲ ಕ್ಷೇತ್ರದಲ್ಲಿಯೂ ದೊರೆಯುವಂತೆ ಪ್ರತಿಪಾದಿಸಿದರು. ಇಂದಿಗೂ ಅವರು ಒಂದು ವರ್ಗಕ್ಕೆ ಸೀಮಿತ ಎಂಬ ತಪ್ಪು ಅಭಿಪ್ರಾಯವಿದೆ’ ಎಂದರು.
‘ಬಸವಣ್ಣನವರು ದೇಶ ಕಂಡ ಮಹಾನ್ ಪುರುಷ. ಸಾಂಸ್ಕೃತಿಕ ರಾಯಭಾರಿಯಾಗಿ, ಸಮಾಜದಲ್ಲಿನ ಅಸ್ಪೃಶ್ಯತೆ ಅಸಮಾನತೆ ಹೋಗಲಾಡಿಸುವ ನಿಟ್ಟಿನಲ್ಲಿ 12ನೇ ಶತಮಾನದಲ್ಲಿ ಹೋರಾಟ ನಡೆಸಿದರು. ನಿತ್ಯ ಕಾಯಕದಲ್ಲಿ ದೇವರನ್ನು ಕಾಣುವಂತೆ, ಕಾಯಕದ ಮೂಲಕ ದೈವತ್ವದ ಪರಿಕಲ್ಪನೆಯನ್ನು ಸಾರಿದ ಮಹಾನ್ ಪುರುಷ’ ಎಂದು ಹೇಳಿದರು.
ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಘಟಕದ ಕಾರ್ಯಕಾರಿ ಸಮಿತಿ ಸದಸ್ಯ ಎಚ್.ಬಿ ಮದನಗೌಡ ಮಾತನಾಡಿ, ಪತ್ರಕರ್ತರ ಸಂಘದಲ್ಲಿ ಜಾತ್ಯತೀತ ಆಲೋಚನೆಯೊಂದಿಗೆ ಡಾ. ಅಂಬೇಡ್ಕರ್ ಹಾಗೂ ಬಸವೇಶ್ವರರ ಜಯಂತಿ ಆಚರಣೆ ಮಾಡುತ್ತಿರುವುದು ಸ್ವಾಗತಾರ್ಹ ಎಂದರು.
ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಚ್. ವೇಣುಕುಮಾರ್ ಮಾತನಾಡಿ, ‘ಸಂವಿಧಾನದಲ್ಲಿ ವಾಕ್ ಸ್ವಾತಂತ್ರ್ಯದ ಪದದೊಂದಿಗೆ ಪತ್ರಿಕಾ ವೃತ್ತಿ ಮಾಡಲು ಹಕ್ಕು ನೀಡಿದ ಅಂಬೇಡ್ಕರ್ ಜಯಂತಿ ಆಚರಣೆ ಅರ್ಥಪೂರ್ಣವಾಗಿದೆ. 12ನೇ ಶತಮಾನದಲ್ಲಿ ಸಮಸಮಾಜ ನಿರ್ಮಾಣಕ್ಕೆ ತಮ್ಮದೇ ಆದ ಕೊಡುಗೆ ನೀಡಿದ ಬಸವಣ್ಣನವರ ಜಯಂತಿ ಆಚರಿಸಲಾಗುತ್ತಿದೆ’ ಎಂದರು.
ಸಂಘದ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷೆ ಲೀಲಾವತಿ, ಬಿ.ಆರ್. ಉದಯ್ ಕುಮಾರ್ ಮಾತನಾಡಿದರು. ಜಿಲ್ಲಾ ಘಟಕದ ಉಪಾಧ್ಯಕ್ಷ ಎಚ್.ಟಿ. ಮೋಹನ್ ಕುಮಾರ್ ಸ್ವಾಗತಿಸಿದರು. ಕೆ.ಎಂ. ಹರೀಶ್ ವಂದಿಸಿದರು. ಸಂಘದ ಮಾಜಿ ಅಧ್ಯಕ್ಷರಾದ ರವಿ ನಾಕಲಗೂಡು, ಬಾಳ್ಳುಗೋಪಾಲ್, ಪ್ರಧಾನ ಕಾರ್ಯದರ್ಶಿ ಬಿ.ಸಿ. ಶಶಿಧರ್, ಖಜಾಂಚಿ ಕುಮಾರ್, ಕಾರ್ಯದರ್ಶಿಗಳಾದ ಶ್ರೀನಿವಾಸ್ ಪಿ.ಎ., ನಟರಾಜ್, ಸಂತೋಷ್ ಸಿ.ಬಿ., ಕಾರ್ಯಕಾರಿ ಸಮಿತಿ ಸದಸ್ಯರು, ಪತ್ರಕರ್ತರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.