ADVERTISEMENT

ಪೆಟ್‌ ಬಾಟಲ್‌ ಘಟಕ ಪ್ರಾಯೋಗಿಕ ಆರಂಭ

ಅಕ್ಟೋಬರ್‌ನಿಂದ ವಾಣಿಜ್ಯ ಉತ್ಪಾದನೆ: ₹ 167 ಕೋಟಿ ವೆಚ್ಚದ ಘಟಕ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2021, 16:48 IST
Last Updated 8 ಸೆಪ್ಟೆಂಬರ್ 2021, 16:48 IST
ಹಾಸನ ಹಾಲು ಒಕ್ಕೂಟದಲ್ಲಿ ಕಾರ್ಯಾರಂಭ ಮಾಡಿರುವ ಪೆಟ್‌ ಬಾಟೆಲ್‌ ಘಟಕವನ್ನು ಒಕ್ಕೂಟದ ಅಧ್ಯಕ್ಷ ಎಚ್.ಡಿ.ರೇವಣ್ಣ ಹಾಗೂ ವ್ಯವಸ್ಥಾಪಕ ನಿರ್ದೇಶಕ ಗೋಪಾಲಯ್ಯ ವೀಕ್ಷಿಸಿದರು.
ಹಾಸನ ಹಾಲು ಒಕ್ಕೂಟದಲ್ಲಿ ಕಾರ್ಯಾರಂಭ ಮಾಡಿರುವ ಪೆಟ್‌ ಬಾಟೆಲ್‌ ಘಟಕವನ್ನು ಒಕ್ಕೂಟದ ಅಧ್ಯಕ್ಷ ಎಚ್.ಡಿ.ರೇವಣ್ಣ ಹಾಗೂ ವ್ಯವಸ್ಥಾಪಕ ನಿರ್ದೇಶಕ ಗೋಪಾಲಯ್ಯ ವೀಕ್ಷಿಸಿದರು.   

ಹಾಸನ: ಹಾಸನ ಹಾಲು ಒಕ್ಕೂಟದ ಆವರಣದಲ್ಲಿ ನಿರ್ಮಿಸಿರುವ ಸುವಾಸಿತ ಹಾಲಿನ ಪೆಟ್‍ಬಾಟೆಲ್ ಘಟಕ
ಕಾರ್ಯಾರಂಭಕ್ಕೆ ಸಿದ್ಧವಾಗಿದ್ದು, ಬುಧವಾರದಿಂದ ಪ್ರಾಯೋಗಿಕ ಚಾಲನೆ(ವಾಟರ್ ಟ್ರಯಲ್) ಶುರುವಾಗಿದೆ.

ಕಟ್ಟಡ, ಅತ್ಯಾಧುನಿಕ ಯಂತ್ರೋಪಕರಣ ಸೇರಿ ಒಟ್ಟು ₹167 ಕೋಟಿ ವೆಚ್ಚದ ಘಟಕ ಕೊರೊನಾ ಹಿನ್ನೆಲೆಯಲ್ಲಿ ಕಾರ್ಯಾರಂಭ ತಡವಾಗಿದ್ದು, ಅಕ್ಟೋಬರ್ 2ನೇ ವಾರದಿಂದ ಸುವಾಸಿತ ಹಾಲಿನ ಪೆಟ್ಬಾಟಲ್ ಉತ್ಪಾದನೆ ಆರಂಭವಾಗಲಿದೆ ಎಂದು ಒಕ್ಕೂಟದ ಅಧ್ಯಕ್ಷ ಎಚ್‌.ಡಿ.ರೇವಣ್ಣ ಬುಧವಾರಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಇಟಲಿ, ಸ್ವೀಡನ್ ಹಾಗೂ ಜರ್ಮನಿ ದೇಶಗಳಿಂದ ಯಂತ್ರೋಪಕರಣನ್ನು ತರಿಸಿ ಅಳವಡಿಸಿದ್ದು, ಘಟಕವು ಪ್ರತಿ
ಗಂಟೆಗೆ 30 ಸಾವಿರ ಪೆಟ್ ಬಾಟಲ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, ದಿನಕ್ಕೆ 5.40 ಲಕ್ಷ
ಬಾಟಲ್ ಉತ್ಪಾದಿಸಬಹುದಾಗಿದೆ. ಫ್ಲೇವರ್ಡ್ ಮಿಲ್ಕ್‌ನಲ್ಲೇ ಬಾದಾಮ್ ಮಿಲ್ಕ್ ಪಿಸ್ತಾ, ಸ್ಟ್ರಾಬೆರಿ, ವೆನಿಲ್ಲಾ,
ಕಾರಾಮೆಲ್, ಬನಾನ, ಮ್ಯಾಂಗೋ, ಪೆಪ್ಪರ್, ಚೆರ್ರಿ,ಚಾಕೋ, ಕೇಸರ್, ಸೋಯಾ ತಯಾರಿಸಬಹುದಾಗಿದೆ
ಎಂದರು.

