ADVERTISEMENT

ಆಲೂರು: ರೈತರಿಗೆ ಆಸರೆಯಾಗುವ ಬೇಸಿಗೆ ಭತ್ತ

ಮಳೆಗಾಲದ ಭತ್ತಕ್ಕಿಂತ ಅಧಿಕ ಇಳುವರಿ: ಕೆಲವೇ ರೈತರಿಂದ ಭತ್ತದ ನಾಟಿ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2024, 4:23 IST
Last Updated 19 ಫೆಬ್ರುವರಿ 2024, 4:23 IST
ಹೇಮಾವತಿ ನದಿ ಪಾತ್ರದಲ್ಲಿ ಬೇಸಿಗೆ ಭತ್ತ ನಾಟಿ ಮಾಡುತ್ತಿರುವುದು
ಹೇಮಾವತಿ ನದಿ ಪಾತ್ರದಲ್ಲಿ ಬೇಸಿಗೆ ಭತ್ತ ನಾಟಿ ಮಾಡುತ್ತಿರುವುದು   

ಆಲೂರು: ಮಲೆನಾಡು ಭಾಗದಲ್ಲಿ ಮಳೆ ಹಾಗೂ ಬೇಸಿಗೆ ಕಾಲದಲ್ಲಿ ಭತ್ತ ಬೆಳೆಯುತ್ತಾರೆ. ಮಳೆಗಾಲದಲ್ಲಿ 7 ರಿಂದ 9 ತಿಂಗಳು ಕಾಲ ಬೇಕಾಗುತ್ತದೆ. ಆದರೆ ಬೇಸಿಗೆ ಕಾಲದಲ್ಲಿ ಕೇವಲ ಮೂರು ತಿಂಗಳಲ್ಲಿ ನಂಬರ್ ಭತ್ತ (ಕಾರುಭತ್ತ) ಬೆಳೆಯುತ್ತಾರೆ. ಮಳೆಗಾಲದಲ್ಲಿ ಬೆಳೆಯುವ ಹೈನು ಭತ್ತಕ್ಕಿಂತ, ಅಲ್ಪ ಸಮಯದಲ್ಲಿ ಉತ್ತಮ ಇಳುವರಿಯೊಂದಿಗೆ ಭತ್ತ ಬೆಳೆಯಬಹುದು ಎಂದು ಅನುಭವಿ ರೈತರು ಹೇಳುತ್ತಾರೆ.

ಬೇಸಿಗೆ ಭತ್ತ ಬೆಳೆಯಲು ಕೆರೆಗಳಲ್ಲಿ ನೀರು ಸಾಕಷ್ಟು ಇರಬೇಕು. ಭತ್ತದ ಮಡಿ ಮಾಡಿದಂದಿನಿಂದ ಕೊಯ್ಲು ಮಾಡುವವರೆಗೂ ಆಗಾಗ ನೀರು ಹಾಯಿಸುತ್ತಿರಬೇಕು. ಒಂದೆರಡು ದಿನ ಗದ್ದೆಯನ್ನು ಒಣಗಿಸಿ ಪುನಃ ನೀರು ಸಂಗ್ರಹಿಸಬೇಕು. ಆಗ ಬೇಸಿಗೆ ಭತ್ತದ ಇಳುವರಿ ದ್ವಿಗುಣವಾಗಿರುತ್ತದೆ. ನೀರಿನ ಸೌಕರ್ಯ ಇರುವ ರೈತರು ಮಾತ್ರ ಬೇಸಿಗೆ ಭತ್ತ ಬೆಳೆಯುತ್ತಾರೆ.

ಪ್ರತಿಯೊಂದು ಹಳ್ಳಿಗಳಲ್ಲಿ ಕೆರೆಗಳು ಇರುತ್ತವೆ. ಆದರೆ ದೊಡ್ಡ ಕೆರೆಗಳ ಆಶ್ರಯದಲ್ಲಿದ್ದ ಹಳ್ಳ ಗದ್ದೆಗಳಲ್ಲಿ ಮಾತ್ರ ಭತ್ತ ಬೆಳೆಯಲು ಅನುಕೂಲವಾಗುತ್ತದೆ. ಮಕ್ಕಿ ಗದ್ದೆಗಳಲ್ಲಿ ಬೆಳೆಯಲು ನೀರು ಸಾಕಾಗುವುದಿಲ್ಲ. ಮೇ, ಜೂನ್ ವೇಳೆಗೆ ಈ ಭತ್ತ ಕಟಾವಿಗೆ ಬರುತ್ತದೆ.

