ಬೇಲೂರು: ಇಲ್ಲಿನ ಚನ್ನಕೇಶವ ಸ್ವಾಮಿ ಬ್ರಹ್ಮ ರಥೋತ್ಸವವು ಗುರುವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಸಂಪನ್ನವಾಯಿತು.
ಚನ್ನಕೇಶವಸ್ವಾಮಿ ದೇಗುಲವು ವಾಸ್ತುಶಿಲ್ಪಕ್ಕೆ ಮಾತ್ರ ಸೀಮಿತವಾಗಿರದೇ ಕಲೆ, ಸಂಸ್ಕೃತಿಯ ಪ್ರತಿಬಿಂಬವಾಗಿದೆ. ಸಾಕಷ್ಟು ಜನರ ಶ್ರದ್ಧಾ ಭಕ್ತಿಯ ಕೇಂದ್ರವಾಗಿದ್ದು, ವಿಶೇಷವಾಗಿ ಜಾತ್ರೆ ಹಾಗೂ ರಥೋತ್ಸವದ ಸಂದರ್ಭದಲ್ಲಿ ಚನ್ನಕೇಶವ (ವಿಷ್ಣುವಿನ) ಭಕ್ತರು ಭಕ್ತಿಯ ಪರಾಕಾಷ್ಠೆಯಲ್ಲಿ ಮಿಂದೇಳುತ್ತಾರೆ. ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳ ಜನರು ದೊಡ್ಡ ಹಬ್ಬ ಎಂಬಂತೆ ಪಾಲ್ಗೊಳುತ್ತಾರೆ.
ಅಲಂಕಾರಗೊಂಡಿದ್ದ ರಥಕ್ಕೆ ಬುಧವಾರ ರಾತ್ರಿ ಕಳಸಾರೋಹಣ ಮಾಡಿ ರಥವನ್ನು ಸಿದ್ದಗೊಳಿಸಲಾಗಿತ್ತು. ಗುರುವಾರ ಬೆಳಿಗ್ಗೆ ರಥನಿರೀಕ್ಷೆ, ಸಂಪ್ರೋಕ್ಷಣೆ, ಮಂಗಳಾರತಿ ಪೂಜೆಗಳನ್ನು ನಡೆಸಲಾಯಿತು. ರಥದ ಎದುರು ಗೊನೆ ಇರುವ ಬಾಳೆಕಂಬವನ್ನು ನೆಟ್ಟು, ಕಡಿಯುವ ಮೂಲಕ ರಥ ಬಲಿ ನಡೆಸಲಾಯಿತು.
ದೇಗುಲದ ನವರಂಗದಲ್ಲಿ ಪ್ರಧಾನ ಆರ್ಚಕ ಶ್ರೀನಿವಾಸ್ ಭಟ್ಟರು, ಯಾತ್ರಾದಾನ ಪೂಜೆ ಮಾಡಿದರು. ನಂತರ ಮಹಾಲಕ್ಷ್ಮಿ ಹಾಗೂ ಭೂದೇವಿ ಜೊತೆಗಿರುವ ಚನ್ನಕೇಶವನ ಉತ್ಸವ ಮೂರ್ತಿಯನ್ನು ದೇಗುಲದ ಗೋಪುರದ ದ್ವಾರದಿಂದ ಹೊರ ತಂದು, ದೇಗುಲದ ಅಷ್ಟ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ದೇಗುಲದ ಮುಂಭಾಗದಲ್ಲಿರುವ ಭಾವಿಕಟ್ಟೆ ಸಮೀಪ ತಳಿರು, ತೋರಣಗಳಿಂದ ಅಲಂಕರಿಸಿದ್ದ ಕೇಸರಿ ಮಂಟಪದಲ್ಲಿ ಉತ್ಸವ ಮೂರ್ತಿ ಕುಳ್ಳಿರಿಸಿ, ವಿಶೇಷ ಪೂಜೆ ಸಲ್ಲಿಸಲಾಯಿತು.
