ADVERTISEMENT

ಹಾಸನ | ಕಾನ್‌ಸ್ಟೆಬಲ್‌ ಸೇರಿ 7 ಜನರಿಗೆ ಕೋವಿಡ್‌-19: ಪೊಲೀಸ್‌ ಠಾಣೆ ಸೀಲ್‌ಡೌನ್‌

​ಪ್ರಜಾವಾಣಿ ವಾರ್ತೆ
Published 24 ಜೂನ್ 2020, 0:59 IST
Last Updated 24 ಜೂನ್ 2020, 0:59 IST
ಹಾಸನ ನಗರದ ಕೆ.ಆರ್‌. ಪುರಂ ಬಡಾವಣೆ ಪೊಲೀಸ್‌ ಠಾಣೆ ಸೀಲ್‌ಡೌನ್‌ ಮಾಡಲಾಗಿದೆ
ಹಾಸನ ನಗರದ ಕೆ.ಆರ್‌. ಪುರಂ ಬಡಾವಣೆ ಪೊಲೀಸ್‌ ಠಾಣೆ ಸೀಲ್‌ಡೌನ್‌ ಮಾಡಲಾಗಿದೆ   

ಹಾಸನ: ಪೊಲೀಸ್ ಕಾನ್‌ಸ್ಟೆಬ್ಲ್‌ ಸೇರಿದಂತೆ ಜಿಲ್ಲೆಯಲ್ಲಿ 7 ಜನರಿಗೆ ಕೊರೊನಾ ಪಾಸಿಟಿವ್‌ ಪತ್ತೆಯಾಗಿದ್ದು, ನಗರದ ಕೆ.ಆರ್‌. ಪುರಂ ಬಡಾವಣೆ ಪೊಲೀಸ್‌ ಠಾಣೆಯನ್ನು ಸೀಲ್‌ಡೌನ್‌ ಮಾಡಲಾಗಿದೆ.

ನಗರದ ಕೆ.ಆರ್‌.ಪುರಂ ಬಡಾವಣೆ ಪೊಲೀಸ್‌ ಠಾಣೆಯ 36 ವರ್ಷದ (ಪಿ 292) ಕಾನ್‌ಸ್ಟೆಬಲ್‌ಗೆ ಕೊರೊನಾ ಪಾಸಿಟಿವ್‌ ಪತ್ತೆಯಾಗಿದೆ. ಬೆಂಗಳೂರಿನಲ್ಲಿರುವ ತಮ್ಮ ಅಣ್ಣನ ಮನೆಗೆ ಗೃಹ ಪ್ರವೇಶಕ್ಕೆ ಹೋಗಿ ಮೂರು ದಿನ ಅಲ್ಲಿಯೇ ಉಳಿದಿದ್ದ ಅವರು ಜೂನ್ 16ರಂದು ಹಾಸನಕ್ಕೆ ಮರಳಿದ್ದರು. ಬಳಿಕ ಮೂರು ದಿನ ಠಾಣೆಯಲ್ಲಿ ಕೆಲಸ ಮಾಡಿದ್ದರು. ಮೂರು ದಿನಗಳ ಬಳಿಕ ಶೀತ, ಕೆಮ್ಮು ಕಾಣಿಸಿಕೊಂಡ ಹಿನ್ನೆಲೆ ಆಸ್ಪತ್ರೆಗೆ ಭೇಟಿ ನೀಡಿ ಗಂಟಲು ದ್ರವ ಮಾದರಿ ಪರೀಕ್ಷೆಗೆ ಕೊಟ್ಟಿದ್ದಾರೆ. ಮಂಗಳವಾರ ಪರೀಕ್ಷಾ ವರದಿ ಪಾಸಿಟಿವ್‌ ಬಂದಿದೆ.

ಪೊಲೀಸ್‌ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸುಮಾರು 30 ಜನ ಸಿಬ್ಬಂದಿಯನ್ನು ಕ್ವಾರಂಟೈನ್‌ ಮಾಡಿದ್ದು, ಎಲ್ಲರ ಗಂಟಲು ಮಾದರಿ ಪಡೆದು ಪರೀಕ್ಷೆಗೆ ಒಳಪಡಿಸಲಾಗಿದೆ. ಠಾಣೆಗೆ ಬಂದು ಹೋಗಿರುವ ಸಾರ್ವಜನಿಕರ ಪತ್ತೆ ಕಾರ್ಯ ನಡೆದಿದೆ. ಜೊತೆಗೆ ಪೊಲೀಸ್‌ ಕಾನ್‌ಸ್ಟೆಬಲ್‌ ಎಲ್ಲೆಲ್ಲಿ ಓಡಾಡಿದ್ದರು ಎಂಬ ಬಗ್ಗೆಯೂ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್‌ ಹೇಳಿದರು

ADVERTISEMENT

ಮುಂಬೈನಿಂದ ಬಂದಿದ್ದ ಚನ್ನರಾಯಪಟ್ಟಣದ 41 ವರ್ಷದ (ಪಿ 293) ಪುರುಷ, 29 ವರ್ಷದ (ಪಿ 294) ಮಹಿಳೆ, 9 ವರ್ಷದ (ಪಿ 295) ಬಾಲಕಿ, 6 ವರ್ಷದ (ಪಿ 296) ಬಾಲಕಿ, 44 ವರ್ಷದ (ಪಿ 298) ಪುರುಷನಿಗೆ ಹಾಗೂ ಬೆಂಗಳೂರಿಗೆ ಪ್ರಯಾಣ ಬೆಳೆಸಿದ ಚನ್ನರಾಯಪಟ್ಟಣದ 24 ವರ್ಷದ (ಪಿ 297) ಪುರುಷನಿಗೆ ಕೊರೊನಾ ಪಾಸಿಟಿವ್‌ ಪತ್ತೆಯಾಗಿದೆ. ಸೋಂಕಿತರನ್ನು ಕೋವಿಡ್‌ ಆಸ್ಪತ್ರೆಯ ಐಸೋಲೆಷನ್‌ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಕೋವಿಡ್‌ ಸೋಂಕಿತರ ಸಂಖ್ಯೆ 299ಕ್ಕೆ ಏರಿಕೆಯಾಗಿದ್ದು, ಈ ವರೆಗೆ 215 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ ಜಿಲ್ಲೆಯಲ್ಲಿ 83 ಸಕ್ರಿಯ ಪ್ರಕರಣಗಳಿದ್ದು, ಜಿಲ್ಲಾ ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.