ADVERTISEMENT

ಠೇವಣಿ ಕಳೆದುಕೊಂಡು ಗಿನ್ನೆಸ್‌ ದಾಖಲೆ ನಿರ್ಮಿಸಿದ ಪಕ್ಷೇತರ ಅಭ್ಯರ್ಥಿ

ಎಲ್ಲಾ ಚುನಾವಣೆಗಳಲ್ಲೂ ಠೇವಣಿ ನಷ್ಟ, 10ನೇ ಚುನಾವಣೆ

​ಪ್ರಜಾವಾಣಿ ವಾರ್ತೆ
Published 2 ಮೇ 2019, 15:41 IST
Last Updated 2 ಮೇ 2019, 15:41 IST
ಮಹೇಶ್‌
ಮಹೇಶ್‌   

ಹಾಸನ: ‘ನಾನು ಈವರೆಗೂ ಸ್ಪರ್ಧಿಸಿರುವ ಎಲ್ಲಾ ಚುನಾವಣೆಗಳಲ್ಲಿ ಠೇವಣಿ ಕಳೆದುಕೊಂಡಿದ್ದೇನೆ. ಗೆಲ್ಲುವುದಿಲ್ಲ ಎಂಬುದು ಗೊತ್ತು. ಆದರೆ, ಅಧಿಕ ಬಾರಿ ನಾಮಪತ್ರ ಸಲ್ಲಿಸಿದೆ ದಾಖಲೆಗಾಗಿ ಹೀಗೆ ಮಾಡುತ್ತಿರುವೆ..’

ಹಾಸನ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಹೊಳೆನರಸೀಪುರದ ಎಂ.ಮಹೇಶ್‌ ಗಿನ್ನೆಸ್‌ ದಾಖಲೆಗಾಗಿ ನಾಮತ್ರ ಸಲ್ಲಿಕೆಯತ್ತ ಗಮನ ಹರಿಸಿದ್ದಾರೆ.

ಈವರೆಗೆ ನಾಲ್ಕು ಲೋಕಸಭೆ ಹಾಗೂ ಐದು ವಿಧಾನಸಭೆ ಚುನಾವಣೆಗಳಿಗೆ ಸ್ಪರ್ಧಿಸಿರುವ ಇವರಿಗೆ 2019ರ ಕದನ 10ನೇಯದ್ದಾಗಿದೆ. 43 ವರ್ಷದ ಮಹೇಶ್‌ ಅವರು ಮೊದಲು ಬಾರಿಗೆ ಸ್ಪರ್ಧಿಸಿದಾಗ ವಯಸ್ಸು 25. 1996ರಿಂದ ಚುನಾವಣೆಗೆ ಧುಮುಕಿರುವ ಮಹೇಶ್‌ಗೆ ಹೊರ ರಾಜ್ಯದ ಪ್ರಮುಖ ಪಕ್ಷಗಳಿಂದಲೂ ‘ಬಿ’ ಫಾರಂ ಆಫರ್‌ ದೊರೆತಿದೆ. ಆದರೆ, ಅದನ್ನು ಅವರು ನಿರಾಕರಿಸಿ, ಪಕ್ಷೇತರ ಅಭ್ಯರ್ಥಿಯಾಗಿಯೇ ಕಣಕ್ಕಿಳಿದಿದ್ದಾರೆ.

ADVERTISEMENT

1996ರಲ್ಲಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ 4580 ಮತ ಪಡೆದು ಪಕ್ಷೇತರರಿಗೆ ಕಠಿಣ ಸವಾಲು ಹಾಕಿದ್ದರು. ರಾಜಕಾರಣಿಗಳಾದ ಎಚ್‌.ಡಿ.ದೇವೇಗೌಡ, ಜಿ.ಪುಟ್ಟಸ್ವಾಮಿಗೌಡ, ಬಿ.ಶಿವರಾಮು, ಎಚ್‌.ಡಿ.ರೇವಣ್ಣ, ವಿಜಯಶಂಕರ್‌, ಎಚ್‌.ಕೆ.ಹನುಮೇಗೌಡ ಸೇರಿದಂತೆ ಪ್ರಮುಖರ ವಿರುದ್ಧ ಅಖಾಡಕ್ಕಳಿದು ಕ್ಷೇತ್ರದಲ್ಲಿ ತಮ್ಮದೇ ವರ್ಚಸ್ಸು ಗಳಿಸಿದ್ದಾರೆ.