ADVERTISEMENT

ಅಳವಡಿಸಿರುವ ಯಂತ್ರೋಪಕರಣ ಸ್ವಯಂ ಚಾಲಿತವಾಗಿದ್ದು, ಸ್ವಚ್ಛಗೊಂಡ ಪ್ರೀ ಫಾರ್ಮ್‍ಗಳು ಬ್ಲೋವರ್
ವಿಭಾಗದಲ್ಲಿ ಅಧಿಕ ತಾಪಮಾನದಲ್ಲಿ ಬಾಟಲ್ ಆಗಿ ಪರಿವರ್ತನೆಗೊಳ್ಳುತ್ತವೆ. ನಂತರ ಬಾಟಲ್‍ಗಳನ್ನು
ಡೈಲ್ಯೂಟ್ ಪ್ಯಾರಸಟಿಕ್ ಆಸಿಡ್ ಜೆಟ್‍ಗಳ ಮೂಲಕ ಸ್ಪೆರಿಲೈಸ್ ಮಾಡಲಾಗುತ್ತದೆ. ಮೊದಲೇ ತಯಾರಿಸಿದ
ಫ್ಲೇವರ್ಡ್ ಮಿಲ್ಕ್, ಲಸ್ಸಿ, ಮಸಾಲ ಮಜ್ಜಿಗೆಯನ್ನು ನಿಗದಿತ ಪ್ರಮಾಣದಲ್ಲಿ ತುಂಬಿಸಲಾಗುತ್ತದೆ ಎಂದು
ವಿವರಿಸಿದರು.

ನಿತ್ಯ ಒಂದು ಲಕ್ಷ ಲೀಟರ್ ಹೆಚ್ಚುವರಿ ಹಾಲು ಇಲ್ಲೇ ಬಳಕೆಯಾಗಲಿದೆ. ಸುವಾಸಿತ ಹಾಲು ಮೌಲ್ಯವರ್ಧಿತ
ಉತ್ಪನ್ನಗಳಾಗಿರುವುದರಿಂದ ಲಾಭಾಂಶ ಹೆಚ್ಚಿದ್ದು, ಇದನ್ನು ಹಾಲು ಉತ್ಪಾದಕರಿಗೆ ಪಾವತಿಮಾಡಬಹುದಾಗಿದೆ. ಉದ್ಯೋಗಾವಕಾಶ ಹೆಚ್ಚಾಗಲಿವೆ. ಹೊರ ರಾಜ್ಯಗಳಲ್ಲಿ ಮಾರುಕಟ್ಟೆಸೃಷ್ಟಿಯಾಗುವುದರಿಂದ ಇತರೆ ಮಾದರಿ ಹಾಲು ಉತ್ಪನ್ನಗಳ ಮಾರಾಟಕ್ಕೆ ಹೆಚ್ಚಿನ ಅವಕಾಶ ಸಿಗಲಿದೆ. ಈಹಾಲು ಹೊರ ರಾಜ್ಯಗಳ ಮಾರುಕಟ್ಟೆ ಪ್ರವೇಶಿಸುವುದರಿಂದ ನಂದಿನಿ ಬ್ರಾಂಡ್ ಮತ್ತು ಹಾಸನ ಹಾಲುಒಕ್ಕೂಟದ ಮೌಲ್ಯ ಹೆಚ್ಚಾಗಲಿದೆ ಎಂದು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಗೋಪಾಲಯ್ಯ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.