ADVERTISEMENT

ಹಾಸನ: 14 ಟಿಎಂಸಿ ನೀರಷ್ಟೇ ವರ್ಷಕ್ಕೆ ಆಸರೆ

ನಾಳೆಯಿಂದ ಹೇಮಾವತಿ ಜಲಾಶಯದ ಹೊರಹರಿವು ಸ್ಥಗಿತ: ಹರಿದ 16 ಟಿಎಂಸಿ ನೀರು ಖಾಲಿ

ಪ್ರಜಾವಾಣಿ ವಿಶೇಷ
Published 13 ಸೆಪ್ಟೆಂಬರ್ 2023, 5:39 IST
Last Updated 13 ಸೆಪ್ಟೆಂಬರ್ 2023, 5:39 IST
ಹೇಮಾವತಿ ನಾಲೆಯಲ್ಲಿ ಹರಿಯುತ್ತಿರುವ ನೀರು.
ಹೇಮಾವತಿ ನಾಲೆಯಲ್ಲಿ ಹರಿಯುತ್ತಿರುವ ನೀರು.   

ವರದಿ: ಸಂತೋಷ್‌ ಸಿ.ಬಿ.

ಹಾಸನ: ಜಿಲ್ಲೆಯ ಜೀವನಾಡಿ ಎನಿಸಿರುವ ಹೇಮಾವತಿ ಜಲಾಶಯ ಈ ಬಾರಿ ಭರ್ತಿಯಾಗಲೇ ಇಲ್ಲ. ಮಳೆಯ ಕೊರತೆಯಿಂದ ಒಳಹರಿವು ನಿರಂತರವಾಗಿ ಕಡಿಮೆ ಆಗುತ್ತಲೇ ಇದ್ದು, ಹೊರಹರಿವು ಮಾತ್ರ ನಿತ್ಯವೂ ಹೆಚ್ಚುತ್ತಿದೆ. ಇದರಿಂದಾಗಿ ಹೇಮಾವತಿ ಜಲಾಶಯದಲ್ಲಿ ನೀರಿನ ಸಂಗ್ರಹ ಅರ್ಧಕ್ಕೆ ಇಳಿದಿದೆ.

ಜಿಲ್ಲೆಯಲ್ಲಿ ಈ ಬಾರಿ ಮುಂಗಾರು ವೈಫಲ್ಯದಿಂದ ಕೃಷಿ ಭೂಮಿಗಳು ಒಣಗುತ್ತಿದ್ದು, ಇದೇ ರೀತಿ ಮುಂದುವರಿದರೆ ರೈತರು ಮತ್ತಷ್ಟು ಸಂಕಷ್ಟಕ್ಕೆ ಈಡಾಗಲಿದ್ದಾರೆ. ಒಂದೆಡೆ ಕೃಷಿಗೆ ನೀರು ಸಿಗುತ್ತಿಲ್ಲ. ಕುಡಿಯುವ ನೀರಿಗೂ ಪರದಾಡುವ ಸ್ಥಿತಿ ನಿರ್ಮಾಣ ಆಗಲಿದೆಯೇ ಎನ್ನುವ ಆತಂಕ ಜನರನ್ನು ಕಾಡುತ್ತಿದೆ.

ADVERTISEMENT

ಮಳೆಯ ಕೊರತೆಯಿಂದಾಗಿ ಕೆರೆಗಳೂ ಭರ್ತಿಯಾಗಿಲ್ಲ. ಇನ್ನೊಂದೆಡೆ ಅಂತರ್ಜಲ ಕಡಿಮೆ ಆಗುತ್ತಿದ್ದು, ಕೊಳವೆಬಾವಿಗಳಲ್ಲೂ ನೀರಿನ ಪ್ರಮಾಣ ಕಡಿಮೆಯಾಗಿದೆ. ಇದನ್ನು ಗಮನಿಸಿದ ಸರ್ಕಾರ, ಜನ–ಜಾನುವಾರುಗಳ ಕುಡಿಯುವ ನೀರಿಗಾಗಿ ಕೆರೆಗಳನ್ನು ತುಂಬಿಸಲು ಹೇಮಾವತಿ ನಾಲೆಗೆ ನೀರು ಹರಿಸಲು ನಿರ್ಧಾರ ಕೈಗೊಂಡಿತ್ತು. ಅದರಂತೆ ನಿತ್ಯ 6 ಸಾವಿರ ಕ್ಯುಸೆಕ್‌ ನೀರನ್ನು ನಾಲೆ ಹಾಗೂ ನದಿಯ ಮೂಲಕ ಹರಿಸಲಾಗುತ್ತಿದೆ.