ADVERTISEMENT

ಇತ್ತೀಚಿನ ವರ್ಷಗಳಲ್ಲಿ ಹವಾಮಾನ ಏರುಪೇರು ಆಗುತ್ತಿರುವುದರಿಂದ ಕೆರೆಗಳಲ್ಲಿ ನೀರು ಸಂಗ್ರಹ ಕಡಿಮೆಯಾಗಿದೆ. ನದಿ, ಹಳ್ಳಗಳ ಪಾತ್ರದಲ್ಲಿ ಹರಿಯುವ ನೀರನ್ನು ಬಳಸಿಕೊಳ್ಳಲಾಗುತ್ತಿದೆ. ನದಿಗಳು ತುಂಬಿ ಹರಿಯುವ ಸಮಯದಲ್ಲಿ ನದಿ ಪಾತ್ರದಲ್ಲಿ ಇರುವ ಭೂಮಿಯಲ್ಲಿ ಕೆನೆ ಮಣ್ಣು ನಿಂತಿರುತ್ತದೆ. ಬೇಸಿಗೆ ಕಾಲದಲ್ಲಿ ನೀರು ಪ್ರಮಾಣ ಕಡಿಮೆಯಾದಾಗ ಆ ಜಾಗದಲ್ಲಿ ಭತ್ತ ಬೆಳೆಯುತ್ತಾರೆ. ಕೆನೆ ಮಣ್ಣು ಗೊಬ್ಬರಕ್ಕಿಂತ ಹೆಚ್ಚು ಪೋಷಕಾಂಶ ಹೊಂದಿರುವುದರಿಂದ ಶೇ 50 ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರ ಬಳಸುತ್ತಾರೆ.

ಒಂದು ಎಕರೆ ಗದ್ದೆಯಲ್ಲಿ ಅಧಿಕ ಖರ್ಚಿನೊಂದಿಗೆ ಮಳೆಗಾಲದಲ್ಲಿ 12-15 ಕ್ವಿಂಟಲ್ ಭತ್ತ ಬೆಳೆಯಬಹುದು. ಬೇಸಿಗೆ ಭತ್ತ ಕೇವಲ 3 ತಿಂಗಳಲ್ಲಿ ಒಂದು ಎಕರೆಯಲ್ಲಿ ಸುಮಾರು 25-30 ಕ್ವಿಂಟಲ್ ಇಳುವರಿ ಸಿಗುತ್ತದೆ. ಈಗ ಭತ್ತಕ್ಕೆ ಕ್ವಿಂಟಲ್ ₹ 3,200 ರಿಂದ ₹ 3,400 ಬೆಲೆ ಇದೆ. ಭತ್ತದ ಹುಲ್ಲಿಗೆ ಅತಿಯಾದ ಬೇಡಿಕೆ ಇದೆ. ಕೃಷಿ ಕಾರ್ಮಿಕರ ಕೊರತೆ ದಿನದಿಂದ ದಿನಕ್ಕೆ ಅಧಿಕವಾಗುತ್ತಿರುವುದರಿಂದ, ಮನೆಯಲ್ಲಿ ಜನರಿದ್ದರೆ ಮಾತ್ರ ಭತ್ತದ ಕೃಷಿ ಮಾಡಬಹುದು. ಆದರೆ ಕಾಡಾನೆಗಳ ಹಾವಳಿಯಿಂದ ಕಷ್ಟಪಟ್ಟು ಬೆಳೆದ ಬೆಳೆ ಕೈಗೆ ಸಿಗುತ್ತದೊ ಇಲ್ಲವೊ ಕಾದು ನೋಡಬೇಕು ಎನ್ನುತ್ತಾರೆ ಜನ್ನಾಪುರದ ಕೃಷಿಕ ಅಜ್ಜೇಗೌಡ.   

ಹೇಮಾವತಿ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆ ಇರುವುದರಿಂದ ಪಂಪ್ ಮೂಲಕ ಗದ್ದೆಗೆ ಬಳಸಿಕೊಳ್ಳಲಾಗುತ್ತಿದೆ.
ಬತ್ತಿರುವ ನದಿಯಲ್ಲಿ ಹರಿಯುತ್ತಿರುವ ಅಲ್ಪ ಪ್ರಮಾಣದ ನೀರು ಬಳಸಿಕೊಂಡು ಹೇಮಾವತಿ ನದಿ ಪಾತ್ರದಲ್ಲಿರುವ ಅಲ್ಪ ಪ್ರಮಾಣದ ರೈತರು ಮಾತ್ರ ಬೇಸಿಗೆ ಭತ್ತ ಬೆಳೆಯುತ್ತಿದ್ದಾರೆ
ಕೆ.ಎಚ್. ರಮೇಶಕುಮಾರ್ ಸಹಾಯಕ ಕೃಷಿ ನಿರ್ದೇಶಕ ಆಲೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.