ADVERTISEMENT

ಒಂದು ತಿಂಗಳು ಲಾಕ್‌ಡೌನ್‌ ಅಗತ್ಯ

ಪ್ರತಿ ತಾಲ್ಲೂಕಿನಲ್ಲಿ ನಿತ್ಯ ಐದು ಸಾವಿರ ಆರ್‌ಟಿ–ಪಿಸಿಆರ್‌ ಪರೀಕ್ಷೆ ನಡೆಸಿ: ರೇವಣ್ಣ

​ಪ್ರಜಾವಾಣಿ ವಾರ್ತೆ
Published 19 ಮೇ 2021, 14:00 IST
Last Updated 19 ಮೇ 2021, 14:00 IST
ಎಚ್‌.ಡಿ. ರೇವಣ್ಣ
ಎಚ್‌.ಡಿ. ರೇವಣ್ಣ   

ಹಾಸನ: ರಾಜ್ಯದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬಂದಿಲ್ಲ. ಆದ್ದರಿಂದ ಒಂದು ತಿಂಗಳು ಸಂಪೂರ್ಣ ಲಾಕ್‌ಡೌನ್‌ ಮಾಡಬೇಕು ಎಂದು ಶಾಸಕ ಎಚ್‌.ಡಿ. ರೇವಣ್ಣ ಸಲಹೆ ನೀಡಿದರು.

‘ಲಾಕ್‌ಡೌನ್‌ ಮಾಡುವ ಮುನ್ನ ಕೂಲಿ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಬೀದಿಬದಿ ವರ್ತಕರು, ಆಟೊ, ಕ್ಯಾಬ್‌ ಚಾಲಕರು, ಬಡವರಿಗೆ ಪಡಿತರ ವಿತರಿಸಬೇಕು ಹಾಗೂ ತಿಂಗಳಿಗೆ ₹5 ಸಾವಿರ ಸಹಾಯಧನ ನೀಡಬೇಕು. ಎರಡು ವರ್ಷಗಳಿಂದ ಸಚಿವರು ಲೂಟಿ ಮಾಡಿರುವಹಣದಲ್ಲಿ ಶೇಕಡಾ 10 ರಷ್ಟು ಸಂಕಷ್ಟದಲ್ಲಿರುವವರಿಗೆ ವಿನಿಯೋಗಿಸಲಿ’ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಜನರು, ರಾಜಕೀಯ ಪಕ್ಷಗಳ ಒತ್ತಾಯಕ್ಕೆ ಮಣಿದು ರಾಜ್ಯ ಸರ್ಕಾರ 1,250 ಕೋಟಿ ಆರ್ಥಿಕ ಪ್ಯಾಕೇಜ್‌ ಘೋಷಣೆ ಮಾಡಿದೆ. ಇದು ತಾತ್ಕಾಲಿಕ ನೆರವು. ಆಟೊ, ಟ್ಯಾಕ್ಸಿ,ಮ್ಯಾಕ್ಸಿಕ್ಯಾಬ್‌ ಚಾಲಕರು, ಕಟ್ಟಡ ಕಾರ್ಮಿಕರು, ಬೀದಿ ವ್ಯಾಪಾರಿಗಳಿಗೆ ₹10 ಸಾವಿರ ಹಾಗೂ ಪ್ರತಿ ರೈತರಿಗೆ ತಿಂಗಳಿಗೆ ಕನಿಷ್ಠ ₹ 5 ಸಾವಿರ ಪ್ಯಾಕೇಜ್‌ ನೀಡಬೇಕಿತ್ತು. ಮಾಧ್ಯಮದವರನ್ನು ಪ್ಯಾಕೇಜ್‌ನಿಂದ ಕೈ ಬಿಟ್ಟಿರುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.

ADVERTISEMENT

ರಾಜ್ಯದ 17 ಜಿಲ್ಲೆಗಳ ಜಿಲ್ಲಾಧಿಕಾರಿ ಜೊತೆಗೆ ಮಂಗಳವಾರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಂವಾದ ನಡೆಸಿದ್ದಾರೆ. ಆದರೆ ಯಾವೊಬ್ಬ ಜಿಲ್ಲಾಧಿಕಾರಿಗೂ ಮಾತನಾಡಲು ಅವಕಾಶನೀಡಿಲ್ಲ. ಬದಲಿಗೆ ಬಿಬಿಎಂಪಿ ಆಯುಕ್ತ ಗೌರವ್ ಗುಪ್ತ ಅವರ ಜೊತೆ ಮಾತ್ರ ಮಾತನಾಡಿದ್ದಾರೆ. ಇದರಿಂದ ಜಿಲ್ಲೆಗಳ ಸ್ಥಿತಿಗತಿ ಹೇಗೆ ತಿಳಿಯಲಿದೆ? ಹೆಚ್ಚು ಪ್ರಕರಣಗಳಿರುವ ಜಿಲ್ಲೆಗಳ ಡಿ.ಸಿಗೆ ಮಾತನಾಡಲು ಅವಕಾಶ ನೀಡಬೇಕಿತ್ತು ಎಂದು ಹೇಳಿದರು.

