ಅರಕಲಗೂಡು: ಪಿಎಲ್‌ಡಿ ಬ್ಯಾಂಕ್‌ನಿಂದ 2025-2026ನೇ ಸಾಲಿಗೆ ಒಟ್ಟು ₹3 ಕೋಟಿ ಹೊಸ ಸಾಲ ವಿತರಣೆ ಮಾಡಲು ಯೋಜನೆ ರೂಪಿಸಿಕೊಳ್ಳಲಾಗಿದೆ ಎಂದು ಬ್ಯಾಂಕ್ ಅಧ್ಯಕ್ಷರೂ ಆಗಿರುವ ಶಾಸಕ ಎ.ಮಂಜು ತಿಳಿಸಿದರು.
ಪಟ್ಟಣದ ಶಿಕ್ಷಕರ ಭವನದಲ್ಲಿ ಶನಿವಾರ ನಡೆದ ಬ್ಯಾಂಕಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, ‘ರೈತರು ಪಡೆದ ಸಾಲವನ್ನು ನಿಗದಿತ ಸಮಯಕ್ಕೆ ಮರುಪಾವತಿ ಮಾಡಿದ್ದಲ್ಲಿ ಹೆಚ್ಚಿನ ಜನರಿಗೆ ಸಾಲ ನೀಡಿಕೆಗೆ ಸಹಾಯಕವಾಗಲಿದೆ. ಬ್ಯಾಂಕ್‌ನಿಂದ ಪಿಗ್ಮಿ ಮತ್ತು ನಿಶ್ಚಿತ ಠೇವಣಿ ಸಂಗ್ರಹಿಸುತ್ತಿದ್ದು, ಈ ಹಣದಿಂದ ಚಿನ್ನದ ಸಾಲ, ಕೃಷಿ ಸಾಲ, ನೌಕರರಿಗೆ ಸಂಬಳ ಅಧಾರಿತ ಸಾಲ ವಿತರಣೆ ಮಾಡಲಾಗುತ್ತಿದೆ, ವಿಶೇಷ ಬಡ್ಡಿ ದರದಲ್ಲಿ ಠೇವಣಿ ಸಂಗ್ರಹಿಸಲಾಗುತ್ತಿದ್ದು ಸದಸ್ಯರು ಇದರ ಪ್ರಯೋಜನ ಪಡೆದುಕೊಳ್ಳಬೇಕು’ ಎಂದರು.
ಬ್ಯಾಂಕ್‌ನಲ್ಲಿ 2,100 ಸದಸ್ಯರಿದ್ದು, ₹65.51 ಲಕ್ಷ ಷೇರು ಬಂಡವಾಳ ಹೊಂದಿದೆ. 2024-25ನೇ ಸಾಲಿನಲ್ಲಿ 63 ಸದಸ್ಯರಿಗೆ ₹1.30 ಕೋಟಿ ಸಾಲ ವಿತರಣೆಯಾಗಿದೆ. ಮಾರ್ಚ್ ಅಂತ್ಯದ ವೇಳಗೆ ಶೇ 26.45ರಷ್ಟು ವಸೂಲಾತಿಯಾಗಿದ್ದು, ತೀರಾ ಕಡಿಮೆ ಮಟ್ಟದಲ್ಲಿದೆ. ನಬಾರ್ಡ್ ಷರತ್ತಿನಂತೆ ಹೊಸ ಸಾಲ ವಿತರಣೆ ಮಾಡಲು ಸಾಧ್ಯವಾಗುತ್ತಿಲ್ಲ. ಸರ್ಕಾರದಿಂದ ಸುಸ್ತಿ ಸಾಲಗಾರರ ಮೇಲೆ ಕಾನೂನು ಕ್ರಮಕೈಗೊಳ್ಳಲು ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದು, ಎಲ್ಲಾ ಸುಸ್ತಿ ಸಾಲಗಾರರ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳಲಾಗುತ್ತಿದೆ. ಆದ್ದರಿಂದ ಸಾಲ ಪಡೆದ ಸದಸ್ಯರು ನಿಗದಿತ ಅವಧಿಗೆ ಕಂತನ್ನು ಮರುಪಾವತಿಸಿ, ಸರ್ಕಾರ ನಿಗದಿಪಡಿಸಿರುವ ಬಡ್ಡಿ ರಿಯಾತಿಯನ್ನು ಉಪಯೋಗಿಸಿಕೊಂಡು ಬ್ಯಾಂಕ್‌ನ ಅಭಿವೃದ್ಧಿಗೆ ಸಹಕರಿಸಬೇಕು’ ಎಂದು ಮನವಿ ಮಾಡಿದರು.
ನಿರ್ದೇಶಕರಾದ ಎಚ್. ಟಿ. ಮಂಜುನಾಥ್, ಎಂ.ಎಂ. ವಿಶ್ವನಾಥ್, ಹೊಯ್ಸಳ, ಕರಿಗೌಡ, ಬಿ.ಪಿ. ಮಂಜುನಾಥ್, ಸ್ವಾಮಿ ಗೌಡ, ಕೆ. ವಿ. ಸುದೀಪ್ ಕುಮಾರ್, ಎಸ್. ವೈ. ರವಿಕುಮಾರ್, ಗೋಪಾಲ, ಕಮಲಮ್ಮ ,ಶೋಭಾ,ಯಶೋದ, ವ್ಯವಸ್ಥಾಪಕರಾದ ರೇವತಿ, . ಕ್ಷೇತ್ರ ಅಧಿಕಾರಿ ಕೃಷ್ಣಬೋಯಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.