ನಂತರ ಚನ್ನಕೇಶವಸ್ವಾಮಿ ಉತ್ಸವ ಮೂರ್ತಿಯನ್ನು ರಥದ ಸುತ್ತ ಮೂರು ಸುತ್ತು ಪ್ರದಕ್ಷಿಣೆ ಹಾಕಿ, ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ಆಕಾಶದಲ್ಲಿ ಗರುಡ ಪಕ್ಷಿ ಒಂದು ಸುತ್ತು ಹಾಕುತ್ತಿದ್ದಂತೆಯೇ ಬೆಳಿಗ್ಗೆ10.30 ರಿಂದ 11 ಗಂಟೆಯೊಳಗೆ ಸಲ್ಲುವ ಮಿಥುನ ಲಗ್ನದಲ್ಲಿ ರಥೋತ್ಸವ ನಡೆಯಿತು.
ಭಕ್ತರು ಗೋವಿಂದ ನಾಮಸ್ಮರಣೆ ಮಾಡಿ ಘೋಷಣೆ ಕೂಗಿದರು. ರಥವನ್ನು ಮುಂದೆ ಎಳೆಯುತಿದ್ದಂತೆ ಭಕ್ತರು, ಭಕ್ತಿಯಿಂದ ಬಾಳೇಹಣ್ಣು, ಮೆಣಸಿನಕಾಳು ಹಾಗೂ ಧವನವನ್ನು ಅರ್ಪಿಸಿದರು. ಮತ್ತೆ ಕೆಲವರು ರಥವನ್ನು ಎಳೆದು ಸಂಭ್ರಮಪಟ್ಟರು. ದೇಗುಲದ ಒಳ ಆವರಣದಲ್ಲಿ ಸಾವಿರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆದರು. ವಿವಿಧ ಸಂಘ, ಸಂಸ್ಥೆಗಳಿಂದ ಮಜ್ಜಿಗೆ, ಪಾನಕ, ಪ್ರಸಾದ ವಿತರಿಸಲಾಯಿತು.
ಡಿವೈಎಸ್ ಪಿ ಲೋಕೇಶ್, ಪೊಲೀಸ್ ಇನ್‌ಸ್ಪೆಕ್ಟರ್ ರೇವಣ್ಣ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಸಂಸದ ಶ್ರೇಯಸ್ ಪಟೇಲ್, ಶಾಸಕರಾದ ಎಚ್.ಕೆ. ಸುರೇಶ್, ಎಚ್.ಡಿ. ರೇವಣ್ಣ, ಎಐಸಿಸಿ ಸದಸ್ಯ ಬಿ.ಶಿವರಾಂ, ಪುರಸಭೆ ಅಧ್ಯಕ್ಷ ಎ.ಆರ್.ಅಶೋಕ್, ಜಿಲ್ಲಾಧಿಕಾರಿ ಸಿ. ಸತ್ಯಭಾಮಾ, ತಹಶೀಲ್ದಾರ್ ಎಂ.ಮಮತಾ, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಟಿ.ಶಾಂತಲಾ, ದೇಗುಲದ ಕಾರ್ಯ ನಿರ್ವಹಣಾಧಿಕಾರಿ ಯೋಗೀಶ್ ಇತರರು ಪಾಲ್ಗೊಂಡಿದ್ದರು.
