ಹಾಸನ: ದಿನವೀಡಿ ಪಾಠ ಪ್ರವಚನದಲ್ಲಿ ತಲ್ಲೀರಾಗಿರುತ್ತಿದ್ದ ಮಕ್ಕಳಿಗೆ ಪಾಠದ ಬದಲಿಗೆ ಒಂದು ದಿನದ ಮಟ್ಟಿಗೆ ರೈತರೊಂದಿಗೆ ಗದ್ದೆಯಲ್ಲಿ ಭತ್ತ ನಾಟಿ ಮಾಡುವ ಅವಕಾಶ ಸಿಕ್ಕಿತ್ತು. ಟೈಮ್ಸ್ ಶಾಲೆಯ ಮಕ್ಕಳು ರೈತರೊಂದಿಗೆ ಗದ್ದೆಯಲ್ಲಿ ಭತ್ತ ನಾಟಿ ಮಾಡಿ, ಗದ್ದೆಯಲ್ಲಿ ವಾಲಿಬಾಲ್, ಹಗ್ಗಜಗ್ಗಾಟ ಆಡಿ ಸಂಭ್ರಮಪಟ್ಟರು.
ಇಲ್ಲಿನ ವಿಜಯನಗರ ಬಡಾವಣೆಯ ಟೈಮ್ಸ್ ಅಂತರ ರಾಷ್ಟ್ರೀಯ ಶಾಲೆ ಹಾಗೂ ರೋಟರಿ ಕ್ಲಬ್ ಆಫ್ ಹಾಸನ ರಾಯಲ್, ಟೈಮ್ಸ್ ಇಂಟರ‍್ಯಾಕ್ಟ್ ಕ್ಲಬ್ ವತಿಯಿಂದ ಮಂಗಳವಾರ ರೋಟರಿ ಮತ್ತು ಟೈಮ್ಸ್ ಶಾಲೆಯ ನಡಿಗೆ ಹಳ್ಳಿಯ ಕಡೆಗೆ ಎಂಬ ಕಾರ್ಯಕ್ರಮವನ್ನು ನಗರ ಸಮೀಪದ ಮಣಚನಹಳ್ಳಿ ಗ್ರಾಮದಲ್ಲಿ ಆಯೋಜಿಸಲಾಗಿತ್ತು.
ಶಾಲೆಯ ಸುಮಾರು 500ಕ್ಕೂ ಅಧಿಕ ಮಕ್ಕಳು, ಗ್ರಾಮಸ್ಥರು ನಾಟಿಗೆ ಸಿದ್ದಪಡಿಸಿದ್ದ ಗದ್ದೆಯಲ್ಲಿ ಭತ್ತದ ಸಸಿಗಳನ್ನು ನೆಟ್ಟು, ಗ್ರಾಮೀಣ ಬದುಕಿನ ಅನುಭವ ಪಡೆದರು. ಜೊತೆಗಿದ್ದ ಗ್ರಾಮದ ಹಿರಿಯರು, ಪುಟಾಣಿ ಮಕ್ಕಳಿಗೆ ಸಸಿಗಳನ್ನು ಹೇಗೆ ನಾಟಿ ಮಾಡಬೇಕು ಎಂಬುವುದನ್ನು ತಿಳಿಸಿಕೊಡುತ್ತಿದ್ದರೆ, ಶಾಲಾ ಶಿಕ್ಷಕರು ತಮ್ಮ ಮಕ್ಕಳ ಕೈಚಳಕವನ್ನು ಕಂಡು ಆಶ್ಚರ್ಯ ಪಡುತ್ತಿದ್ದರು.
