ADVERTISEMENT

ಕೆಸರುಮಯ ರಸ್ತೆಯಲ್ಲಿ ಜನರ ಪರದಾಟ

10 ವರ್ಷಗಳ ಹಿಂದೆ ಬಡಾವಣೆ ನಿರ್ಮಾಣ: ಅಂದಿನಿಂದ ಜನರ ಮನವಿ

ಎಂ.ಪಿ.ಹರೀಶ್
Published 3 ಜುಲೈ 2025, 7:39 IST
Last Updated 3 ಜುಲೈ 2025, 7:39 IST
ಆಲೂರು ಪಟ್ಟಣದ 3 ನೇ ವಾರ್ಡ್‌ನ ರಸ್ತೆ ಕೆಸರುಮಯವಾಗಿದ್ದು, ಓಡಾಡಲು ಆಗದಂತಾಗಿದೆ
ಆಲೂರು ಪಟ್ಟಣದ 3 ನೇ ವಾರ್ಡ್‌ನ ರಸ್ತೆ ಕೆಸರುಮಯವಾಗಿದ್ದು, ಓಡಾಡಲು ಆಗದಂತಾಗಿದೆ   

ಆಲೂರು: ಪಟ್ಟಣದ ಹೌಸಿಂಗ್ ಬೋರ್ಡ್‍ಗೆ ಹೊಂದಿಕೊಂಡಂತಿರುವ, ಸುಮಾರು 30ಕ್ಕೂ ಹೆಚ್ಚು ವಾಸದ ಮನೆಗಳಿಗೆ ಓಡಾಡುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ನಡೆದಾಡುವುದಕ್ಕೂ ಸಾಧ್ಯವಾಗುತ್ತಿಲ್ಲ ಎಂದು ಸ್ಥಳೀಯ ನಿವಾಸಿಗಳು ದೂರುತ್ತಿದ್ದಾರೆ.

ದಶಕಗಳಿಂದ ವಾಸ ಮಾಡುತ್ತಿರುವ ನಿವಾಸಿಗಳು, ಮಳೆಗಾಲದಲ್ಲಿ ಕೆಸರುಮಯ ರಸ್ತೆಯಲ್ಲಿ ಓಡಾಡಲು ಪರದಾಡುವಂತಾಗಿದೆ. ವಾಹನ ಸಂಚರಿಸಲು ಸಹ ಸಾಧ್ಯವಿಲ್ಲದಂತ ಪರಿಸ್ಥಿತಿ ನಿರ್ಮಾಣವಾಗಿದೆ. ನಿವಾಸಿಗಳು ಮನೆಯಿಂದ ಹೊರಬರಲು ಸಾಧ್ಯವಾಗದೆ ತೊಂದರೆ ಅನುಭವಿಸುವಂತಾಗಿದೆ.

ರಸ್ತೆಯಂಚಿನಲ್ಲಿ ಗಿಡಗಂಟಿಗಳು ಬೆಳೆದಿರುವುದರಿಂದ ವಿಷಜಂತುಗಳು ಮತ್ತು ಮಳೆ, ತೇವಾಂಶ ಇರುವುದರಿಂದ ಸೊಳ್ಳೆಗಳ ತಾಣವಾಗಿದೆ. ಹಲವರು ಅನಾರೋಗ್ಯಕ್ಕೂ ತುತ್ತಾಗುತ್ತಿದ್ದಾರೆ. ಕೂಡಲೇ ದುರಸ್ತಿ ಮಾಡಬೇಕೆಂದು ಎಂದು ಸ್ಥಳೀಯರು ಅವಲತ್ತುಕೊಂಡಿದ್ದಾರೆ.