ಜಿಲ್ಲೆಯ ಬಹುತೇಕ ಪಟ್ಟಣಗಳಿಗೆ ಹೇಮಾವತಿ ಜಲಾಶಯದಿಂದಲೇ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಆದರೆ, 37 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯದ ಹೇಮಾವತಿ ಜಲಾಶಯದಲ್ಲಿ ಸದ್ಯ 19 ಟಿಎಂಸಿ ನೀರು ಸಂಗ್ರಹವಿದ್ದು, 15 ಟಿಎಂಸಿ ಮಾತ್ರ ಬಳಕೆಗೆ ಲಭ್ಯವಾಗಿದೆ. ಅರ್ಧದಷ್ಟು ನೀರಿನಲ್ಲಿ ಮುಂದಿನ ಮುಂಗಾರಿನವರೆಗೂ ಪರಿಸ್ಥಿತಿಯನ್ನು ನಿಭಾಯಿಸುವುದು ಅನಿವಾರ್ಯವಾಗಿದೆ.

ಆಗಸ್ಟ್‌ 9 ರಿಂದ ಹೇಮಾವತಿ ಜಲಾಶಯದಿಂದ ನಾಲೆಗಳಿಗೆ ನೀರು ಹರಿಸಲಾಗುತ್ತಿದೆ. ಆಗಸ್ಟ್‌ 9 ರಂದು 2916.15 ಅಡಿ ಇದ್ದ ಜಲಾಶಯದ ನೀರಿನ ಮಟ್ಟ, ಸೆ.12 ರಂದು 2899.60 ಅಡಿಗೆ ಬಂದು ನಿಂತಿದೆ. ಇದುವರೆಗೆ ಒಟ್ಟಾರೆ 16.55 ಅಡಿಯಷ್ಟು ನೀರನ್ನು ನದಿ ಹಾಗೂ ನಾಲೆಗಳಿಗೆ ಹರಿಸಲಾಗಿದೆ.

ಜಿಲ್ಲೆಯಲ್ಲಿ ಇದುವರೆಗೆ ಶೇ 28 ರಷ್ಟು ಮಳೆ ಕೊರತೆ ಉಂಟಾಗಿದೆ. ಆಗಸ್ಟ್‌ನಲ್ಲಿ ಶೇ 75, ಜೂನ್ ಹಾಗೂ ಜುಲೈನಲ್ಲಿ ಶೇ 64 ರಷ್ಟು ಮಳೆ ಕೊರತೆ ಉಂಟಾಗಿದೆ. ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ಮಳೆ ಕ್ಷೀಣಿಸಿದ್ದು, ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಾತ್ರ ಅಷ್ಟಿಷ್ಟು ಮಳೆಯಾಗಿದೆ.

ಕುಡಿಯುವ ನೀರಿಗೆ ಕೊರತೆ ಇಲ್ಲ: ಸದ್ಯ ಜಯಲಾಶಯದಲ್ಲಿರುವ ನೀರಿನ ಸಂಗ್ರಹ ಮುಂದಿನ ಬೇಸಿಗೆವರೆಗೂ ಜನ ಜಾನುವಾರುಗಳಿಗೆ ಕುಡಿಯಲು ಸಾಕಾಗಲಿದ್ದು, ಈಗಾಗಲೇ ಜಲಾಶಯದಿಂದ ಜಿಲ್ಲೆಯ ಬಹುತೇಕ ಕೆರೆಕಟ್ಟೆಗಳಿಗೆ ನೀರು ಹರಿಸಿ ಭರ್ತಿ ಮಾಡಲಾಗಿದೆ.

ಸೆಪ್ಟೆಂಬರ್ 14 ರಿಂದ ಜಲಾಶಯದಿಂದ ನೀರು ಬಿಡುವುದನ್ನು ಸ್ಥಗಿತಗೊಳಿಸಲಾಗುತ್ತಿದೆ. ಇನ್ನುಳಿದ 14 ಟಿಎಂಸಿ ನೀರನ್ನು ಸಂಗ್ರಹಿಸಿ ಇಡಲಾಗುತ್ತಿದ್ದು, ಮುಂದಿನ ಬೇಸಿಗೆವರೆಗೂ ಕುಡಿಯುವುದಕ್ಕೆ ಸಾಕಾಗಲಿದೆ ಎಂದು ಜಲಾಶಯದ ಅಧಿಕಾರಿಗಳು ತಿಳಿಸಿದ್ದಾರೆ.

ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನಲ್ಲಿ ನಾಲೆಗೆ ನೀರು ಹರಿಸಿರುವುದು.

