ಬೇಲೂರು: ತಾಲ್ಲೂಕಿನ ಕಾನನಹಳ್ಳಿಯಲ್ಲಿ ಕಾಡಾನೆ ವಿಕ್ರಾಂತ್‌ನನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ನಡೆಸುತ್ತಿರುವ ಕಾರ್ಯಾಚರಣೆ ಎರಡು ದಿನಗಳಿಂದ ವಿಫಲವಾಗುತ್ತಿದೆ.
ಮಂಗಳವಾರ ಕಾರ್ಯಾಚರಣೆ ವಿಫಲವಾಗಿದ್ದರಿಂದ ಬುಧವಾರ ಏಳು ಸಾಕಾನೆಗಳನ್ನು ಬಳಸಿ, ಸೆರೆ ಹಿಡಿಯಲು ಸತತ ಆರು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಲಾಯಿತು. ವಿಕ್ರಾಂತ್ ಆನೆ ಪತ್ತೆಗೆ ಥರ್ಮಲ್ ಡ್ರೋನ್ ಬಳಸಲಾಯಿತು. ವಿಕ್ರಾಂತ್‌ನನ್ನು ಬೇರ್ಪಡಿಸಿದ್ದರೂ ಮೂರು ಆನೆಗಳು ಪುನಃ ಜೊತೆ ಸೇರಿದವು. ನಂತರ ಇನ್ನೊಂದು ದೈತ್ಯ ಆನೆ ಭೀಮ ಅದೇ ಸ್ಥಳದಲ್ಲಿ ಕಾಣಿಸಿಕೊಂಡಿದ್ದರಿಂದ ಕಾರ್ಯಾಚರಣೆಯನ್ನು ಬುಧವಾರವೂ ಸ್ಥಗಿತಗೊಳಿಸಲಾಯಿತು.
ಪುಂಡಾನೆ ವಿಕ್ರಾಂತ್ ಸೆರೆಹಿಡಿಯುವಲ್ಲಿ ಎರಡು ದಿನ ಅರಣ್ಯ ಇಲಾಖೆ ಸಿಬ್ಬಂದಿ ವಿಫಲವಾಗಿದೆ. ಹೀಗಾದರೆ, ಅರಣ್ಯ ಇಲಾಖೆಯವರು ಪುಂಡಾನೆಗಳನ್ನು ನಿಜವಾಗಿಯೂ ಸೆರೆ ಹಿಡಿಯುತ್ತಾರಾ ಎಂದು ಇಲ್ಲಿನ ರೈತರು, ಬೆಳೆಗಾರರು ಪ್ರಶ್ನಿಸುತ್ತಿದ್ದಾರೆ.
‘ಸಾಕಾನೆಗಳ ವಾಸನೆ ಗ್ರಹಿಸಿಯೇ ಆನೆಗಳಿಗೆ ಕಾರ್ಯಾಚರಣೆಯ ಸುಳಿವು ದೊರೆಯುತ್ತದೆ. ಇದೇ ಕಾರಣದಿಂದಲೇ ಭೀಮ ಆನೆ, ವಿಕ್ರಾಂತ್ ಆನೆಯ ಬೆಂಬಲಕ್ಕಾಗಿ ಬಂದಿದ್ದಾನೆ’ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ.
ಅಟ್ಟಾಡಿಸಿದ್ದ ಭೀಮ: ಬುಧವಾರ ಅಸ್ಸಾಂ ಮೂಲದ ಕಾರ್ಮಿಕರು ಕೆಲಸ ಮುಗಿಸಿ ವಾಪಸ್ ತೆರಳುತ್ತಿರುವ ಸಂದರ್ಭದಲ್ಲಿ ಭೀಮ ಆನೆ ಬಂದು ಅಟ್ಟಾಡಿಸಿಕೊಂಡು ಹೋಗಿದ್ದಾನೆ. ಕಾರ್ಮಿಕರು ಜೀವ ಉಳಿಸಿಕೊಳ್ಳಲು ಉಸಿರುಗಟ್ಟಿ ಓಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
24 ವರ್ಷದಲ್ಲಿ 88 ಸಾವು: ಹಾಸನ ಜಿಲ್ಲೆಯಲ್ಲಿ 2001 ರಿಂದ ಇಲ್ಲಿಯವರೆಗೆ ಕಾಡಾನೆ ದಾಳಿಯಿಂದ 88 ಜನ ಮೃತಪಟ್ಟಿದ್ದು, ಬೇಲೂರು ತಾಲ್ಲೂಕಿನ ಎರಡು ತಿಂಗಳ ಅವಧಿಯಲ್ಲಿ ನಾಲ್ವರು ಕಾಡಾನೆ ದಾಳಿಗೆ ಬಲಿಯಾಗಿದ್ದಾರೆ. 2019 ರಿಂದ ಇಲ್ಲಿಯವರೆಗೆ ತಾಲ್ಲೂಕಿನ 9 ಜನ ಕಾಡಾನೆ ದಾಳಿಯಿಂದ ಮೃತರಾಗಿದ್ದಾರೆ.