ADVERTISEMENT

ಸುಮಾರು 8-10 ವರ್ಷಗಳ ಹಿಂದೆ ಖಾಸಗಿಯವರು ಅಲಿನೇಷನ್ ಮೂಲಕ ನಿವೇಶನಗಳನ್ನು ಮಾಡಿ ಪಟ್ಟಣ ಪಂಚಾಯಿತಿಗೆ ವರ್ಗಾಯಿಸಿದ್ದಾರೆ. ಸ್ಥಳೀಯ ನಿವಾಸಿಗಳು ತೆರಿಗೆಗಳನ್ನು ಪಟ್ಟಣ ಪಂಚಾಯಿತಿಗೆ ಪಾವತಿ ಮಾಡುತ್ತಿದ್ದಾರೆ. ಅಂದಿನಿಂದಲೂ ರಸ್ತೆ ದುರಸ್ತಿ ಮಾಡಿಕೊಡುವಂತೆ ಸ್ಥಳೀಯ ನಿವಾಸಿಗಳು ಹಲವು ಬಾರಿ ಪಟ್ಟಣ ಪಂಚಾಯಿತಿ ಕಚೇರಿಗೆ ಮನವಿ ಮಾಡಿದ್ದರೂ ಪ್ರಯೋಜನ ಆಗಿಲ್ಲ ಎಂದು ಜನರು ಹೇಳುತ್ತಿದ್ದಾರೆ.

ವರ್ಷದ ಹಿಂದೆ ಜೆಸಿಬಿ ಯಂತ್ರ ಬಳಸಿ ರಸ್ತೆ ಕೆಲ ಭಾಗದಲ್ಲಿ ದುರಸ್ತಿ ಮಾಡಲಾಗಿತ್ತು. ಪ್ರಸಕ್ತ ಸಾಲಿನಲ್ಲಿ ಜಲಜೀವನ ಮಿಷನ್‌ ಅಡಿ ಕುಡಿಯುವ ನೀರು ಪೈಪ್‌ ಹಾಕಲು ಚರಂಡಿ ತೆಗೆದಿದ್ದರು. ಆ ಮಣ್ಣು ರಸ್ತೆ ಮೇಲೆ ಬಿದ್ದು ಕೆಸರಾಗಿದೆ. ಚರಂಡಿ ಇಲ್ಲದಿರುವುದರಿಂದ ರಸ್ತೆ ಮೇಲೆ ಬಿದ್ದ ನೀರು ಮಣ್ಣಿನೊಡನೆ ಬೆರೆಯುತ್ತಿದೆ.

ಜನರು ಓಡಾಡುವುದಕ್ಕಾದರೂ ಒಂದು ಉತ್ತಮ ರಸ್ತೆಯನ್ನು ನಿರ್ಮಿಸಿಕೊಡಬೇಕು. ಕನಿಷ್ಠ ಮೂಲಸೌಕರ್ಯ ಒದಗಿಸದಿದ್ದರೆ, ಪ್ರತಿಭಟನೆಗೆ ಮುಂದಾಗಬೇಕುತ್ತದೆ ಎಂದು ಜನರು ಎಚ್ಚರಿಸಿದ್ದಾರೆ.

3ನೇ ವಾರ್ಡ್‌ ರಸ್ತೆಗಳನ್ನು ಖುದ್ದಾಗಿ ಪರಿಶೀಲಿಸಿದ್ದೇನೆ. ದುರಸ್ತಿಗೆ ಕೋಟ್ಯಂತ ರೂಪಾಯಿ ಬೇಕಾಗುತ್ತದೆ. ಕ್ರಿಯಾಯೋಜನೆ ಸಿದ್ಧಪಡಿಸಿದ್ದು ಅನುದಾನ ಬಂದ ತಕ್ಷಣ ಕಾಮಗಾರಿ ಮಾಡಲಾಗುವುದು ಮಂಜುನಾಥ್ ಆಲೂರು ಪ.ಪಂ. ಮುಖ್ಯಾಧಿಕಾರಿ

ಪ್ರತಿಯೊಬ್ಬರಿಗೂ ಮೂಲ ಸೌಕರ್ಯಗಳನ್ನು ಒದಗಿಸುವುದು ನನ್ನ ಕರ್ತವ್ಯ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತೇನೆ. ರಸ್ತೆ ದುರಸ್ತಿ ಬಗ್ಗೆ ಕ್ರಮ ಕೈಗೊಳ್ಳುತ್ತೇನೆ ಸಿಮೆಂಟ್ ಮಂಜು ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.