1999ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಿಂತ 2865 ಅಧಿಕ ಮತ ಗಳಿಸಿ ದಾಖಲೆ ಬರೆದಿದ್ದಾರೆ.
ಧಾರವಾಡದ ಭಾರತೀಯ ರಾಷ್ಟ್ರೀಯ ಮಹಿಳಾ ಸರ್ವೋದಯ ಕಾಂಗ್ರೆಸ್‌, ಮೈಸೂರಿನ ಇಂಡಿಯನ್‌ ನ್ಯೂ ಕಾಂಗ್ರೆಸ್‌, ಕರುನಾಡ ಪಕ್ಷ, ಅನುಪಮಾ ಶೆಣೈ ನೇತೃತ್ವದ ಭಾರತೀಯ ಕಾಂಗ್ರೆಸ್‌ ಪಕ್ಷ ಸೇರಿ ಅನೇಕ ಪಕ್ಷಗಳ ಮುಖಂಡರುಟಿಕಟ್‌ ನೀಡಲು ಮುಂದಾದರು, ಪಕ್ಷೇತರ ಅಭ್ಯರ್ಥಿಯಾಗಿಯೇ ಕಣಕ್ಕಿಳಿದಿದ್ದಾರೆ. ಚುನಾವಣಾಧಿಕಾರಿಗೆ ಸಲ್ಲಿಸಿರುವ ನಾಮಪತ್ರದಲ್ಲಿ ₹ 86 ಸಾವಿರ ಆಸ್ತಿ ಘೋಷಿಸಿಕೊಂಡಿದ್ದಾರೆ.

ಹಿಂದೆ ಚುನಾವಣೆಯಲ್ಲಿ ಠೇವಣಿಯ ಅಷ್ಟು ಹಣವನ್ನು ನಾಣ್ಯಗಳ ಮೂಲಕ ಸಲ್ಲಿಸಿ ಗಮನ ಸೆಳೆದಿದ್ದರು. ರಾಜ್ಯ ಅಥವಾ ಹೊರ ರಾಜ್ಯದ ಯಾವುದೇ ಭಾಗದಲ್ಲಿ ಚುನಾವಣೆ ನಡೆದರೂ ನಾಮಪತ್ರ ಸಲ್ಲಿಸುತ್ತಾರೆ.

‘ಚುನಾವಣೆಯಲ್ಲಿ ಕರಪತ್ರ ಹಂಚಿಲ್ಲ, ಬ್ಯಾನರ್‌, ಕಟೌಟ್‌ ಹಾಕಿಲ್ಲ. ಖರ್ಚು ಇಲ್ಲದೆ ಚುನಾವಣೆ ಮಾಡಬೇಕೆಂಬುದು ನನ್ನ ಗುರಿ. ಹಲವು ಪಕ್ಷಗಳು ‘ಬಿ’ ಫಾರಂ ನೀಡಲು ಮುಂದೆ ಬಂದರೂ ನಿರಾಕರಿಸಿದೆ. ಪಕ್ಷದ ಚಿಹ್ನೆ ಸಿಗುತ್ತದೆ ಅಷ್ಟೇ. ಆದರೆ, ಮುಖಂಡರು, ಕಾರ್ಯಕರ್ತರು ಪ್ರಚಾರಕ್ಕೆ ಯಾರು ಬರುವುದಿಲ್ಲ. ಅಧಿಕ ಬಾರಿ ನಾಮಪತ್ರ ಸಲ್ಲಿಸಿದವರ ಪಟ್ಟಿಯಲ್ಲಿ ಮೊದಲ ಹೆಸರು ಇರಬೇಕು. ಆ ದಾಖಲೆಗಾಗಿ ಸ್ಪರ್ಧಿಸುತ್ತಿದ್ದೇನೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.