ADVERTISEMENT

ತ್ಯಾಜ್ಯದ ದುರ್ವಾಸನೆಗೆ ಬೇಸತ್ತ ಜನತೆ

ವೈಜ್ಞಾನಿಕವಾಗಿ ನಡೆಯದ ಘನ ತ್ಯಾಜ್ಯ ನಿರ್ವಹಣೆ, ತುಕ್ಕು ಹಿಡಿಯುತ್ತಿದೆ ಯಂತ್ರಗಳು

ಜಿ.ಚಂದ್ರಶೇಖರ್‌
Published 19 ಜುಲೈ 2021, 3:33 IST
Last Updated 19 ಜುಲೈ 2021, 3:33 IST
ಅರಕಲಗೂಡು ಪಟ್ಟಣದಲ್ಲಿ ಘನ ತ್ಯಾಜ್ಯದ ರಾಶಿ
ಅರಕಲಗೂಡು ಪಟ್ಟಣದಲ್ಲಿ ಘನ ತ್ಯಾಜ್ಯದ ರಾಶಿ   

ಅರಕಲಗೂಡು : ಪಟ್ಟಣದ ಹೊರ ವಲಯದಲ್ಲಿರುವ ಘನ ತ್ಯಾಜ್ಯ ಘಟಕದಲ್ಲಿ ನಿರ್ವಹಣಾ ಕಾರ್ಯ ಸ್ಥಗಿತಗೊಂಡಿರುವ ಪರಿಣಾಮ ತ್ಯಾಜ್ಯದ ರಾಶಿ ಬೆಟ್ಟದಂತೆ ಏರುತ್ತಿದ್ದು, ಸಂಗ್ರಹವಾಗಿರುವ ಕಸ ಕೊಳೆತು ದುರ್ವಾಸನೆ ಬೀರುತ್ತಿದೆ.

ಪಟ್ಟಣದಲ್ಲಿ ಸಂಗ್ರಹವಾಗುವ ತ್ಯಾಜ್ಯವನ್ನು ಸಂಗ್ರಹಿಸಿ ವೈಜ್ಞಾನಿಕವಾಗಿ ಸಂಸ್ಕರಿಸುವ ಉದ್ದೇಶದಿಂದ ಹೊಳೆನರಸೀಪುರ ರಸ್ತೆ ಸಾಲು ಮರದ ತಿಮ್ಮಕ್ಕ ಉದ್ಯಾನದ ಬಳಿ ಎರಡು ಎಕರೆ ಪ್ರದೇಶದಲ್ಲಿ ತ್ಯಾಜ್ಯ ನಿರ್ವಹಣಾ ಘಟಕವನ್ನು ದಶಕಗಳ ಹಿಂದೆ ಸ್ಥಾಪಿಸಿ, ವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿಗೆ ಮುಂದಾಗಿತ್ತು.

ನಿತ್ಯ ಪಟ್ಟಣದಲ್ಲಿ ಸಂಗ್ರಹವಾಗುವ ತ್ಯಾಜ್ಯವನ್ನು ಸಂಗ್ರಹಿಸಿ ಇಲ್ಲಿ ದಾಸ್ತಾನು ಮಾಡಲಾಗುತ್ತಿದೆ. ದಿನದಿಂದ ದಿನಕ್ಕೆ ತ್ಯಾಜ್ಯ ಹೆಚ್ಚಾಗಿ, ಘಟಕ ಭರ್ತಿ ಅಂಚಿನಲ್ಲಿದೆ. ಸಕಾಲದಲ್ಲಿ ನಿರ್ವಹಣೆ ಮಾಡದಿರುವುದರಿಂದ ಸುತ್ತಲ ಪ್ರದೇಶವೆಲ್ಲಾ ಗಬ್ಬು ನಾರುತ್ತಿದೆ ಎಂದು ಸಾರ್ವಜನಿಕರು ಅರೋಪಿಸಿದ್ದಾರೆ.

ADVERTISEMENT

ವೈಜ್ಞಾನಿಕವಾಗಿ ತ್ಯಾಜ್ಯ ಸಂಸ್ಕರಿಸುವ ಕಾರ್ಯಕ್ಕೆ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಯಂತ್ರ ಅಳವಡಿಸಿ, ಕಟ್ಟಡ ಸಹ ನಿರ್ಮಿಸಲಾಗಿದೆ. ಆದರೆ, ತ್ಯಾಜ್ಯ ವಿಂಗಡಣೆ ನಡೆಯದ ಕಾರಣ ಯಂತ್ರ ತುಕ್ಕು ಹಿಡಿದಿದೆ. 2010-11 ನೇ ಸಾಲಿನಲ್ಲಿ ₹ 7.5 ಲಕ್ಷ ವೆಚ್ಚದಲ್ಲಿ ಎರೆ ಹುಳು ಗೊಬ್ಬರ ತಯಾರಿಕೆಗೆ ಘಟಕ ತೆರೆದಿದ್ದರೂ ಈ ವರೆಗೂ ಗೊಬ್ಬರದ ಉತ್ಪಾದನೆ ನಡೆದಿಲ್ಲ.

‘ಘಟಕವನ್ನು ಅವೈಜ್ಞಾನಿಕವಾಗಿ ನಿರ್ಮಾಣ ಮಾಡಲಾಗಿದೆ’ ಎಂದು ಪರಿಶೀಲನೆಗೆ ಬಂದ ತಜ್ಞರ ತಂಡ ವರದಿ ನೀಡಿದೆ ಎನ್ನಲಾಗಿದೆ.

