ಚನ್ನರಾಯಪಟ್ಟಣ: ವಿದ್ಯುತ್ ಅಡಚಣೆ ಮತ್ತು ಅವಘಡ ತಪ್ಪಿಸಿ ಗುಣಮಟ್ಟದ ವಿದ್ಯುತ್ ಸರಬರಾಜು ಮಾಡುವ ಉದ್ದೇಶದಿಂದ ಪುರಸಭಾ ವ್ಯಾಪ್ತಿಯ 23 ವಾರ್ಡ್‍ಗಳಲ್ಲಿ ₹10 ಕೋಟಿ ವೆಚ್ಚದಲ್ಲಿ ಹೊಸ ವಿದ್ಯುತ್ ಕೇಬಲ್ ಅಳವಡಿಸಲಾಗುತ್ತಿದೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.
ಪಟ್ಟಣದ 7ನೇ ವಾರ್ಡ್‍ನಲ್ಲಿ ವಿದ್ಯುತ್ ಕೇಬಲ್ ಅಳವಡಿಸುವ ಕಾಮಗಾರಿಗೆ ಸೋಮವಾರ ಚಾಲನೆ ನೀಡಿ ಮಾತನಾಡಿದ ಅವರು, ‘ಪಟ್ಟಣದಲ್ಲಿರುವ ವಿದ್ಯುತ್ ಕೇಬಲ್ ಬದಲಾಯಿಸಿ ಗುಣಮಟ್ಟದ ವಿದ್ಯುತ್ ಕೇಬಲ್ ಅಳವಡಿಸಲಾಗುತ್ತಿದೆ. 60 ಕಿ.ಮೀ ಎಲ್‍ಟಿ ಕೇಬಲ್ ಮತ್ತು 80 ಕಿ.ಮೀ ಪವರ್ ಕಂಡಕ್ಟರ್‌ಗಳನ್ನು ಅಳವಡಿಸಲಾಗುತ್ತದೆ. ಇದರಿಂದ ಗಾಳಿ, ಮಳೆಯಲ್ಲೂ ನಿರಂತರ ವಿದ್ಯುತ್ ಪೂರೈಕೆ ಹಾಗೂ ನಿರ್ವಹಣೆ ಸುಲಭವಾಗಲಿದೆ. ಕಾಮಗಾರಿ 4 ತಿಂಗಳಲ್ಲಿ ಪೂರ್ಣಗೊಳ್ಳಲಿದ್ದು, ಪಟ್ಟಣದಲ್ಲಿ ಕಾಮಗಾರಿ ವೇಳೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸಬೇಕು’ ಎಂದರು.
‘ಚನ್ನರಾಯಪಟ್ಟಣ ವಿಸ್ತಾರವಾಗಿ ಬೆಳೆಯುತ್ತಿರುವುದರಿಂದ ವಿದ್ಯುತ್ ಇಲಾಖೆಗೆ ಸಲ್ಲಿಸಿದ ಪ್ರಸ್ತಾವಕ್ಕೆ ಇಂಧನ ಸಚಿವ ಕೆ.ಜೆ. ಜಾರ್ಜ್ ಅವಕಾಶ ಮಾಡಿಕೊಟ್ಟಿದ್ದಾರೆ. ಇದರೊಂದಿಗೆ ಪಟ್ಟಣಕ್ಕೆ ಅಂಡರ್ ಗ್ರೌಂಡ್ ಕೇಬಲ್ ಅಳವಡಿಕೆಗೆ ಮನವಿ ಮಾಡಿದ್ದು, ಮುಂದಿನ ವರ್ಷ ಅವಕಾಶ ಮಾಡಿಕೊಡುವುದಾಗಿ ಭರವಸೆ ನೀಡಿದ್ದಾರೆ. ಪ್ರಸಕ್ತ ವರ್ಷ ಶ್ರವಣಬೆಳಗೊಳಕ್ಕೆ ಅವಕಾಶ ಕಲ್ಪಿಸಿದ್ದು, ₹5 ಕೋಟಿ ವೆಚ್ಚದಲ್ಲಿ ಕಾಮಗಾರಿ ಪ್ರಾರಂಭವಾಗಲಿದೆ’ ಎಂದು ಹೇಳಿದರು.
ಪುರಸಭಾಧ್ಯಕ್ಷ ಸಿ.ಎನ್. ಮೋಹನ್, ಉಪಾಧ್ಯಕ್ಷೆ ಕವಿತಾ, ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಎ. ಗಣೇಶ್, ಪುರಸಭಾ ಸದಸ್ಯರಾದ ರಾಮಕೃಷ್ಣ, ಇಲಿಯಾಜ್, ಟಿಎಪಿಸಿಎಂಎಸ್ ಅಧ್ಯಕ್ಷ ಎಂ.ಆರ್. ಅನಿಲ್‍ಕುಮಾರ್, ಸೆಸ್ಕ್ ಕಾರ್ಯಪಾಲಕ ಎಂಜಿನಿಯರ್ ರತ್ನಾ, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕೃಷ್ಣ, ಹರೀಶ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.