ADVERTISEMENT

ಆರ್‌ಟಿ–ಪಿಸಿಆರ್‌ ಪರೀಕ್ಷೆಗೆ ಸೂಚನೆ

ರೋಸರಿ ಚರ್ಚ್‌ನಲ್ಲಿ ಮಲೆಯಾಳಂ ಸಿನಿಮಾ ಚಿತ್ರೀಕರಣ, ಡಿಎಚ್ಒ ಭೇಟಿ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2021, 15:14 IST
Last Updated 4 ಮಾರ್ಚ್ 2021, 15:14 IST
ಚಿತ್ರೀಕರಣ ನಡೆಯುತ್ತಿರುವ ಹಾಸನ ತಾಲ್ಲೂಕಿನ ಶೆಟ್ಟಿಹಳ್ಳಿ ರೋಸರಿ ಚರ್ಚ್‌ ಗೆ  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಭೇಟಿ ನೀಡಿ ಮಾಹಿತಿ ಪಡೆದರು.
ಚಿತ್ರೀಕರಣ ನಡೆಯುತ್ತಿರುವ ಹಾಸನ ತಾಲ್ಲೂಕಿನ ಶೆಟ್ಟಿಹಳ್ಳಿ ರೋಸರಿ ಚರ್ಚ್‌ ಗೆ  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಭೇಟಿ ನೀಡಿ ಮಾಹಿತಿ ಪಡೆದರು.   

ಹಾಸನ: ಮಲೆಯಾಳಂ ಸಿನಿಮಾ ಚಿತ್ರೀಕರಣ ನಡೆಯುತ್ತಿರುವ ತಾಲ್ಲೂಕಿನ ಶೆಟ್ಟಿಹಳ್ಳಿಯ ಐತಿಹಾಸಿಕ ರೋಸರಿ ಚರ್ಚ್‌ಗೆ ಗುರುವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಂ.ಸತೀಶ್‌ ಮತ್ತು ವೈದ್ಯಾಧಿಕಾರಗಳ ತಂಡ ಭೇಟಿ ನೀಡಿ, ಮುನ್ನೆಚ್ಚರಿಕಾ ಕ್ರಮ ಅಳವಡಿಸಿಕೊಂಡಿರುವ ಬಗ್ಗೆ ಮಾಹಿತಿ ಪಡೆದುಕೊಂಡರು.

‘ಮಿನ್ನಲ್‌ ಮುರಲಿ’ಎಂಬ ಸಿನಿಮಾ ಚಿತ್ರೀಕರಣಕ್ಕಾಗಿ ಸುಮಾರು 150ಕ್ಕೂ ಹೆಚ್ಚು ಕಲಾವಿದರು ಕೇರಳದಿಂದ ಬಂದಿದ್ದು, ನಗರದ ಮೂರು ವಸತಿಗೃಹಗಳಲ್ಲಿ ವಾಸ್ತವ್ಯಹೂಡಿದ್ದಾರೆ. ಆದರೆ ಅವರು ಕೋವಿಡ್ 19 ಪರೀಕ್ಷಾ ವರದಿಯನ್ನು ಜಿಲ್ಲಾ ಆರೋಗ್ಯಾಧಿಕಾರಿಕಚೇರಿಗೆ ನೀಡಿರಲಿಲ್ಲ. ಈ ಬಗ್ಗೆ ಮಾರ್ಚ್‌ 2ರಂದು ‘ಪ್ರಜಾವಾಣಿ’ ವರದಿ ಪ್ರಕಟಿಸಿತ್ತು.

‘ಕೇರಳದಲ್ಲಿ ಎರಡನೇ ಅಲೆ ಕಾಣಿಸಿಕೊಂಡಿದ್ದು, ಸೋಂಕು ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ಯಾರಿಗಾದರೂ ಸೋಂಕು ಇದ್ದರೆ, ತಂಡದ ಇತರ ಸದಸ್ಯರಿಗೂಹರಡುವ ಸಾಧ್ಯತೆ ಇದೆ. ಅಲ್ಲದೇ ಅವರು ಓಡಾಡುವ ಸ್ಥಳ ಹಾಗೂ ಕೆಲಸ ಮಾಡುವ ಜಾಗಗಳಲ್ಲಿಯೂ ಸೋಂಕು ಹರಡುತ್ತದೆ. ಎಲ್ಲರೂ ಆರ್‌ಟಿಪಿಸಿಆರ್‌ ಪರೀಕ್ಷೆಗೆ ಒಳಪಟ್ಟು
ನೆಗೆಟಿವ್‌ ವರದಿ ಬರುವವರೆಗೂ ಕಾಯಬೇಕು’ ಎಂದು ಡಾ.ಸತೀಶ್‌ ಸೂಚಿಸಿದರು.

ADVERTISEMENT

ಇದಕ್ಕೆ ಒಪ್ಪಿದ ಚಿತ್ರತಂಡದ ವ್ಯವಸ್ಥಾಪಕ, ‘ನಮ್ಮ ಕಲಾವಿದರು, ತಂತ್ರಜ್ಞರು ವಾಸ್ತವ್ಯ ಹೂಡಿರುವ ವಸತಿ ಗೃಹಗಳಿಂದಲೇ ಗಂಟಲು ದ್ರವ ಮಾದರಿ ಪಡೆದುಕೊಂಡರೆ ಅನುಕೂಲವಾಗುತ್ತದೆ’ಎಂದು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಡಾ.ಸತೀಶ್, ‘ಎಲ್ಲರಿಂದಲೂ ಗಂಟಲು ದ್ರವ ಮಾದರಿ ಸಂಗ್ರಹಿಸಿ ಹಿಮ್ಸ್‌ ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು. ಚಿತ್ರೀಕರಣ ತಂಡದ ಎಲ್ಲರೂ ಕೋವಿಡ್‌ಹರಡುವಿಕೆ ತಡೆ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಬೇಕು’ ಎಂದುನಿರ್ದೇಶನ ನೀಡಿದರು.

ಜಿಲ್ಲಾ ಆರ್‌ಸಿಎಚ್‌ ಅಧಿಕಾರಿ ಡಾ.ಕಾಂತರಾಜ್‌, ತಾಲ್ಲೂಕು ವೈದ್ಯಾಧಿಕಾರಿ ಡಾ.ವಿಜಯ್‌ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.