ADVERTISEMENT

ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಜನ ಬೆಂಬಲ ಕಡಿಮೆ: ಹಿ.ಶಿ.ರಾಮಚಂದ್ರೇಗೌಡ

ಖಾದ್ರಿ ಶಾಮಣ್ಣ ಪ್ರಶಸ್ತಿ ಪ್ರದಾನ ಸಮಾರಂಭ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2021, 15:55 IST
Last Updated 13 ನವೆಂಬರ್ 2021, 15:55 IST
ಹಾಸನದಲ್ಲಿ ನಡೆದ ಖಾದ್ರಿ ಶಾಮಣ್ಣ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿದ್ದಜನರು.
ಹಾಸನದಲ್ಲಿ ನಡೆದ ಖಾದ್ರಿ ಶಾಮಣ್ಣ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿದ್ದಜನರು.   

ಹಾಸನ: ‘ಜಿಲ್ಲೆ ಸಾಂಸ್ಕೃತಿಕವಾಗಿ ಹಿಂದುಳಿಯಲು ಇಲ್ಲಿನ ರಾಜಕಾರಣವೇ ಕಾರಣ’ ಎಂದು ಜಾನಪದ ವಿದ್ವಾಂಸಹಿ.ಶಿ.ರಾಮಚಂದ್ರೇಗೌಡ ಹೇಳಿದರು.

ನಗರದಲ್ಲಿ ಶನಿವಾರ ಮೇಲುಕೋಟೆ ಖಾದ್ರಿ ಶಾಮಣ್ಣ ಸ್ಮಾರಕ ಟ್ರಸ್ಟ್‌, ಜಿಲ್ಲಾ ನಾಗರಿಕರ ವೇದಿಕೆ, ಜಿಲ್ಲಾ
ಕಾರ್ಯ ನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಆಯೋಜಿಸಿದ್ದ ಖಾದ್ರಿ ಶಾಮಣ್ಣ ಪತ್ರಿಕೋದ್ಯಮ ಪ್ರಶಸ್ತಿ
ಪ್ರದಾನ ಹಾಗೂ ಅಭಿವ್ಯಕ್ತಿ ಸ್ವಾತಂತ್ರ‍್ಯ 75ರ ನೆನಪು ಸಂವಾದದಲ್ಲಿ ಮಾತನಾಡಿದರು.

‘ಹಿಂದೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಉತ್ತಮ ಬೆಂಬಲವಿತ್ತು. ಈಗ ಜನ ಬೆಂಬಲತೀರಾ ಕಡಿಮೆ. ರಾಜಕೀಯ ಕಾರ್ಯಕ್ರಮಗಳಿಗೆ ಹೆಚ್ಚು ಜನ ಸೇರುತ್ತಾರೆ. ಖಾದ್ರಿ ಶಾಮಣ್ಣ ಸ್ಮಾರಕ ಪ್ರಶಸ್ತಿ ರಾಜ್ಯೋತ್ಸವ
ಪ್ರಶಸ್ತಿಗೆ ಸಮ’ ಎಂದರು.

ADVERTISEMENT

ನಿವೃತ್ತ ಡಿವೈಎಸ್‌ಪಿ ಜಿ.ಬಿ. ರಂಗಸ್ವಾಮಿ ಮಾತನಾಡಿ, ‘ಅಭಿವ್ಯಕ್ತಿ ಸ್ವಾತಂತ್ರ್ಯ ಇಂದಿಗೂ ಹಸಿರಾಗಿರಲು
ಖಾದ್ರಿ ಶಾಮಣ್ಣ ಕಾರಣ. ಅವರು ಎಲ್ಲಾ ರೀತಿಯ ಅರಿವು ಹೊಂದಿ ಪತ್ರಿಕೋದ್ಯಮವನ್ನು ಪ್ರವೇಶಿಸಿದರು’
ಎಂದರು.

ಟ್ರಸ್ಟ್‌ ಅಧ್ಯಕ್ಷ ಎಂ.ಕೆ. ಭಾಸ್ಕರ್ ರಾವ್ ಮಾತನಾಡಿ, ‘ಕೊರೊನಾ ಮಾದರಿಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ‍್ಯದ
ದಮನ ಮಾಡಲು ಕಾಣದ ಶಕ್ತಿಗಳು ಕೆಲಸ ಮಾಡುತ್ತಿವೆ. 75ರ ದಶಕದಲ್ಲಿ ಪತ್ರಿಕೋದ್ಯಮ ಸವಾಲಿನ ಸಂದರ್ಭವಾಗಿತ್ತು. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಇಂದಿರಾ ಗಾಂಧಿ ಅಭಿವ್ಯಕ್ತಿ ಸ್ವಾತಂತ್ರ‍್ಯವನ್ನು ಸಂಪೂರ್ಣ ದಮನ ಮಾಡಿದ್ದರು. ನೊಂದವರ, ಹಿಂದುಳಿದವರ, ಸಮಾಜದಲ್ಲಿ ಶೋಷಿತರ, ರೈತರ, ಬಡವರ ಮೇಲೆ ನಡೆಯುತ್ತಿದ್ದ ದೌರ್ಜನ್ಯಗಳನ್ನು ಖಂಡಿಸುವ ನಿಟ್ಟಿನಲ್ಲಿ ಪತ್ರಿಕೋದ್ಯಮದ ಪಾತ್ರ ಅಪಾರ’ ಎಂದು ನುಡಿದರು.

2020ನೇ ಸಾಲಿನ ಪ್ರಶಸ್ತಿಯನ್ನು ತರಂಗ ವಾರ ಪತ್ರಿಕೆ ಸಂಪಾದಕಿ ಯು.ಬಿ. ರಾಜಲಕ್ಷ್ಮಿ ಹಾಗೂ 2021ನೇ ಸಾಲಿನ ಪ್ರಶಸ್ತಿಯನ್ನು ಜನತಾ ಮಾಧ್ಯಮ ಪತ್ರಿಕೆ ಸಂಪಾದಕ ಆರ್‌.ಪಿ. ವೆಂಕಟೇಶ್‌ ಮೂರ್ತಿ ಅವರಿಗೆ ಟ್ರಸ್ಟಿ ಪ್ರೊ.ಕೆ.ವಿ. ನಾಗರಾಜ್‌ ಪ್ರದಾನ ಮಾಡಿದರು.

ಕಾರ್ಯಕ್ರಮದಲ್ಲಿ ಟ್ರಸ್ಟಿ ಎಚ್‌.ಆರ್‌. ಶ್ರೀಶ, ಪತ್ರಕರ್ತರಾದ ಶಿವಾನಂದ ತಗಡೂರು, ಎಸ್‌.ಆರ್‌. ಪ್ರಸನ್ನಕುಮಾರ್‌, ಜಯಲಕ್ಷ್ಮಿ ಮುನಿವೆಂಕಟೇಗೌಡ, ಮಂಜುನಾಥ ದತ್ತ, ವೀರನಾರಾಯಣ, ಕೆ.ಪಿ. ವಾಸುದೇವನ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.