ಆನೆ ಕಾರ್ಯಪಡೆ ರಚಿಸಿದ್ದರೂ, ಕೆಲವೊಮ್ಮೆ ಆನೆಗಳ ಚಲನವಲನ ಗಮನಿಸಲು ಕಷ್ಟವಾಗುತ್ತಿದೆ. ಇದ್ದರಿಂದ ಹೆಚ್ಚಿನ ಉಪಯೋಗವಾಗುತ್ತಿಲ್ಲ. ಈಚೆಗೆ ಬೇಲೂರಿನಲ್ಲಿ ನಡೆದ ಸಭೆಯಲ್ಲಿ ಅರಣ್ಯ ಸಚಿವರು, ಇಟಿಎಫ್ ತಂಡಕ್ಕೆ ಥರ್ಮಲ್ ಡ್ರೋನ್ ಕ್ಯಾಮೆರಾ ನೀಡಲಾಗುವುದು ಎಂದು ತಿಳಿಸಿದ್ದಾರೆ.
ತಾಲ್ಲೂಕಿನಲ್ಲಿ ಸುಮಾರು 100 ಕಾಡಾನೆಗಳಿದ್ದು, ಜನರು ಆಕ್ರೋಶ ವ್ಯಕ್ತಪಡಿಸಿದ್ದಾಗ ಅರಣ್ಯ ಇಲಾಖೆಯವರು, ಒಂದು ಅಥವಾ ಎರಡು ಆನೆ ಸೆರೆ ಹಿಡಿಯುವುದು ಅಥವಾ ರೆಡಿಯೊ ಕಾಲರ್ ಹಾಕಿ ಜನರ ಕಣ್ಣೊರೆಸುವ ಕೆಲಸ ಮಾಡುತ್ತಿದ್ದಾರೆ ಎಂದು ಜನರು ದೂರುತ್ತಿದ್ದಾರೆ.
ಭೀಮ ಆನೆ ಬಾರದಂತೆ ಕಾರ್ಯಾಚರಣೆ ನಡೆಸಿ ವಿಕ್ರಾಂತ್ ಆನೆಯನ್ನು ಹಿಡಿಯಲು ಪ್ರಯತ್ನಿಸಿದ್ದೆವು. ಆದರೆ ಭೀಮ ಬಂದಿದ್ದರಿಂದ ಸುರಕ್ಷತೆ ದೃಷ್ಟಿಯಿಂದ ಕಾರ್ಯಾಚರಣೆ ಸ್ಥಗಿತ ಮಾಡಲಾಗಿದ್ದು ವಿಕ್ರಾಂತ್‌ನನ್ನು ಸೆರೆಹಿಡಿಯಲಾಗುವುದು.ಏಡುಕೊಂಡಲ ಸಿಸಿಎಫ್
ಆನೆಗಳನ್ನು ಸೆರೆಹಿಡಿಯುವುದು ಕಷ್ಟದ ಕೆಲಸ. ಹಾಸನ ಚಿಕ್ಕಮಗಳೂರು ಕೊಡಗು ಜಿಲ್ಲೆಯ ಅರಣ್ಯ ಅಧಿಕಾರಿಗಳು ಸೇರಿ ಹೆಚ್ಚಿನ ಕಾರ್ಮಿಕರನ್ನು ಬಳಸಿ ಆನೆಗಳನ್ನು ಭದ್ರಾ ಅಭಯಾರಣ್ಯಗೆ ಓಡಿಸುವುದು ಸುಲಭಅದ್ದೂರಿ ಕುಮಾರ್ ಕಾಫಿ ಬೆಳೆಗಾರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ
ಸರ್ಕಾರ ಆನೆಧಾಮ ಮಾಡುತ್ತೇವೆ ಎಂದು ಹೇಳಿ ₹ 20 ಕೋಟಿ ಇಟ್ಟಿದೆ. ಇದರಿಂದ ಸರ್ವೆ ಮಾಡಲೂ ಸಾಧ್ಯವಿಲ್ಲ. ಹೆಚ್ಚಿನ ಹಣ ನೀಡಬೇಕು. ಪರಿಹಾರಧನವನ್ನು ₹50 ಲಕ್ಷಕ್ಕೆ ಹೆಚ್ಚಿಸುವಂತೆ ಮತ್ತೊಮ್ಮೆ ಮನವಿ ಮಾಡುತ್ತೇನೆ.ಎಚ್.ಕೆ.ಸುರೇಶ್ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.