ಶಾಲಾ ಸಮಸ್ತ್ರದಲ್ಲೇ ಕೆಸರು ಗದ್ದೆಗೆ ಇಳಿದ ಮಕ್ಕಳು, ವಾಲಿಬಾಲ್ ಕ್ರೀಡಾಕೂಟದಲ್ಲಿ ಭಾಗವಹಿಸಿ ಗದ್ದೆಯಲ್ಲಿ ಬಿದ್ದು ಎದ್ದು ಖುಷಿಪಟ್ಟರು. ಶಾಲೆಯ ಹೆಣ್ಣು ಮಕ್ಕಳು ಒಂದು ಕಡೆ ಹಾಗೂ ಶಾಲಾ ಶಿಕ್ಷಕರು ಮತ್ತೊಂದು ಕಡೆ ನಿಂತು ಹಗ್ಗಜಗ್ಗಾಟ ಆಟವಾಡಿದರು. ಕಾರ್ಯಕ್ರಮದಲ್ಲಿ ವಿಶೇಷ ಬ್ಯಾಂಡ್‍ಸೆಟ್ ವಾದ್ಯಗಳ ಶಬ್ದಕ್ಕೆ ಶಾಲಾ ಮಕ್ಕಳು ಗದ್ದೆಯಲ್ಲಿಯೇ ಕುಣಿದು ಕುಪ್ಪಳಿಸಿದರು.
ವೇದಿಕೆ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್‍ನ ವಲಯ 9ರ ಸಹಾಯಕ ಗವರ್ನರ್ ಮಂಜುನಾಥ್ ಹೊಂಬಳೆಯನ್ನು ಇಟ್ಟ ಭತ್ತದ ರಾಶಿಗೆ ಹಾಗೂ ರಾಸುಗಳಿಗೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಹುತೇಕ ಪಟ್ಟಣದ ಮಕ್ಕಳಿಗೆ ರೈತರ ಜೀವನಶೈಲಿ ತಿಳಿದಿಲ್ಲ. ನಮ್ಮ ಮನೆಯ ಮಕ್ಕಳೇ ಭತ್ತ ಯಾವ ಮರದಲ್ಲಿ ಬಿಡುತ್ತದೆ ಎಂದು ಕೇಳುವ ಸ್ಥಿತಿಗೆ ತಲುಪಿದ್ದೇವೆ. ಮಕ್ಕಳನ್ನು ಇನ್ನಾದರು ಮಣ್ಣಿನೊಂದಿಗೆ ಬೆರೆತು ಬದುಕುವುದನ್ನು ಕಲಿಸಬೇಕಾದ ಅವಶ್ಯಕತೆ ಇದೆ ಎಂದು ಹೇಳಿದರು.
ರೋಟರಿ ಕ್ಲಬ್ ವಲಯ 9ರ ವಲಯ ಸೇನಾನಿ ಮಮತಾ ಪಾಟೀಲ್, ರೋಟರಿ ಕ್ಲಬ್ ಆಫ್ ಹಾಸನ ರಾಯಲ್ ಅಧ್ಯಕ್ಷ, ಟೈಮ್ಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಟೈಮ್ಸ್ ಗಂಗಾಧರ್ ಬಿ.ಕೆ. ಮಾತನಾಡಿದರು. ರೋಟರಿ ಇಂಟರ‍್ಯಾಕ್ಟ್ ಜಿಲ್ಲಾ ಸಮಿತಿಯ ವಲಯ ಸಂಚಾಲಕ ಶಿವಕುಮಾರ್, ಟೈಮ್ಸ್ ಶಾಲೆಯ ಮುಖ್ಯ ಶಿಕ್ಷಕಿ ಬ್ಲೆಸ್ಸಿ ಶ್ಯಾಮ್, ಕ್ಲಬ್ ಆಫ್ ಹಾಸನ ರಾಯಲ್ ಕಾರ್ಯದರ್ಶಿ ರವಿ ಕುಮಾರ್ ಪಿ., ಖಜಾಂಚಿ ದಿಲೀಪ್ ಕುಮಾರ್ ಎಚ್.ಕೆ., ಸದಸ್ಯರಾದ ಡಾ. ವಿಕ್ರಂ, ಯೋಗೇಶ್ ಎಸ್., ಸಚ್ಚಿನ್ ಯು.ವಿ., ಸತೀಶ್, ವಿನಯ್, ಡಾ. ಕುನಾಲ್, ಟೈಮ್ಸ್ ಶಾಲೆಯ ಅರ್ಜುನ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.