ADVERTISEMENT

ನೋಟಿಸ್‌ ಸುಟ್ಟು ಹಾಕಿದ ರೈತರು

ಸಾಲ ಮರುಪಾವತಿಸುವಂತೆ ಬ್ಯಾಂಕ್‌ನಿಂದ ನೋಟಿಸ್‌: ಖಂಡನೆ

​ಪ್ರಜಾವಾಣಿ ವಾರ್ತೆ
Published 17 ಜೂನ್ 2019, 15:45 IST
Last Updated 17 ಜೂನ್ 2019, 15:45 IST
ಹಾಸನದ ಎಪಿಎಂಸಿ ಎದುರು ರೈತ ಸಂಘ ಪ್ರತಿಭಟನೆ ನಡೆಸಿತು.
ಹಾಸನದ ಎಪಿಎಂಸಿ ಎದುರು ರೈತ ಸಂಘ ಪ್ರತಿಭಟನೆ ನಡೆಸಿತು.   

ಹಾಸನ: ಸಾಲ ಮರು ಪಾವತಿಸುವಂತೆ ಬ್ಯಾಂಕ್‌ಗಳು ನೋಟಿಸ್ ನೀಡಿರುವುದನ್ನು ಖಂಡಿಸಿ ಎಪಿಎಂಸಿ ಕಚೇರಿ ಎದುರು ರೈತರು ನೋಟಿಸ್ ಪ್ರತಿಯನ್ನು ಸುಟ್ಟು ಹಾಕಿದರು.

‘ರೈತರ ಬೆಳೆ ಸಾಲ ಮನ್ನಾ ಮಾಡಲಾಗಿದೆ ಎಂದು ಸರ್ಕಾರ ಹೇಳುತ್ತಿದೆ. ಆದರೆ, ಅರಸೀಕೆರೆ ತಾಲ್ಲೂಕಿನಲ್ಲಿ ಕೆನರಾ ಬ್ಯಾಂಕ್‌ ಅಧಿಕಾರಿಗಳು ಕೋರ್ಟ್‌ ಮೂಲಕ ರೈತರಿಗೆ ನೋಟಿಸ್ ಜಾರಿ ಮಾಡಿ, ಹಾಜರಾಗುವಂತೆ ಬೆದರಿಕೆ ಹಾಕುತ್ತಿದ್ದಾರೆ ಸರ್ಕಾರದ ಹೇಳಿಕೆಗೂ, ತಮಗೂ ಸಂಬಂಧವೇ ಇಲ್ಲದಂತೆ ಬ್ಯಾಂಕ್‌ ಅಧಿಕಾರಿಗಳು ವರ್ತಿಸುತ್ತಿದ್ದಾರೆ’ ಎಂದು ಪ್ರತಿಭಟನಾಕಾರು ಆಕ್ರೋಶ ವ್ಯಕ್ತಪಡಿಸಿದರು.

‘ಕೋರ್ಟ್‌ಗೂ ರೈತರು ಪಡೆದ ಸಾಲಕ್ಕೂ ಯಾವ ಸಂಬಂಧ ಇರುವುದಿಲ್ಲ. ಹಾಗಾಗಿ ನ್ಯಾಯಾಲಯಕ್ಕೆ ಹಾಜರಾಗುವ ಪ್ರಶ್ನೆಯೇ ಇಲ್ಲ. ಸರ್ಕಾರ ನುಡಿದಂತೆ ನಡೆದುಕೊಳ್ಳಬೇಕು. ಸಾಲಮನ್ನಾ ಆದೇಶ ತಕ್ಷಣ ಜಾರಿಗೆ ತರಬೇಕು. ಬ್ಯಾಂಕ್‌ಗಳಿಗೆ ಸರಿಯಾದ ಸೂಚನೆ ನೀಡಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಸಾಲಬಾಧೆ ತಾಳಲಾರದೇ ರೈತ ಬಸವೇಗೌಡ ಆತ್ಮಹತ್ಯೆ ಮಾಡಿಕೊಂಡು 8 ತಿಂಗಳಾದರೂ ಸರ್ಕಾರದಿಂದ ಪರಿಹಾರ ಬಂದಿಲ್ಲ. ಮೃತನ ಕುಟುಂಬ ಕಡು ಬಡತನದಲ್ಲಿದ್ದು, ಜೀವನ ಸಾಗಿಸುವುದು ಕಷ್ಟಕವಾಗಿದೆ. ಸಾಲದ ದಾಖಲೆ ನೀಡಿದರೂ ಪರಿಹಾರ ಕೊಡದೇ ಜಿಲ್ಲಾಡಳಿತ ಸತಾಯಿಸುತ್ತಿದೆ’ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಕೊಟ್ಟೂರು ಶ್ರೀನಿವಾಸ್‌ ದೂರಿದರು.

‘ಬೆಲೆ ವಿಮೆ ಸಹ ಹಲವು ರೈತರಿಗೆ ಸಿಕ್ಕಿಲ್ಲ. ರೈತರ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿದ್ದು, ಕೂಡಲೇ ಸರ್ಕಾರ ಎಚ್ಚೆತ್ತುಕೊಂಡು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತೆ’ ಮನವಿ ಮಾಡಿದರು.

ಇದಕ್ಕೂ ಮುನ್ನ ನಡೆದ ಸಭೆಯಲ್ಲಿ, ರೈತರ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು. ಬೇಡಿಕೆ ಈಡೇರದಿದ್ದರೆ ಪ್ರತಿಭಟನೆ ನಡೆಸುವ ನಿರ್ಧಾರ ಕೈಗೊಳ್ಳಲಾಯಿತು.

ರೈತ ಮುಖಂಡರಾದ ಬಳ್ಳೂರ್ ಸ್ವಾಮೀಗೌಡ, ಶ್ರೀಕಂಠ ದೊಡ್ಡೇರಿ, ಮಲ್ಲೇಶ್, ಯೋಗಣ್ಣ, ಹೊಳೆನರಸೀಪುರದ ರುದ್ರೇಗೌಡ, ಚನ್ನರಾಯಪಟ್ಟಣದ ಸುರೇಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.