ಆ.9 ರಿಂದ ಜಲಾಶಯದ ನೀರನ್ನು ನಾಲೆ ನದಿಗೆ ಬಿಟ್ಟು ಕೆರೆಕಟ್ಟೆಗಳನ್ನು ತುಂಬಲಾಗಿದೆ. ಇನ್ನುಳಿದ ನೀರನ್ನು ಕುಡಿಯುವ ಉದ್ದೇಶಕ್ಕೆ ಮಾತ್ರ
ಬಳಸಲಾಗುವುದು.

-ಅರುಣ್ ಎಂಜಿನಿಯರ್

ಹೇಮಾವತಿ ಜಲಾಶಯ

ಜಲಾಶಯದಿಂದ 20 ಟಿಎಂಸಿ ನೀರನ್ನು ಬೇಕಾಬಿಟ್ಟಿ ಬಿಡಲಾಗಿದೆ. ಹೊಳೆನರಸೀಪುರಕ್ಕೆ ನೀರಿಲ್ಲ. ಕಟ್ಟಾಯ ಶಾಂತಿಗ್ರಾಮ ಭಾಗದ ಕೆರೆಗಳಿಗೆ ನೀರು ಹರಿಸಿಲ್ಲ. ಇದರಲ್ಲೂ ರಾಜಕೀಯ ಮಾಡಲಾಗುತ್ತಿದೆ.

-ಎಚ್.ಡಿ. ರೇವಣ್ಣ ಶಾಸಕ

ಹೇಮೆಯ ನೀರು ತಮಿಳುನಾಡಿಗೆ: ರೈತ ಮುಖಂಡರ ಆರೋಪ

‘ತಮಿಳುನಾಡಿಗೆ ನೀರು ಹರಿಸಲು ಹೇಮಾವತಿ ಯಗಚಿ ವಾಟೆಹೊಳೆ ಅಣೆಕಟ್ಟೆಯಿಂದ ಕೆಆರ್‌ಎಸ್‌ಗೆ ನೀರು ಹರಿಸಲಾಗಿದ್ದು ಇದರಿಂದ ಹಾಸನ ಜಿಲ್ಲೆಯ ರೈತರ ಕೃಷಿ ಚಟುವಟಿಕೆ ಕುಡಿಯುವ ನೀರಿಗೂ ಬರ ಎದುರಾಗುವ ಸಾಧ್ಯತೆ ಹೆಚ್ಚಿದೆ’ ಎಂದು ರೈತ ಮುಖಂಡರು ದೂರುತ್ತಿದ್ದಾರೆ. ‘ರಾಜ್ಯ ಸರ್ಕಾರದ ಇಂತಹ ನೀತಿಗಳಿಂದ ರಾಜ್ಯದ ಜನರು ಹಾಗೂ ರೈತರು ಪರಿತಪಿಸುವಂತಾಗಿದೆ. ಈಗಾಗಲೇ ಮಳೆ ಬೀಳುವ ಸಾಧ್ಯತೆಗಳು ತೀರಾ ಕ್ಷೀಣವಾಗಿದ್ದು ಮುಂದಿನ ಮುಂಗಾರಿಗೆ 8 ರಿಂದ 9 ತಿಂಗಳು ಬಾಕಿ ಇದೆ. ಹೀಗಿರುವಾಗ ತಮಿಳುನಾಡಿಗೆ ನೀರು ಹರಿಸಿರುವುದು ಸರಿಯಲ್ಲ’ ಎಂದು ಭಾರತೀಯ ಕಿಸಾನ್ ಸಂಘದ ಕರ್ನಾಟಕ ಪ್ರದೇಶ ದಕ್ಷಿಣ ಪ್ರಾಂತದ ಪ್ರಧಾನ ಕಾರ್ಯದರ್ಶಿ ಹಾಡ್ಯ ರಮೇಶ್ ರಾಜು ಹೇಳಿದ್ದಾರೆ.

ಸೆ.12 ರಂದು ಜಲಾಶಯದ ನೀರಿನ ಸ್ಥಿತಿ

ಗರಿಷ್ಠ ಮಟ್ಟ; 2922 ಅಡಿ ಇಂದಿನ ಮಟ್ಟ; 2899.60 ಅಡಿ ಸಂಗ್ರಹ ಸಾಮರ್ಥ್ಯ; 37.103 ಟಿಎಂಸಿ ಸದ್ಯದ ಸಂಗ್ರಹ; 19.457 ಟಿಎಂಸಿ ಬಳಕೆಗೆ ಲಭ್ಯ ನೀರು; 15.086 ಟಿಎಂಸಿ ಒಳಹರಿವು; 1061 ಕ್ಯುಸೆಕ್‌ ಹೊರಹರಿವು; 6090 ಕ್ಯುಸೆಕ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.