ಹಾಸನ: ಇಲ್ಲಿನ ಕಂದಲಿ ಕೃಷಿ ವಿಜ್ಞಾನ ಕೇಂದ್ರ ವತಿಯಿಂದ ಯಗಚಿ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ಪೌಷ್ಟಿಕ ಸಪ್ತಾಹ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ಶಿವಶಂಕರ ಎಂ. ಮಾತನಾಡಿ, ಸಪ್ತಾಹದ ಇತಿಹಾಸ ಹಾಗೂ ಮಹತ್ವದ ಬಗ್ಗೆ ತಿಳಿಸಿ, ಪೋಷಕಾಂಶಗಳು ಪ್ರತಿಯೊಬ್ಬರ ಆರೋಗ್ಯಕ್ಕೆ ಬಹಳ ಮುಖ್ಯ. ಅದಕ್ಕೆ ಅನುಗುಣವಾಗಿ, ಧಾನ್ಯ, ಬೇಳೆ ಕಾಳುಗಳು, ಸೊಪ್ಪು, ತರಕಾರಿ, ಗೆಡ್ಡೆ ಗೆಣಸು, ಹಣ್ಣು ಹಾಗೂ ಹಾಲು ಸಮತೋಲನವಾಗಿ ಸೇವಿಸಿದರೆ, ದೇಹಕ್ಕೆ ಬೇಕಾದ ಪೋಷಕಾಂಶ ದೊರೆಯುತ್ತವೆ ಎಂದರು.
ಮಕ್ಕಳು ಮತ್ತು ಮಹಿಳೆಯರಲ್ಲಿ ಅಪೌಷ್ಟಿಕತೆ ಹೆಚ್ಚಿದ್ದು, ಹಣ್ಣು ಮತ್ತು ತರಕಾರಿ ಸೇವಿಸಿದರೆ ಅಪೌಷ್ಟಿಕತೆಯನ್ನು ಕಡಿಮೆ ಮಾಡಬಹುದು ಎಂದ ಅವರು, ಪ್ರತಿ ವರ್ಷ ಸೆಪ್ಟೆಂಬರ್ ಮೊದಲನೇ ವಾರ ರಾಷ್ಟ್ರೀಯ ಪೌಷ್ಟಿಕ ಸಪ್ತಾಹ ಜಾಗೃತಿ ಕಾರ್ಯಕ್ರಮಗಳನ್ನು ಶಾಲೆಗಳಲ್ಲಿ, ಅಂಗನವಾಡಿ ಕೇಂದ್ರ ಹಾಗೂ ಮಹಿಳಾ ಸಂಘಗಳ ಜೊತೆ ಆಯೋಜಿಸಿ ಪೋಷಕಾಂಶಗಳ ಅರಿವು, ಆಹಾರ ಮತ್ತು ಆರೋಗ್ಯದ ಬಗ್ಗೆ ಮಾಹಿತಿ ಕೊಡಲಾಗುತ್ತಿದೆ ಎಂದು ತಿಳಿಸಿದರು.
ತೋಟಗಾರಿಕೆ ವಿಜ್ಞಾನಿ ಡಾ. ಪಲ್ಲವಿ ಎನ್. ಮಾತನಾಡಿ, ನಿತ್ಯದ ಆಹಾರದಲ್ಲಿ ಹಣ್ಣು ಮತ್ತು ತರಕಾರಿಗಳ ಪಾತ್ರ ಹೆಚ್ಚಿದ್ದು, ಇವುಗಳಲ್ಲಿ ಜೀವಸತ್ವಗಳು ಮತ್ತು ಖನಿಜ ಲವಣಗಳು ಮಹತ್ತರವಾಗಿವೆ. ದೇಹದ ಪೋಷಣೆಯಲ್ಲಿ ಬಹು ಮುಖ್ಯ ಪಾತ್ರವನ್ನು ವಹಿಸುತ್ತದೆ ಎಂದು ತಿಳಿಸಿದರು.
ಮನೆಯ ಅಂಗಳದಲ್ಲಿ ಪೌಷ್ಟಿಕ ಕೈ ತೋಟ ನಿರ್ಮಿಸಿಕೊಂಡು, ಯಾವುದೇ ಕೀಟನಾಶಕ ಮತ್ತು ರಾಸಾಯನಿಕ ಗೊಬ್ಬರ ಬಳಸದೇ ಬೆಳೆಯುವ ತರಕಾರಿಯನ್ನು ಹೆಚ್ಚಾಗಿ ಸೇವಿಸುವುದರಿಂದ ನಮ್ಮ ದೇಹಕ್ಕೆ ಅಧಿಕ ಪೋಷಕಾಂಶಗಳು ದೊರೆಯುತ್ತವೆ. ಆರೋಗ್ಯ ವೃದ್ದಿಸುತ್ತದೆ ಎಂದು ತಿಳಿಸಿದರು.
ಯಗಚಿ ಶಾಲೆಯ ಮುಖ್ಯ ಶಿಕ್ಷಕ ಜಯಕೃಷ್ಣ, ಸಹೋದ್ಯೋಗಿಗಳು, ಶಾಲೆಯ ಮಕ್ಕಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.