ಪ್ರತಿ ವರ್ಷ ರಥೋತ್ಸವದಲ್ಲಿ ಸಂಘಟನೆಯಿಂದ ಸಾಂಸ್ಕೃತಿಕ ನಡೆಸುತ್ತಿದ್ದು ಶುಕ್ರವಾರ ಸಂಜೆ ದೇಗುಲದ ಮುಂಭಾಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಹೆಚ್ಚಿನ ಜನರು ಭಾಗವಹಿಸಬೇಕು.ಎಸ್.ಎಂ. ರಾಜು ಜಯ ಕರ್ನಾಟಕ ಸಂಘಟನೆ ತಾಲ್ಲೂಕು ಘಟಕದ ಅಧ್ಯಕ್ಷ
ಈ ಬಾರಿಯ ಜಾತ್ರೆಯನ್ನು ಶಾಸಕ ಎಚ್.ಕೆ.ಸುರೇಶ್ ನೇತೃತ್ವದಲ್ಲಿ ವಿಶೇಷವಾಗಿ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಶಾಸಕರು ಈ ಬಗ್ಗೆ ಹೆಚ್ಚಿನ ಆಸಕ್ತಿ ತೋರಿ ಜಾತ್ರೆಗೆ ಕಳೆ ನೀಡಿದ್ದಾರೆ.ಸನ್ಯಾಸಿಹಳ್ಳಿ ನರೇಂದ್ರ ಬಿಜೆಪಿ ಮುಖಂಡ
ಕ್ಷೇತ್ರದ ಹಾಗೂ ನಾಡಿನ ಜನರಿಗೆ ಒಳಿತಾಗಲಿ. ಕ್ಷೇತ್ರದ ಅಭಿವೃದ್ದಿಗೆ ಸರ್ಕಾರ ಹೆಚ್ಚಿನ ಅನುದಾನ ನೀಡುವ ಬುದ್ದಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ್ದೇನೆಎಚ್.ಕೆ.ಸುರೇಶ್ ಶಾಸಕ
ಕಲ್ಯಾಣಿ ಸಮೀಪ ಖಾಜಿ ಪ್ರಾರ್ಥನೆ
ರಥೋತ್ಸವಕ್ಕೂ ಮುನ್ನ ತಾಲ್ಲೂಕಿನ ದೊಡ್ಡಮೇದೂರು ಗ್ರಾಮದ ಸೈಯ್ಯದ್ ಸಜ್ಜಾದ್ ಬಾಷಾ ಖಾದ್ರಿಯವರು ದೇಗುಲದ ಒಳ ಆವರಣದ ಕಲ್ಯಾಣಿ ಸಮೀಪದ ನೆಲಹಾಸಿನ ಮೇಲೆ ನಿಂತು ಉರ್ದುಭಾಷೆಯಲ್ಲಿ ದೇವರಿಗೆ ಪ್ರಾರ್ಥನೆ ಸಲ್ಲಿಸಿದರು. ಸಂಪ್ರದಾಯದಂತೆ ಗುರುವಾರದ ಬ್ರಹ್ಮರಥೋತ್ಸವವು ಬ್ರಾಹ್ಮಣರ ನೇತೃತ್ವದಲ್ಲಿ ನಡೆದರೆ ಶುಕ್ರವಾರ ನಡೆಯುವ ದಿವ್ಯ ರಥೋತ್ಸವವು ದೇವಲಯಕ್ಕೆ ಸಂಬಂಧಿಸಿದ ನಾಡಪಟೇಲರ ನೇತೃತ್ವದಲ್ಲಿ ನಡೆಯುತ್ತದೆ. ಬ್ರಹ್ಮ ರಥೋತ್ಸವದ ವೇಳೆ ರಥವನ್ನು ಈಶಾನ್ಯ ಮೂಲೆಯಿಂದ ಆಗ್ನೇಯ ಮೂಲೆಯವರೆಗೆ ಎಳೆಯಲಾಗುತ್ತದೆ. ದಿವ್ಯ ರಥೋತ್ಸವದ ವೇಳೆ ರಥವನ್ನು ಆಗ್ನೇಯ ಮೂಲೆಯಿಂದ ದೇಗುಲದ ಮೂರು ಬೀದಿಗಳಲ್ಲಿ ಎಳೆದು ಈಶಾನ್ಯ ಮೂಲೆಯ ಮೂಲ ಸ್ಥಾನಕ್ಕೆ ತಂದು ನಿಲ್ಲಿಸಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.