ಘನತ್ಯಾಜ್ಯ ನಿರ್ವಹಣೆ ವ್ಯವಸ್ಥಿತವಾಗಿ ನಡೆಯದ ಕಾರಣ ಸಂಗ್ರಹವಾದ ತ್ಯಾಜ್ಯ ಕೊಳೆತು ದುರ್ನಾತ ಬೀರುತ್ತಿದೆ. ಸರಿಯಾದ ನಿರ್ವಹಣೆ ಇಲ್ಲದ ಕಾರಣ ಇಲ್ಲಿ ನಿರ್ಮಿಸಿರುವ ಕಟ್ಟಡಗಳು ಹಾಳಾಗುತ್ತಿವೆ. ಘಟಕದ ಉಪಯೋಗಕ್ಕಾಗಿ ನಿರ್ಮಿಸಿರುವ ಕೊಳವೆ ಬಾವಿಯನ್ನೂ ತ್ಯಾಜ್ಯ ಆವರಿಸಿದೆ. ಕಾವಲುಗಾರರಿಗೆ ವಸತಿ ಇದ್ದರೂ ರಾತ್ರಿ ಕಾವಲುಗಾರರು ಇಲ್ಲ. ಹೀಗಾಗಿ ಇಲ್ಲಿನ ಯಂತ್ರಗಳ ಬಿಡಿಭಾಗಗಳ ಕಳವು ನಡೆಯುತ್ತಿದೆ ಎನ್ನಲಾಗಿದೆ. ಘಟಕ ಸಮೀಪದ ಸಾಲು ಮರದ ತಿಮ್ಮಕ್ಕ ಸಸ್ಯೋದ್ಯಾನ, ಮೊರಾರ್ಜಿ ವಸತಿ ಶಾಲೆ, ಅರಣ್ಯ ಇಲಾಖೆ ಕಚೇರಿ, ಖಾಸಗಿ ಕಲ್ಯಾಣ ಮಂಟಪಕ್ಕೂ ಕೆಟ್ಟ ವಾಸನೆ ಬಡಿಯುತ್ತಿದೆ. ಪಟ್ಟಣದಲ್ಲಿ ಸ್ವಚ್ಚತೆ ನಿರ್ವಹಣೆಯೂ ಸಮರ್ಪಕವಾಗಿಲ್ಲ. ಇರುವ ಎರಡು ಹಳೆಯ ವಾಹನದಲ್ಲೇ ಕಸ ಸಂಗ್ರಹ ನಡೆಯುತ್ತಿದ್ದು, ಆಗಾಗ್ಗೆ ಕೆಟ್ಟು ನಿಲ್ಲುತ್ತಿವೆ.

‘ಘನ ತ್ಯಾಜ್ಯ ನಿರ್ವಹಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದ್ದು, ಯಂತ್ರಗಳ ಖರೀದಿಗೆ ಟೆಂಡರ್ ಪ್ರಕ್ರಿಯೆ ನಡೆದಿದೆ. ಯಂತ್ರಗಳ ಅಳವಡಿಕೆಯಾದ ನಂತರ ತ್ಯಾಜ್ಯವನ್ನು ವಿಂಗಡಿಸಿ ಸಂಸ್ಕರಿಸಿ ಗೊಬ್ಬರ ತಯಾರಿಕೆಗೆ ಕ್ರಮ ಕೈಗೊಳ್ಳಲಾಗುವುದು. ಈ ಹಿಂದೆ ಅಳವಡಿಸಿದ್ದ ಒಂದು ಯಂತ್ರ ಸರಿಯಾದ ನಿರ್ವಹಣೆ ಇಲ್ಲದ ಕಾರಣ ಹಾಳಾಗಿದೆ. ರಾತ್ರಿ ಕಾವಲುಗಾರರು ಇಲ್ಲದ ಕಾರಣ ಬಿಡಿಭಾಗಗಳನ್ನು ಕಳವು ಮಾಡಲಾಗಿದೆ. ದುರಸ್ತಿಗೊಳಿಸಿ ಬಳಸಿಕೊಳ್ಳಲಾಗುವುದು’ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶಿವಕುಮಾರ್ ತಿಳಿಸಿದರು.

‘ಎರೆಹುಳು ಗೊಬ್ಬರ ತಯಾರಿಕೆ ಘಟಕ ದುರಸ್ತಿಪಡಿಸಲು ರೋಟರಿ ಸಂಸ್ಥೆ ನೆರವು ನೀಡಲಿದೆ. ಪಟ್ಟಣ ದಿನೇ ಬೆಳೆಯುತ್ತಿದ್ದು, ಜನಸಂಖ್ಯೆಗೆ ಹೋಲಿಸಿದರೆ ಪೌರ ಕಾರ್ಮಿಕರ ಸಂಖ್ಯೆ ಕಡಿಮೆ. ಕೋವಿಡ್ ನಿರ್ವಹಣೆಗೂ ಪೌರಕಾರ್ಮಿಕರನ್ನು ಬಳಕೆ ಮಾಡಿಕೊಳ್ಳುತ್ತಿರುವುದರಿಂದ ಸ್ವಚ್ಛತಾ ಕಾರ್ಯದಲ್ಲಿ ಸ್ವಲ್ಪ ಮಟ್ಟಿನ ಏರುಪೇರಾಗಿದೆ. ಇದನ್ನು ಸರಿಪಡಿಸಲು ಕ್ರಮ ವಹಿಸಲಾಗಿದೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.