ಜಿಲ್ಲೆಯಲ್ಲಿ ನಾಲ್ಕು ದಿನ ಸಂಪೂರ್ಣ ಲಾಕ್‌ಡೌನ್ ಮಾಡುವುದು ಒಂದು ವಾರ ತಡವಾದ ಕಾರಣ ಪಾಸಿಟಿವಿಟಿ ದರ ಶೇಕಡಾ 44.68 ರಷ್ಟಿದೆ. ಜಿಲ್ಲೆಯಲ್ಲಿ 18 ವರ್ಷ ಮೇಲ್ಪಟ್ಟ18 ಲಕ್ಷ ಜನರಿದ್ದಾರೆ. 18 ವರ್ಷದೊಳಗೆ 5 ಲಕ್ಷ ಜನರಿದ್ದಾರೆ. ಜಿಲ್ಲೆಯಲ್ಲಿ ಒಂದುವರ್ಷದಿಂದ 7,56,714 ಮಂದಿಗೆ ಮಾತ್ರ ಕೊರೊನಾ ಪರೀಕ್ಷೆ ಮಾಡಲಾಗಿದೆ. ಕಳೆದ15 ದಿನದಲ್ಲಿ 250 ಮಂದಿ ಕೋವಿಡ್‌ನಿಂದ ಮೃತರಾಗಿದ್ದಾರೆ. ಕೊರೊನಾ ಸೋಂಕು ಪಸರಿಸುವುದನ್ನು ನಿಯಂತ್ರಿಸುವ ಉದ್ದೇಶದಿಂದ ಪ್ರತಿ ತಾಲ್ಲೂಕಿನಲ್ಲಿ ನಿತ್ಯ ಕಡ್ಡಾಯವಾಗಿ 5ಸಾವಿರ ಜನರಿಗೆ ಆರ್‌ಟಿ–ಪಿಸಿಆರ್‌ ಪರೀಕ್ಷೆ ಮಾಡಬೇಕು ಎಂದು ಒತ್ತಾಯಿಸಿದರು.

ಉಸ್ತುವಾರಿ ಸಚಿವರು ಜಿಲ್ಲೆಗೆ ಅತಿಥಿಗಳಂತೆ ಆಗಾಗ್ಗೆ ಬಂದು ಹೋಗುತ್ತಾರೆ. ಆರೋಗ್ಯ ಸಚಿವ ಕೆ.ಸುಧಾಕರ್‌ ಜಿಲ್ಲೆಗೆ ಭೇಟಿ ನೀಡಿದ ವೇಳೆ 50 ವೆಂಟಿಲೇಟರ್‌ ಒದಗಿಸುವುದಾಗಿ ಹೇಳಿದ್ದರು.ಆದರೆ ಇನ್ನೂ ಬಂದಿಲ್ಲ. ವೆಂಟಿಲೇಟರ‍್ ಖರೀದಿಗೂ ಯಾವ ಸಂಸ್ಥೆ ಕಮಿಷನ್‌ ಕೊಡುತ್ತದೆಎಂದು ನೋಡುತ್ತಿದ್ದಾರೆ ಎಂದು ಆರೋಪಿಸಿದರು.

ನಿತ್ಯ 20 ಮಂದಿ ಕೊರೊನಾ ಸೋಂಕಿತರು ಮೃತರಾಗುತ್ತಿದ್ದಾರೆ. ಅದರಲ್ಲಿ ಶೇಕಡಾ ಅರ್ಧದಷ್ಟು ಮಂದಿ ಆಮ್ಲಜನಕ ಕೊರತೆಯಿಂದಲೇ ಸಾವಿಗೀಡಾಗುತ್ತಿದ್ದಾರೆ. ಜಿಲ್ಲೆಗೆ ನಿತ್ಯ 1,300 ಸಿಲಿಂಡರ್‌ ಆಮ್ಲಜನಕ ಅಗತ್ಯ ಇದೆ. ಆದರೆ 500 ರಿಂದ 600ಸಿಲಿಂಡರ್‌ ಪೂರೈಕೆ ಆಗುತ್ತಿದೆ ಎಂದರು.

ರಾಜ್ಯ ಸರ್ಕಾರ ದ್ವೇಶದ ರಾಜಕಾರಣ ಮಾಡುತ್ತಿದೆ. ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಮಂಜೂರಾಗಿದ್ದ ಕಾಮಗಾರಿಗಳನ್ನು ತಡೆ ಹಿಡಿಯಲಾಗಿದೆ. ಜಿಲ್ಲೆಯಲ್ಲಿ 6ಮಂದಿ ಜೆಡಿಎಸ್‌ ಶಾಸಕರು, ಒಬ್ಬ ಸಂಸದ ಇದ್ದಾರೆ ಎಂಬ ಕಾರಣಕ್ಕೆ ಕೋವಿಡ್‌ ಸಂದರ್ಭದಲ್ಲಿಯೂ ಜಿಲ್ಲೆಯನ್ನು ನಿರ್ಲಕ್ಷ್ಯ ಮಾಡಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.